ಕನ್ನಡಪ್ರಭ ವಾರ್ತೆ ಧಾರವಾಡ
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಮಾ.6ರ ಬುಧವಾರ ಬೆಳಗ್ಗೆ 8.30ಕ್ಕೆ ಧ್ವಜಾರೋಹಣ, 9ಕ್ಕೆ ಕನ್ನಡಕ್ಕಾಗಿ ನಡಿಗೆ ನಡೆಯಲಿದ್ದು, 10.30ಕ್ಕೆ ಹಿರಿಯ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಂದ ಉದ್ಘಾಟನೆ ನೆರವೇರಲಿದೆ ಎಂದರು.
ಎರಡು ದಿನಗಳ ಕಾಲ ವಿವಿಧ ಗೋಷ್ಠಿಗಳು ನಡೆಯಲಿದ್ದು, ಜಿಲ್ಲೆಯ ಖ್ಯಾತ ಸಾಹಿತಿಗಳು, ಬರಹಗಾರರು, ಚಿಂತಕರು, ಪತ್ರಕರ್ತರು ಭಾಗವಹಿಸಿ ತಮ್ಮ ಚಿಂತನೆಗಳನ್ನು ಹಂಚಿಕೊಳ್ಳಲಿದ್ದಾರೆ. ಮಾ. 6ರ ಬುಧವಾರ ಮಧ್ಯಾಹ್ನ 2ಕ್ಕೆ ಡಾ. ರಾಘವೇಂದ್ರ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಸಾಹಿತ್ಯ ಚಿಂತನೆ ನಡೆಯಲಿದ್ದು, ಸಾಹಿತ್ಯದಲ್ಲಿ ವೈಚಾರಿಕತೆ ಮತ್ತು ಸೃಜನಶೀಲತೆ ಕುರಿತು ಡಾ. ಅರವಿಂದ ಯಾಳಗಿ, ಜನಪದ ಸಾಹಿತ್ಯದಲ್ಲಿ ಬಂಡಾಯದ ನೆಲೆಗಳು ಕುರಿತು ಡಾ. ವೈ.ಎಂ. ಭಜಂತ್ರಿ ಮಾತನಾಡುತ್ತಾರೆ. ನಂತರ ಶ್ರೀನಿವಾಸ ವಾಡಪ್ಪಿ ಅಧ್ಯಕ್ಷತೆಯಲ್ಲಿ ಬೇಂದ್ರೆ ಸಾಹಿತ್ಯದ ಒಳನೋಟಗಳು ಗೋಷ್ಠಿಯಲ್ಲಿ ಬೇಂದ್ರೆ ಕಾವ್ಯದಲ್ಲಿ ಸಾಮಾಜಿಕ ಪ್ರಜ್ಞೆ ಕುರಿತು ಡಾ. ಕೆ.ಆರ್. ದುರ್ಗಾದಾಸ, ಬೇಂದ್ರೆ ಕಲಾಯೋಗ ಕುರಿತು ಸುರೇಶ ಕುಲಕರ್ಣಿ ಮಾತನಾಡುತ್ತಾರೆ. ಸಂಜೆ 5ಕ್ಕೆ ಡಾ. ರಾಜನ್ ದೇಶಪಾಂಡೆ ಅಧ್ಯಕ್ಷತೆಯಲ್ಲಿ ನಡೆಯುವ ಇಂದಿನ ಯುವಕರ ಹವ್ಯಾಸಗಳು-ವ್ಯಕ್ತಿತ್ವ ಗೋಷ್ಠಿಯಲ್ಲಿ ಡಾ. ಆನಂದ ಪಾಂಡುರಂಗಿ ಉಪನ್ಯಾಸ ನೀಡುವರು. ತದ ನಂತರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಡಾ. ಅಂಗಡಿ ತಿಳಿಸಿದರು.2ನೇ ದಿನದ ಗೋಷ್ಠಿಗಳು
ಮಧ್ಯಾಹ್ನ 3.30ಕ್ಕೆ ಸರ್ವಾಧ್ಯಕ್ಷರೊಂದಿಗೆ ಸಂವಾದದಲ್ಲಿ ಮೋಹನ ಲಿಂಬಿಕಾಯಿ, ಡಾ. ಶಿವಾನಂದ ಶೆಟ್ಟರ್, ಪ್ರಕಾಶ ಉಡಿಕೇರಿ, ಮೋಹನ ಸಿದ್ದಾಂತಿ, ವಿ.ಎಂ. ಶಿಲವಂತರ ಹಾಗೂ ಹಿರಿಯ ಪತ್ರಕರ್ತರಾದ ಮೋಹನ ಹೆಗಡೆ, ಮಲ್ಲಿಕಾರ್ಜು ಸಿದ್ದಣ್ಣವರ, ಬಂಡು ಕುಲಕರ್ಣಿ ಹಾಗೂ ರಾಹುಲ್ ಬೆಳಗಲಿ ಭಾಗವಹಿಸುತ್ತಾರೆ. ಸಂಜೆ 4.30ಕ್ಕೆ ಬಹಿರಂಗ ಸಭೆ ನಡೆಯಲಿದೆ. ನಂತರ ಸಮಾರೋಪ ಭಾಷಣ ಚಿಂತಕ ಡಾ. ಸಿದ್ದನಗೌಡ ಪಾಟೀಲ ಮಾಡಲಿದ್ದಾರೆ. ಎರಡು ದಿನಗಳ ಕಾಲ ಭಾಗವಹಿಸುವ ಪಿಯು ಕಾಲೇಜುಗಳ ಶಿಕ್ಷಕರು, ಸಿಬ್ಬಂದಿಗೆ ಅನ್ಯಕಾರ್ಯ ನಿಮಿತ್ತ ಮಂಜೂರಾತಿ ಮಾಡಲಾಗಿದೆ ಎಂದು ಡಾ. ಅಂಗಡಿ ತಿಳಿಸಿದರು.
ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರು ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಆಮಂತ್ರಣ ಬಿಡುಗಡೆ ಮಾಡಿದರು. ಮಹಾಂತೇಶ ನರೇಗಲ್, ಡಾ.ಜಿನದತ್ತ ಹಡಗಲಿ, ಡಾ.ಎಸ್.ಎಸ್. ದೊಡಮನಿ ಹಾಗೂ ಮಾರ್ತಾಂಡಪ್ಪ ಕತ್ತಿ ಇದ್ದರು.