ಹುಬ್ಬಳ್ಳಿ:
ಶಾಸಕರು, ಪಾಲಿಕೆ ಸದಸ್ಯರು, ಗಣ್ಯರು ಸೇರಿದಂತೆ ನಾನಾ ವಲಯಗಳ ಲಾಬಿ ಒತ್ತಡಗಳಿಂದ ಬರೋಬ್ಬರಿ 93 ಜನರಿಗೆ ಪ್ರಶಸ್ತಿ ಲಭಿಸಿದಂತಾಗಿದೆ. ಕಳೆದ ವರ್ಷ 68 ಜನರಿಗೆ ಸಾಧಕರಿಗೆ ಪ್ರಶಸ್ತಿ ನೀಡಲಾಗಿತ್ತು. ಈ ವರ್ಷ 69 ಜನರಿಗೆ ಕೊಡಲಾಗುವುದು ಎಂದು ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ ತಿಳಿಸಿದ್ದರು. ಆದರೆ ಬಿಡುಗಡೆಯಾದ ಪಟ್ಟಿಯಲ್ಲಿ 22 ಕ್ಷೇತ್ರದ 93 ಜನರಿಗೆ ಪ್ರಶಸ್ತಿ ಲಭಿಸಿರುವುದು ಒತ್ತಡಕ್ಕೆ ಸಾಕ್ಷಿಯಾದಂತಾಗಿದೆ.
ಸುವರ್ಣ ನ್ಯೂಸ್‌ನ ವರದಿಗಾರ ಗುರುರಾಜ ಹೂಗಾರ, ಪತ್ರಕರ್ತರಾದ ಅಬ್ಬಾಸ್ ಮುಲ್ಲಾ ಸೇರಿದಂತೆ 93 ಜನರಿಗೆ ಪ್ರಶಸ್ತಿ ನೀಡಲಾಗಿದೆ.ವಿಶೇಷ ಸಾಧಕರ ವಿಭಾಗದಲ್ಲಿ 18, ಬಾಲ ಪ್ರೋತ್ಸಾಹ ವಿಭಾಗದಲ್ಲಿ 6, ಸೇವಾ ಕ್ಷೇತ್ರ-9, ಸಂಶೋಧನಾ ಕ್ಷೇತ್ರ-3, ಎನ್‌ಜಿಒ-2, ವಿಶೇಷ ಚೇತನ-1, ಪತ್ರಿಕೋದ್ಯಮ-9, ಯೋಗ ಕ್ಷೇತ್ರ-1, ಕೈಗಾರಿಕೆ-3, ಶಿಕ್ಷಣ ವಿಭಾಗ- 4, ಕೃಷಿ-2, ಹಸಿರು ಪರಿಸರ-1, ಜಾನಪದ-5, ಚಿತ್ರಕಲಾ-2, ಸಂಗೀತ-4, ತಾಂತ್ರಿಕ -3, ನೃತ್ಯ-3, ರಂಗ ಕ್ಷೇತ್ರ-3, ವೈದ್ಯಕೀಯ-7, ಕ್ರೀಡಾ-2, ಸಾಹಿತ್ಯ-3 ಹಾಗೂ ಪೌರಕಾರ್ಮಿಕ ವಿಭಾಗದಲ್ಲಿ ಇಬ್ಬರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ ಅಧ್ಯಕ್ಷತೆಯಲ್ಲಿ ಈ ಆಯ್ಕೆ ನಡೆದಿದ್ದು, ಸನ್ಮಾನ ಸಮಿತಿಯ ಸದಸ್ಯರಾಗಿ ಉಪ ಮೇಯರ್ ದುರ್ಗಮ್ಮ ಬಿಜವಾಡ, ಪ್ರತಿಪಕ್ಷದ ನಾಯಕ ರಾಜಶೇಖರ ಕಮತಿ, ಪಾಲಿಕೆ ಸದಸ್ಯ ಶಿವು ಹಿರೇಮಠ, ಸಂತೋಷ ಚವ್ಹಾಣ, ದೀಪಾ ನೀರಲಕಟ್ಟಿ, ನಜೀರ ಅಹ್ಮದ್ ಹೊನ್ಯಾಳ ಹಾಗೂ ಪಾಲಿಕೆ ಆರೋಗ್ಯ ಅಧಿಕಾರಿ ಡಾ. ಶ್ರೀಧರ ದಂಡಪ್ಪನವರ ಸದಸ್ಯ ಕಾರ್ಯದರ್ಶಿಯಾಗಿ ಸಮಿತಿಯಲ್ಲಿದ್ದರು ಎಂದು ಪ್ರಕಟಣೆ ತಿಳಿಸಿದೆ.