ಧೀಮಂತ ಶ್ಯಾಮ್ ಪ್ರಸಾದ್ ರ ವ್ಯಕ್ತಿತ್ವ ಪ್ರೇರಣಾದಾಯಕ: ಶಾಸಕ ಎಚ್.ಕೆ.ಸುರೇಶ್

KannadaprabhaNewsNetwork | Published : Jul 7, 2024 1:23 AM

ಸಾರಾಂಶ

ಸ್ವತಂತ್ರ ಭಾರತದ ಮೊದಲ ಕೈಗಾರಿಕೆ ಮತ್ತು ಸರಬರಾಜು ಮಂತ್ರಿ ಮತ್ತು ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ.ಶ್ಯಾಮ ಪ್ರಸಾದ್ ಮುಖರ್ಜಿಯವರ ದೃಢ ಸಂಕಲ್ಪಗಳು, ಯಾವುದೇ ಸಂದರ್ಭದಲ್ಲೂ ಅಲ್ಲಾಡದೇ ಅಚಲವಾಗಿ ನಿಂತಿದ್ದವು. ರಾಷ್ಟ್ರೀಯತೆಯ ಪರವಾದ ಹೋರಾಟದಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದ ಅವರ ಆ ಮನೋಸ್ಥೈರ್ಯ ಹಾಗೂ ಅಂತಿಮವಾಗಿ ಅವರ ತ್ಯಾಗದ ಕುರಿತ ಇತಿಹಾಸವನ್ನು ಸಮಸ್ತ ಭಾರತೀಯರು ಅರಿತುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಬೇಲೂರು

ಧೀಮಂತ ವ್ಯಕ್ತಿತ್ವ ಹೊಂದಿದ್ದ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಅವರು ತಮ್ಮ ಜೀವನವನ್ನು ಭಾರತ ಮಾತೆಯ ಸೇವೆಗೆ ಸಮರ್ಪಿಸಿದ್ದು, ಮುಂದಿನ ಪೀಳಿಗೆಗೆ ಅವರ ಪ್ರಭಾವಶಾಲಿ ವ್ಯಕ್ತಿತ್ವ ಪ್ರೇರಣೆಯಾಗಲಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದ ರಸ್ತೆಯಲ್ಲಿ ಭಾರತೀಯ ಜನಸಂಘ ರಾಜಕೀಯ ಪಕ್ಷದ ಸ್ಥಾಪಕ ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವತಂತ್ರ ಭಾರತದ ಮೊದಲ ಕೈಗಾರಿಕೆ ಮತ್ತು ಸರಬರಾಜು ಮಂತ್ರಿ ಮತ್ತು ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ.ಶ್ಯಾಮ ಪ್ರಸಾದ್ ಮುಖರ್ಜಿಯವರ ದೃಢ ಸಂಕಲ್ಪಗಳು, ಯಾವುದೇ ಸಂದರ್ಭದಲ್ಲೂ ಅಲ್ಲಾಡದೇ ಅಚಲವಾಗಿ ನಿಂತಿದ್ದವು. ರಾಷ್ಟ್ರೀಯತೆಯ ಪರವಾದ ಹೋರಾಟದಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದ ಅವರ ಆ ಮನೋಸ್ಥೈರ್ಯ ಹಾಗೂ ಅಂತಿಮವಾಗಿ ಅವರ ತ್ಯಾಗದ ಕುರಿತ ಇತಿಹಾಸವನ್ನು ಸಮಸ್ತ ಭಾರತೀಯರು ಅರಿತುಕೊಳ್ಳಬೇಕು ಎಂದರು.

ಪರಿಶುದ್ಧವಾದ ಹಸಿರು ವಾತಾವರಣದಿಂದ ಆರೋಗ್ಯ ವೃದ್ಧಿಸುತ್ತದೆ. ಜನತೆಯು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವುದರ ಜತೆಗೆ ಪರಿಸರ ಸಂರಕ್ಷಣೆಗೆ ಮೊದಲ ಆದ್ಯತೆ ನೀಡುವ ಮೂಲಕ ಸಕಲ ಜೀವಿಗಳನ್ನು ಸಮನಾಗಿ ಕಾಣುವ ಮನಸ್ಥಿತಿಯನ್ನು ಬೆಳೆಸಿಕೊಂಡು ಪ್ರತಿಯೊಬ್ಬರೂ ವನ ಸಂಪತ್ತು ಹಾಗೂ ಪರಿಸರದ ಬಗ್ಗೆ ಪ್ರೀತಿ ಮತ್ತು ಕಾಳಜಿಯನ್ನು ಹೊಂದಿ, ಗಿಡಗಳನ್ನು ನೆಟ್ಟು ಬೆಳೆಸುವುದರಿಂದ ಸಸ್ಯ ಸಂಪತ್ತು ಅಭಿವೃದ್ಧಿಯಾಗುತ್ತದೆ. ಇದರಿಂದ ಕಾಲಕ್ಕೆ ತಕ್ಕಂತೆ ಮಳೆಯಾಗುತ್ತದೆ. ಪರಿಸರ ದೇಶದ ಅತಿ ದೊಡ್ಡ ಸಂಪತ್ತಾಗಿದೆ, ಆದ್ದರಿಂದ ನಾವೆಲ್ಲರೂ ಖಾಲಿ ಜಾಗಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸೋಣ ಎಂದರು.

