ವಿದೇಶಿ ಮೂಲದ ನೇರಳೆ ಗೋಧಿ ಬೆಳೆದ ಧಾರವಾಡ ರೈತ!

KannadaprabhaNewsNetwork | Published : Mar 13, 2024 2:04 AM

ಸಾರಾಂಶ

ಭೀಕರ ಬರಗಾಲದ ಈ ಸಮಯದಲ್ಲಿ ಸಮೀಪದ ಕಣವಿ ಹೊನ್ನಾಪೂರದ ರೈತನೋರ್ವ ತನ್ನ ಜಮೀನಿನಲ್ಲಿ ಅಚ್ಚರಿ ಎನ್ನುವಂತೆ ವಿದೇಶದ ಗೋಧಿ ತಳಿಯೊಂದನ್ನು ಬೆಳೆದು ಯಶಸ್ವಿಯಾಗಿದ್ದಾರೆ.

ಬಸವರಾಜ ಹಿರೇಮಠ

ಧಾರವಾಡ:

ಭೀಕರ ಬರಗಾಲದ ಈ ಸಮಯದಲ್ಲಿ ಸಮೀಪದ ಕಣವಿ ಹೊನ್ನಾಪೂರದ ರೈತನೋರ್ವ ತನ್ನ ಜಮೀನಿನಲ್ಲಿ ಅಚ್ಚರಿ ಎನ್ನುವಂತೆ ವಿದೇಶದ ಗೋಧಿ ತಳಿಯೊಂದನ್ನು ಬೆಳೆದು ಯಶಸ್ವಿಯಾಗಿದ್ದಾರೆ.

ವೈಜ್ಞಾನಿಕವಾಗಿ ಪರ್ಪಲ್‌ ವೀಟ್‌ ಎಂದು ಕರೆಯಿಸಿಕೊಳ್ಳುವ, ಪೂರ್ವ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ದೇಶದಲ್ಲಿ ಬೆಳೆಯಲಾಗುವ ನೇರಳೆ ಗೋಧಿಯನ್ನು ಕೃಷಿಯಲ್ಲಿ ತುಂಬ ಆಸಕ್ತಿ ಹೊಂದಿದ ಮೃತ್ಯುಂಜಯ ವಸ್ತ್ರದ ಅವರ ಮಾರ್ಗದರ್ಶನದಲ್ಲಿ ರೈತ ಶಂಕರಗೌಡ ಪಾಟೀಲ ಬೆಳೆದು ಇತರೆ ರೈತರ ಗಮನ ಸೆಳೆದಿದ್ದಾರೆ.ಸಾಮಾನ್ಯವಾಗಿ ಆಯಾ ಬೆಳೆಗಳನ್ನು ಆಯಾ ಪ್ರದೇಶದಲ್ಲಿ ಮಾತ್ರ ಬೆಳೆಯಬೇಕು. ಅದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಮಣ್ಣು, ಹವಾಗುಣಕ್ಕೆ ತಕ್ಕಂತೆ ಬೆಳೆ ಬೆಳೆಯಲಾಗುತ್ತದೆ. ನೇರಳೆ ಗೋಧಿ ಈ ಪ್ರದೇಶದ ತಳಿಯೂ ಅಲ್ಲ. ಈ ಮಣ್ಣನಲ್ಲಿ ಬೆಳೆಯುವ ಬೆಳೆಯೂ ಅಲ್ಲ. ಇಷ್ಟಾಗಿಯೂ ಮೃತ್ಯುಂಜಯ ವಸ್ತ್ರದ ಅವರ ಪ್ರಯತ್ನದ ಫಲವಾಗಿ ವಿದೇಶದಲ್ಲಿ ಬೆಳೆಯುವ ಗೋಧಿ ಬೆಳೆದಿದ್ದು ವಿಶೇಷ.ವೃತ್ತಿಯಲ್ಲಿ ವಕೀಲ ಹಾಗೂ ಜೆಎಸ್ಸೆಸ್‌ ಕಾಲೇಜಿನಲ್ಲಿ ಉಪನ್ಯಾಸಕ ಆಗಿರುವ ಮೃತ್ಯುಂಜಯ ವಸ್ತ್ರದ ಮೂಲತಃ ಕೃಷಿಕರು. ಗದಗ ಜಿಲ್ಲೆಯ ಮೂಲದವರಾಗಿದ್ದು, ಹೊಸ ಹೊಸ ಬಗೆಯ ತಳಿ ಬೆಳೆಯವುದು ಅವರ ಹವ್ಯಾಸ. ಈ ಹಿಂದೆ ಕಪ್ಪು ಗೋಧಿ (buck wheat) ಹಾಗೂ ಸೋನಾಮಕಿ ಅಥವಾ ಪೈಗಂಬರ್ ಗೋಧಿ ಪ್ರಾಯೋಗಿಕ ಬೆಳೆದಿದ್ದು, ಇದೀಗ ನೇರಳೆ ಗೋಧಿಯನ್ನು ರೈತರ ಸಹಾಯದಿಂದ ಬೆಳೆದಿದ್ದಾರೆ.

