ಸರ್ವಾಧಿಕಾರಿ ಧೋರಣೆ ಕೊನೆಯಾಗಬೇಕು: ಪ್ರಕಾಶ್‌ ರಾಜ್‌

KannadaprabhaNewsNetwork | Published : Mar 17, 2024 1:45 AM

ಸಾರಾಂಶ

ಬೇರೆಯವರ ಮಾತು ಕೇಳೋದಿಲ್ಲಾ, ಪ್ರೆಸ್ ಮೀಟ್ ಮಾಡೋದಿಲ್ಲ, ಯಾವುದೇ ಪ್ರಶ್ನೆಗೂ ಉತ್ತರಿಸುವ ಅವಶ್ಯಕತೆ ಇಲ್ಲ ಎನ್ನುವುದು ನಿಜವಾದ ಸರ್ವಾಧಿಕಾರ. ಇದು, ಈ ದೇಶದಲ್ಲಿ ನಡೆಯುತ್ತಿದೆ ಎಂದು ಚಲನಚಿತ್ರ ನಟ ಪ್ರಕಾಶ್ ರಾಜ್ ಹೇಳಿದರು.

ಯಾವುದೇ ಪ್ರಶ್ನೆಗೂ ಉತ್ತರಿಸುವ ಅವಶ್ಯಕತೆ ಇಲ್ಲ ಎನ್ನುವುದು ಸರ್ವಾಧಿಕಾರ । ಪ್ರೆಸ್‌ ಕ್ಲಬ್‌ನಲ್ಲಿ ತಿಂಗಳ ಅತಿಥಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ,ಚಿಕ್ಕಮಗಳೂರುಬೇರೆಯವರ ಮಾತು ಕೇಳೋದಿಲ್ಲಾ, ಪ್ರೆಸ್ ಮೀಟ್ ಮಾಡೋದಿಲ್ಲ, ಯಾವುದೇ ಪ್ರಶ್ನೆಗೂ ಉತ್ತರಿಸುವ ಅವಶ್ಯಕತೆ ಇಲ್ಲ ಎನ್ನುವುದು ನಿಜವಾದ ಸರ್ವಾಧಿಕಾರ. ಇದು, ಈ ದೇಶದಲ್ಲಿ ನಡೆಯುತ್ತಿದೆ ಎಂದು ಚಲನಚಿತ್ರ ನಟ ಪ್ರಕಾಶ್ ರಾಜ್ ಹೇಳಿದರು. ಚಿಕ್ಕಮಗಳೂರು ಪ್ರೆಸ್ ಕ್ಲಬ್ ಶನಿವಾರ ಏರ್ಪಡಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀರಿಗೆ, ಆಕಾಶಕ್ಕೆ ಧರ್ಮ ಇಲ್ಲ, ಹಾಗಾದರೆ ಒಂದು ಧರ್ಮದ ರಾಷ್ಟ್ರ ಮಾಡುತ್ತೇನೆಂದರೆ ಹೇಗೆ, ಇದು ಸರ್ವಾಧಿಕಾರ ಅಲ್ವಾ, ನಿಮ್ಮ ನಿಮ್ಮ ಧರ್ಮ ಪೂಜಿಸುವುದು ತಪ್ಪಲ್ಲ, ಆದರೆ, ಪಾರ್ಲಿಮೆಂಟ್‌ನಲ್ಲಿ ಪೂಜೆ ಮಾಡ್ತೀವಿ ಎಂದರೆ ತಪ್ಪು, ಈ ರೀತಿಯ ಸರ್ವಾಧಿಕಾರ ಕೊನೆಗೊಳ್ಳಬೇಕು ಎಂದು ಹೇಳಿದರು. ಸರ್ವಾಧಿಕಾರಿ ಧೋರಣೆ ಬದಲಾವಣೆಯಾಗುವ ವಿಶ್ವಾಸ ಇದೆ. ಕಾರಣ, ಈ ನೆಲದಲ್ಲಿ ಅಷ್ಟೂ ಅತೃಪ್ತಿ ಇದೆ. ಜನರು ಸಾರ್ವಜನಿಕವಾಗಿ ಮಾತನಾಡಲು ಆರಂಭಿಸಿದ್ದಾರೆ. ಒಂದೇ ಪಕ್ಷಕ್ಕೆ ಅಷ್ಟೂ ಬಹುಮತ ಸಿಗಲು ಸಾಧ್ಯವಿಲ್ಲ. ಅದ್ದರಿಂದಲೇ ಸಣ್ಣ ಸಣ್ಣ ಪ್ರಾದೇಶಿಕ ಪಕ್ಷಗಳನ್ನು ಒಡೆಯುವ, ಕೊಂಡುಕೊಳ್ಳುವ ಪ್ರವೃತ್ತಿ ನಡೆಯುತ್ತಿದೆ ಎಂದರು. ಲೋಕಸಭಾ ಚುನಾವಣೆಯಲ್ಲಿ 400 ಸಂಖ್ಯೆ ನಿರೀಕ್ಷಿಸುವವರು, 420 ಸಂಖ್ಯೆಯವರು