ರಾಷ್ಟ್ರೀಯ ಈ ತೆಂಗು ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ಬಿಜೆಪಿ ಮುಖಂಡ ಬೆಣ್ಣೂರು ರೇಣುಕುಮಾರ್ ಮಾತನಾಡಿ, ಪರಿಸರ ಸ್ವಚ್ಛವಾಗಿದ್ದರೆ ನಾವು ಆರೋಗ್ಯವಾಗಿರುತ್ತೇವೆ. ವಿಶ್ವ ಪ್ರಸಿದ್ಧ ಪ್ರವಾಸಿತಾಣವಾಗಿ ಮಾಡಲು ಜನಪ್ರತಿನಿಧಿಗಳಾದ ನಾವು ಅಧಿಕಾರಿಗಳಿಗೆ ಸಹಕಾರ ನೀಡಿದಾಗ ಮಾತ್ರ ನಮ್ಮ ತಾಲೂಕು ಅಭಿವೃದ್ಧಿಯಾಗುತ್ತದೆ. ರಾಜ್ಯದಲ್ಲಿ ನಮ್ಮ ಸರ್ಕಾರ ಇಲ್ಲದಿದ್ದರೂ ಕೇಂದ್ರದಲ್ಲಿ ನಮ್ಮದೇ ಸರಕಾರ ಇದೆ. ಆದರೂ ನಮ್ಮ ಶಾಸಕರು ತಾಲೂಕಿನ ಅಭಿವೃದ್ಧಿಗಾಗಿ ಅನುದಾನ ತಂದು ಅಭಿವೃದ್ಧಿಪಡಿಸಲು ಮುಂದಾಗುತ್ತಿದ್ದು, ಬೇಲೂರು ಪಟ್ಟಣಕ್ಕೆ ಹೆಚ್ಚುವರಿಯಾಗಿ ಹೊಳೆಬೀದಿ ರಸ್ತೆಗೆ ಹಣ ತಂದಿದ್ದು ಅತಿ ಶೀಘ್ರದಲ್ಲೇ ಭೂಮಿ ಪೂಜೆಯನ್ನು ಮಾಡಲಾಗುವುದು ಎಂದರು.

ನಗರಾಧ್ಯಕ್ಷ ವಿನಯ್, ಪುರಸಭಾ ಮಾಜಿ ಅಧ್ಯಕ್ಷ ಎಚ್.ಎಂ. ದಯಾನಂದ್, ರೋಟರಿ ಕ್ಲಬ್ ಕಾರ್ಯದರ್ಶಿ ಬಿ.ಬಿ.ಶಿವರಾಜ್, ಪುರಸಭಾ ಮುಖ್ಯಾಧಿಕಾರಿ ಸುಜಯ್, ಆರೋಗ್ಯಾಧಿಕಾರಿ ಲೋಹಿತ್, ನಿಖಿಲ್ ಇದ್ದರು.

ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ: ಶಾಸಕ

ಪುರಸಭೆಯ ಬೀದಿಬದಿಯ ಅಂಗಡಿಗಳಿಂದ ಪಾದಚಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರಿಂದ ಅಂಗಡಿಗಳನ್ನು ತೆರವುಗೊಳಿಸಿ ಒಂದೇ ಸೂರಿನಡಿ ವ್ಯಾಪಾರ ಮಾಡಲು ಅನುಕೂಲವಾಗುವಂತೆ ಜಾಗವನ್ನು ನಿಗದಿಪಡಿಸಲಾಗಿದ್ದು, ಯಾವುದೇ ಕಾರಣಕ್ಕೂ ರಸ್ತೆ ಬದಿಯ ಗೂಡಂಗಡಿಗಳ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಮುಖ್ಯಾಧಿಕಾರಿಗಳಿಗೆ ಶಾಸಕ ಎಚ್. ಕೆ. ಸುರೇಶ್ ಸೂಚಿಸಿದರು.

Share this article