ಭಾರತದಲ್ಲಿ ಕೆಲವು ಆಹಾರ ಸಂಶೋಧನೆ ತೊಡಗಿದ ಕೆಲವು ಸಂಸ್ಥೆಗಳಲ್ಲಿ ಪ್ರಾಯೋಗಿಕವಾಗಿ ಈ ಗೋಧಿ ಬೆಳೆಯಲಾಗಿದೆ. ಅವುಗಳಲ್ಲಿ ಒಂದಾದ ಪಂಜಾಬ್‌ ನ್ಯಾಷನಲ್ ಅಗ್ರೀಫುಡ್ ಬಯೋ ಟೆಕ್ನಾಲಜಿ ಇನ್ಸ್‌ಸ್ಟಿಟ್ಯೂಟ್‌ ಮೊಹಾಲಿಯ ವಿಜ್ಞಾನಿ ಡಾ. ಮೋನಿಕಾ ಪರ್ಪಲ್ ಗೋಧಿಯ ಬಗ್ಗೆ ಸಂಶೋಧನೆ ಮಾಡುತ್ತಿದ್ದಾರೆ. ಅವರನ್ನು ಸಂಪರ್ಕಿಸಿದ ಅವರು, ಬಿತ್ತನೆ ಬೀಜ ತರಿಸಿ ತಾಲೂಕಿನ ಕಣವಿ ಹೊನ್ನಾಪುರ ಗ್ರಾಮದ ಶಂಕರಗೌಡ ಪಾಟೀಲ್ ಅವರ ಸಹಕಾರದಲ್ಲಿ ಅರ್ಧ ಎಕರೆ ಜಮೀನಿನಲ್ಲಿ 5 ಕೆಜಿ ಬೀಜ ಬಿತ್ತನೆ ಮಾಡಿದ್ದರು. ಪ್ರಾಯೋಗಿಕವಾಗಿ ಬೆಳೆ ನಮ್ಮ ಹವಾಮಾನಕ್ಕೆ ಬರಬಹುದು ಅಥವಾ ಇಲ್ಲ ಅನ್ನುವ ಸಂಶಯವಿತ್ತು. ಬಿತ್ತನೆ ತಡವಾದರೂ ಕೊಳವೆ ಬಾವಿಯ ಕಡಿಮೆ ನೀರಿನಲ್ಲಿ ಬೆಳೆ ಚೆನ್ನಾಗಿ ಬಂದಿದೆ. ಪರ್ಪಲ್ ಬಣ್ಣದ ಗೋಧಿಗಳು ಹೊರ ಬಂದಿದ್ದನ್ನು ನೋಡಿ ನನ್ನ ಪ್ರಯತ್ನ ಸಫಲವಾಗಿದೆ ಎಂಬ ಸಮಾಧಾನ ಇದೆ ಎಂದು ವಸ್ತ್ರದ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು. ಈ ಗೋಧಿಯು ಆರೋಗ್ಯಕ್ಕೆ ಹೆಚ್ಚು ಲಾಭದಾಯಕವಾಗಿದೆ. ಸಾಮಾನ್ಯ ದಿನಬಳಕೆ ಗೋಧಿಗೂ ಈ ಗೋಧಿಗೂ ತುಂಬಾ ವ್ಯತ್ಯಾಸವಿದೆ. ಇದರಲ್ಲಿ ಸಾಕಷ್ಟು ಔಷಧಿ ಗುಣಗಳಿರುವುದು ಕಂಡು ಬಂದಿದೆ. ಹೆಚ್ಚು ಆ್ಯಂಟಿಆಕ್ಸಿಡೆಂಟ್ ಇರುವುದರಿಂದ ಈ ದಿನಮಾನದ ಹಲವಾರು ಕಾಯಿಲೆಗಳಿಗೆ ಔಷಧಿ ರೂಪದಲ್ಲಿ ಆಹಾರದಲ್ಲಿ ಉಪಯೋಗಿಸಬಹುದು. ಅದರಲ್ಲೂ ಹೃದಯದ ಕಾಯಿಲೆ ಮತ್ತು ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಹೆಚ್ಚಿಸಲು ಈ ಗೋಧಿಯು ಸಹಾಯಕ ಎಂದು ತಿಳಿದು ಬಂದಿರುವುದಾಗಿ ವಸ್ತ್ರದ ಮಾಹಿತಿ ನೀಡಿದರು.ಇನ್ನು, ಗೋಧಿ ಬೆಳೆದ ರೈತ ಶಂಕರಗೌಡ ಸಹ ಈ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದ್ದು, ಸಾಂಪ್ರದಾಯಿಕ ಬೆಳೆಗಳ ಜತೆಗೆ ಪ್ರಾಯೋಗಿಕವಾಗಿ ಬೇರೆ ಬೇರೆ ತಳಿ ಬೆಳೆದರೆ ಯಶಸ್ವಿ ಆಗಬಹುದು ಎಂಬುದು ನಮ್ಮ ಭೂಮಿಯಲ್ಲಿ ಸಾಬೀತಾಗಿದೆ. ಕೃಷಿ ಬಗ್ಗೆ ವೈಜ್ಞಾನಿಕವಾಗಿ ತಿಳಿದವರು ಇಂತಹ ಪ್ರಯತ್ನಗಳ ಮೂಲಕ ಉತ್ತಮ ಆರೋಗ್ಯ ಒದಗಿಸುವ ತಳಿಗಳನ್ನು ಬೆಳೆಯಲು ನಮಗೂ ಹುಮ್ಮಸ್ಸು ಬರಲಿದೆ ಎಂದರು.

