ಕನ್ನಡಪ್ರಭ ವಾರ್ತೆ ಕೊಪ್ಪಳ
ಡಯಾಲಿಸಿಸ್ ಸಿಬ್ಬಂದಿ ಬಾಕಿ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಡಯಾಲಿಸಿಸ್ ಕೇಂದ್ರಗಳು ಸ್ತಬ್ಧವಾಗಿವೆ. ಇದರಿಂದ ರೋಗಿಗಳು ಪರಾಡುವಂತಾಗಿದೆ.ಜಿಲ್ಲಾಸ್ಪತ್ರೆಯಲ್ಲಿ 9 ಡಯಾಲಿಸಿಸ್ ಯಂತ್ರಗಳಿವೆ. ಇವುಗಳಲ್ಲಿ ನಾಲ್ಕು ಯಂತ್ರಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ, ಇಲ್ಲಿ ಡಯಾಲಿಸಿಸ್‌ಗೆ ಬರುವ ರೋಗಿಗಳು ಪರದಾಡುತ್ತಿದ್ದಾರೆ. ಈಗ ಡಯಾಲಿಸಿಸ್ ಕೇಂದ್ರ ಬಂದ್ ಆಗಿರುವುದರಿಂದ ತೀವ್ರ ಸಮಸ್ಯೆಯಾಗಿದೆ. ರೋಗಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.ಜಿಲ್ಲೆಯಾದ್ಯಂತ ಸುಮಾರು 19 ಡಯಾಲಿಸಿಸ್ ಯಂತ್ರಗಳಿವೆ. ಬಹುತೇಕ ಯಂತ್ರಗಳು ಕಾರ್ಯ ನಿರ್ವಹಿಸುತ್ತಿಲ್ಲ. ಸಿಬ್ಬಂದಿ ಪ್ರತಿಭಟನೆಗೆ ತೆರಳಿದ್ದರಿಂದ ಆಸ್ಪತ್ರೆಗಳಲ್ಲಿ ತುರ್ತು ಸಂದರ್ಭಗಳಲ್ಲಿ ಮಾತ್ರ ಬೇರೆ ಸಿಬ್ಬಂದಿಯ ಸಹಕಾರದೊಂದಿಗೆ ಒಂದೆರಡು ಡಯಾಲಿಸಿಸ್ ಯಂತ್ರಗಳನ್ನು ನಡೆಸುತ್ತಿದ್ದಾರೆ.ಜಿಲ್ಲೆಯಲ್ಲಿ ಸುಮಾರು 65 ಡಯಾಲಿಸಿಸ್ ರೋಗಿಗಳು ಇದ್ದು, ಇವರು ಈಗ ಸಾಲಿನಲ್ಲಿ ನಿಂತು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾಗಿದ್ದರೂ ವಾರಕ್ಕೊಮ್ಮೆಯೂ ಅವಕಾಶ ಸಿಗುತ್ತಿಲ್ಲ ಎಂದು ರೋಗಿಗಳು ದೂರಿದ್ದಾರೆ.ಡಯಾಲಿಸಿಸ್ ಸರ್ಕಾರಿ ಆಸ್ಪತ್ರೆಯ ಕೇಂದ್ರಗಳಲ್ಲಿ ಸಾಲುಗಟ್ಟಿ ನಿಲ್ಲಬೇಕಿದೆ. ಇದರಿಂದಾಗಿ ರೋಗಿಗಳು ಖಾಸಗಿ ಕೇಂದ್ರಗಳ ಮೊರೆ ಹೋಗುತ್ತಿದ್ದಾರೆ. ಇದು ಬಡವರಿಗೆ ಆರ್ಥಿಕವಾಗಿ ಹೊರೆಯಾಗುವುದರಿಂದ ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ರೋಗಿಗಳು.ಬಡವರಿಗೆ ಪ್ರತಿ ಬಾರಿಯೂ ₹2 ಸಾವಿರ ವೆಚ್ಚ ಭರಿಸಿ ಡಯಾಲಿಸಿಸ್ ಮಾಡಿಸಿಕೊಳ್ಳಲು ತುಂಬ ಕಷ್ಟ. ಮಾಡಿಸಿಕೊಳ್ಳದಿದ್ದರೆ ಆರೋಗ್ಯ ಹಾಳಾಗುತ್ತದೆ. ಹೀಗಾಗಿ, ನಮಗೆ ವಾರಕ್ಕೆ ಮೂರು ಬಾರಿಯಾಗದಿದ್ದರೂ ಕೊನೆಪಕ್ಷ ಎರಡು ಬಾರಿಯಾದರೂ ಡಯಾಲಿಸಿಸ್‌ಗೆ ಅವಕಾಶ ಮಾಡಿಕೊಡಬೇಕು ಎಂದು ರೋಗಿಗಳು ಆಗ್ರಹಿಸಿದ್ದಾರೆ.ನಮಗೆ ಕನಿಷ್ಠ ಗೌರವಧನ ಕೊಡಲಾಗುತ್ತಿದೆ. ಅದನ್ನು ಪ್ರತಿ ತಿಂಗಳು ಪಾವತಿ ಮಾಡದಿದ್ದರೆ ಹೇಗೆ? ನಮ್ಮನ್ನು ಕಾಯಂ ಮಾಡಿಕೊಳ್ಳದಿದ್ದರೆ ನಾವು ಜೀವನ ನಡೆಸುವುದಾದರೂ ಹೇಗೆ? -ಹೆಸರು ಹೇಳಲಿಚ್ಚಿಸದ ಡಯಾಲಿಸಿಸ್ ಸಿಬ್ಬಂದಿಡಯಾಲಿಸಿಸ್ ಸಿಬ್ಬಂದಿ ಪ್ರತಿಭಟನೆ ಮಾಡುತ್ತಿರುವುದರಿಂದ ಡಯಾಲಿಸಿಸ್ ಕೇಂದ್ರಗಳಲ್ಲಿ ಸಮಸ್ಯೆಯಾಗಿರುವುದು ನಿಜ. ಆದರೂ ಪರ್ಯಾಯ ಸಿಬ್ಬಂದಿ ಬಳಕೆ ಮಾಡಿಕೊಂಡು ತುರ್ತಾಗಿ ಆಗಬೇಕಾದ ಡಯಾಲಿಸಿಸ್ ಚಿಕಿತ್ಸೆ ಮಾಡಲಾಗುತ್ತಿದೆ.-ಡಾ.ಲಿಂಗರಾಜ, ಡಿಎಚ್ಒ