ಮಾತನಾಡುತ್ತಾರೆ. ಅದು, ಯಾರೇ ಆಗಿರಲಿ, ಯಾವ ಪಕ್ಷದವರು ಆಗಿರಲಿ, ತಾನು ತೆಗೆದುಕೊಳ್ಳುತ್ತೇನೆಂಬುದು ಅಹಂಕಾರದ ಮಾತು ಎಂದರು. ಸರ್ವಾಧಿಕಾರಿ ನಾಳೆನೇ ಬದಲಾಗುತ್ತದೆ ಅಲ್ಲ, ಒಂದಲ್ಲಾ ಒಂದು ಸಲ ಬದಲಾಗುತ್ತೆ. ಆ ಸಹನೆ ಬೇಕು. ಆಗಾಗ ಬೆಲೆ ಏರಿಕೆ ಮಾಡೋದು, ಒಮ್ಮೆ ಬೆಲೆ ಇಳಿಸುವುದು. ಕ್ರೀಡಾಪಟುಗಳು ಗೆದ್ದು ಬಂದ್ರೆ ಸೆಲ್ಫಿ ತೆಗೆದುಕೊಳ್ಳುತ್ತಿರಿ, ಅವರಿಂದ ದೂರು ಹೇಳಿದಾಗ ಯಾಕೆ ತೆಗೆದುಕೊಳ್ಳುವುದಿಲ್ಲ. ಆ ವೈರುದ್ಧ ನಮಗೆ ಕಾಣಿಸುತ್ತಿದೆ. ಈ ರೀತಿಯನ್ನು ಜನ ಬಹುದಿನ ಗಳವರೆಗೆ ನೋಡಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಹೆಣ್ಣು ಮಕ್ಕಳಿಗೆ ಎಲ್ಲೋ ಕೋಪ ಇರಬಹುದಲ್ಲ, ಮಣಿಪುರಂ ಸೇರಿದಂತೆ ಹಲವು ಘಟನೆಗಳನ್ನು ನೋಡಿದ್ದಾರೆ ಎಂದು ಹೇಳಿದರು. ಪವರ್ ಎಂಬುದು ಮೇಲ್ಗಡೆ ಇರುವುದಲ್ಲ, ಆಡಳಿತ ನಡೆಸುವವರದ್ದು, ಅಲ್ಲ, ಆಡಳಿತ ನಡೆಸಲು ಆಯ್ಕೆ ಮಾಡಿದವರದ್ದು, ಅದು, ಈ ದೇಶದಲ್ಲಿ ಆಗಿಲ್ಲ. ಒಂದು ಪಕ್ಷವನ್ನು ಹತ್ತಿಸುವುದು, ಇಳಿಸುವುದಷ್ಟೇ ಸ್ವಾತಂತ್ರ್ಯಅಲ್ಲ, ಹೊಸ ನಾಯಕರು ಹುಟ್ಟಿಕೊಳ್ಳಲು ಸಾಧ್ಯವಾಗಬೇಕಾಗಿತ್ತು. ಪರಿವಾರ ರಾಜಕೀಯ, ಕುಟುಂಬ ರಾಜಕೀಯ, ಒಂದು ಪಕ್ಷದ ರಾಜಕೀಯ ನಡೆಯುತ್ತಿದೆ. ಯಾವ ರಾಜಕೀಯ ಪಕ್ಷಗಳು ಸ್ವಾತಂತ್ರ್ಯ ನಂತರ, ಯಾವ ರಾಜರ ಆಳ್ವಿಕೆಯಿಂದ ಹೊರಗೆ ಬಂದ್ವೋ ಈಗಲೂ ಆಳ್ವಿಕೆ ನಡೆಸುವವರೆಂದು ಮಾತನಾಡುತ್ತೇವೆ. ಅವರೇ ಪವರ್ ಎಂದು ನಡೆಯುತ್ತಿದ್ದೇವೆ ಎಂದು ಹೇಳಿದರು. ನಮ್ಮ ಮನೆಯ ಮುಂದೆ ಬಂದು ಒಂದು ವೋಟ್ ಬೇಡಿ ತೆಗೆದುಕೊಳ್ಳುವವರ ಎದುರು ನಾವು ಬೇಡಿಕೊಳ್ಳುತ್ತಿದ್ದೇವೆ. ಈ ದೇಶದ ಪ್ರಜಾಪ್ರಭುತ್ವ ಒಬ್ಬ ಮತದಾರನ ಜವಾಬ್ದಾರಿ ಅವನ ಕ್ಷೇತ್ರದ ಅವನ ನಿಯೋಜಿತ ವರ್ಗದ ಪ್ರತಿನಿಧಿಯನ್ನು ಆಯ್ಕೆ ಮಾಡುವುದಷ್ಟೇ. ಆದರೆ, ನಾವು ಯಾರು ಮುಖ್ಯಮಂತ್ರಿಯಾಗಬೇಕು, ಯಾರು ಪ್ರಧಾನಮಂತ್ರಿಯಾಗಬೇಕು ಎನ್ನುವ ನಿಟ್ಟಿನಲ್ಲಿ ವೋಟ್ ಮಾಡುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