ಈಗಾಗಲೇ ತಾವು ಪ್ರಾಯೋಗಿಕವಾಗಿ ಬೆಳೆದ ಗೋಧಿ ತಳಿಗಳನ್ನು ರೈತರು ಆಸಕ್ತಿಯಿಂದ ಬೀಜ ಪಡೆದು ಬೇರೆಡೆ ಬೆಳೆಯುತ್ತಿದ್ದಾರೆ. ನೇರಳೆ ಗೋಧಿ ವಿಶೇಷವಾಗಿ ಬ್ರೇಡ್‌ ಹಾಗೂ ಚಪಾತಿ ಮಾಡಲು ಉತ್ತಮ ತಳಿಯಾಗಿದೆ. ಸದ್ಯ ನಾವು ಬ್ರೆಡ್‌ನ್ನು ಮೈದಾ ಹಿಟ್ಟಿನಿಂದ ಮಾಡುತ್ತಿದ್ದು ಗೋಧಿ ಬ್ರೆಡ್‌ ಆರೋಗ್ಯಕ್ಕೆ ಉತ್ತಮ. ಈ ಹಿನ್ನೆಲೆಯಲ್ಲಿ ರೈತರು ಈ ತಳಿ ಬೆಳೆಯಲು ಮುಂದೆ ಬಂದರೆ ತಾವು ಮಾರ್ಗದರ್ಶನ ಮಾಡಲು ಸಿದ್ಧ ಎನ್ನುತ್ತಾರೆ ಮೃತ್ಯುಂಜಯ ವಸ್ತ್ರದ.

Share this article