ರಾಜಕೀಯ ನಾಯಕರು ಹೊಸಬರನ್ನು ಬರಲು ಬಿಡುತ್ತಿಲ್ಲ. ವೈದ್ಯಕೀಯ ಬಗ್ಗೆ ಗೊತ್ತಿಲ್ಲದವರು ಆರೋಗ್ಯಮಂತ್ರಿ ಯಾಗುತ್ತಿದ್ದಾರೆ. ಕೃಷಿ ಬಗ್ಗೆ ಗೊತ್ತಿಲ್ಲದೆ ಇರುವವರು ಕೃಷಿ ಮಂತ್ರಿಯಾಗುತ್ತಿದ್ದಾರೆ ಎಂದ ಅವರು, ಲಕ್ಷಾಂತರ ಜನರ ವೋಟ್ ತೆಗೆದುಕೊಂಡ ಒಬ್ಬ ಪ್ರತಿನಿಧಿ, ಇನ್ಯಾರಿಗೋ ಒಂದು ವೋಟ್ ಹಾಕಿ ಇವರನ್ನು ಮಾರಾಟ ಮಾಡುತ್ತಿದ್ದಾನೆ. ಇದನ್ನು ನೋಡಿಕೊಂಡಿ ಸುಮ್ಮನೆ ಕುಳಿತುಕೊಂಡಿದ್ದೇವೆ ಎಂದರು.

ನಾನು ಮಾತನಾಡಿದರೆ ಹಿಂದೂ ವಿರೋಧಿ ಎನ್ನುತ್ತಾರೆ. ನಾನು ಒಬ್ಬ ವ್ಯಕ್ತಿಯನ್ನು ಉದ್ದೇಶಿಸಿ ಮಾತನಾಡಿದರೆ, ಅದು, ಧರ್ಮದ ವಿರುದ್ಧ ಹೇಗೆ ಆಗುತ್ತದೆ ಎಂದ ಅವರು, ಜನರಿಗೆ ಕೆಲವೊಮ್ಮೆ ಅರ್ಥವಾಗುತ್ತದೆ. ತಡೆದುಕೊಳ್ಳಲು ಆಗದೆ ಇದ್ದಾಗ , ಸಿಡಿದೇಳುತ್ತಾರೆ. ಅದು, ನಮ್ಮ ಪರಂಪರೆ ಅಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಳುವ ಪಕ್ಷ ಸೋಲುತ್ತದೆ. ವಿರೋಧ ಪಕ್ಷ ಗೆಲ್ಲೋದಿಲ್ಲ. ನಿನ್ನ ಅಳ್ವಿಕೆ ಸರಿ ಇಲ್ಲ ಎಂದು ಕೆಳಗೆ ಇಳಿಸುತ್ತಾರೆ ಎಂದರು. ಕಾರ್ಯಕ್ರಮದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಪಿ. ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಆರ್. ತಾರಾನಾಥ್ ಉಪಸ್ಥಿತರಿದ್ದರು. ಖಜಾಂಚಿ ಗೋಪಿ ಸ್ವಾಗತಿಸಿ, ವಂದಿಸಿದರು.

16 ಕೆಸಿಕೆಎಂ 1 ಚಿಕ್ಕಮಗಳೂರು ಪ್ರೆಸ್ ಕ್ಲಬ್‌ನಲ್ಲಿ ಶನಿವಾರ ನಡೆದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಪ್ರಕಾಶ್ ರಾಜ್ ಅವರು ಮಾತನಾಡಿದರು. ಅಧ್ಯಕ್ಷ ಪಿ. ರಾಜೇಶ್, ಪ್ರಧಾನ ಕಾರ್ಯದರ್ಶಿ ಆರ್. ತಾರಾನಾಥ್ ಇದ್ದರು.

Share this article