- ಕೆಮಿಕಲ್ ತ್ಯಾಜ್ಯ ಕಂಪನಿಗಳಲ್ಲಿ ಕಾರ್ಮಿಕರ ಹೀನಾಯ ಬದುಕು । ಅಸ್ಸಾಂ ಮೂಲದ ಕಾರ್ಮಿಕನಿಗೆ ರಾಸಾಯನಿಕ ಪುಡಿ ಬಿದ್ದು ಕೈ-ಬೆರಳುಗಳಿಗೆ ಗಾಯ
- ಕಡಮೆ ದುಡ್ಡಿನಲ್ಲಿ ಹೆಚ್ಚಿನ ಕೆಲಸ ಮಾಡಿಸಿಕೊಳ್ಳುವ ಕಂಪನಿಗಳು- ಕನ್ನಡಪ್ರಭ ಸರಣಿ ವರದಿ ಭಾಗ : 44
ಆನಂದ ಬಿ ಸೌದಿಕನ್ನಡಪ್ರಭ ವಾರ್ತೆ ಯಾದಗಿರಿ
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಅಸ್ಸಾಂ ಮೂಲಕ 20 ವರ್ಷ ವಯಸ್ಸಿನ ಫಯಾಜ್ ಎಂಬ ಕಾರ್ಮಿಕನೊಬ್ಬನ ದುಸ್ಥಿತಿಯಿದು. ಎರಡು ದಿನಗಳ ಹಿಂದಷ್ಟೇ ರಾಸಾಯನಿಕ ಪುಡಿ ಕೈಗೆ ತಗುಲಿ ಆತನ ಕೈಬೆರಳಿಗೆ ಗಂಭೀರ ಗಾಯಗಳಾಗಿವೆ. ಚಿಕಿತ್ಸೆಗೆ ಪರದಾಡುತ್ತಿರುವ ಈತನ ಸ್ಥಿತಿಗತಿ ದೇವರೇ ಬಲ್ಲ. ಈ ಮಾಹಿತಿ ಬಹಿರಂಗಗೊಂಡಿದ್ದರಿಂದ ಕಂಪನಿಯ ಸಂಬಂಧಿತರು, ಈ ಬಗ್ಗೆ ಯಾರಿಗೂ ಏನೂ ಹೇಳದಂತೆ ಕಾರ್ಮಿಕನಿಗೆ ಸೂಚಿಸಿ, ಆತನನ್ನು ತೆಲಂಗಾಣದ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದಿದ್ದಾರೆನ್ನಲಾಗಿದೆ. ಇದಕ್ಕೂ ಮುನ್ನ, ತನಗಾದ ನೋವನ್ನು ಈ ಕಾರ್ಮಿಕ ಆಟೋ ಚಾಲಕರೊಬ್ಬರಿಗೆ ತಿಳಿಸಿದಾಗ, ಅವರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಇಂತಹ ಅನೇಕ ಪ್ರಕರಣಗಳು ಅಲ್ಲಿ ಅನೇಕ ಬಾರಿ ನಡೆದಿವೆ ಹಾಗೂ ನಡೆಯುತ್ತಲೂ ಇವೆ. ಸದ್ದಿಲ್ಲದೆ ಕಾರ್ಮಿಕರು ಮೃತಪಟ್ಟ ಘಟನೆಗಳೂ ನಡೆದಿವೆ. ಆದರೆ, ಕಾರ್ಮಿಕರಿಗೆ ಅಥವಾ ಕುಟುಂಬಕ್ಕೆ ಅಥವಾ ಇವೆಲ್ಲವನ್ನೂ ಹೊರಗಡೆಯೇ ಬಗೆಹರಿಸಿಕೊಳ್ಳುವಂತೆ ಕಾರ್ಮಿಕರ ಕರೆ ತರುವ ದಲ್ಲಾಳಿಗಳಿಗೆ/ಗುತ್ತಿಗೆದಾರರಿಗೆ ದುಡ್ಡು ಚೆಲ್ಲುವ ಕಂಪನಿಗಳ ಮುಖ್ಯಸ್ಥರು, ಎಲ್ಲವೂ ಚೆನ್ನಾಗಿಯೇ ನಡೆದಿವೆ ಎಂದೇ ಬಿಂಬಿಸುತ್ತಾರೆ.
ಈ ಭಾಗದ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಸ್ಥಿತಿಗತಿ ಬಗ್ಗೆ ಅರಿಯಬೇಕಾದ ಜಿಲ್ಲೆಯ ಕಾರ್ಮಿಕ ಇಲಾಖೆ ಕಣ್ಮುಚ್ಚಿದಂತಿದೆ. ಕಾರ್ಮಿಕರ ಸುಳ್ಳು ಲೆಕ್ಕ ತೋರಿಸುವ ಕಂಪನಿಗಳ ಜೊತೆ ಕಾರ್ಮಿಕ ಇಲಾಖೆಯೂ ಕೈಜೋಡಿಸಿದಂತಿದೆ. ಸಾವು-ನೋವುಗಳ ಇಂತಹ ಗಂಭೀರ ಪ್ರಕರಣಗಳ ಬಗ್ಗೆ ಅರಿವಿದ್ದೂ, ಬಾಯ್ಮುಚ್ಚಿಕೊಂಡಿರುವ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಬರುವ ಸಂಬಳಕ್ಕೆ ಒಂದಿಷ್ಟಾದರೂ ನೀಯತ್ತು ತೋರಿಸಬೇಕಿದೆ ಅಂತಾರೆ ಇಲ್ಲಿನ ಜನ.ಈ ಮಧ್ಯೆ, ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ಜನರ ನೋವು ಆಲಿಸಲು ಈ ಭಾಗದ ಮಠ ಮಾನ್ಯಗಳು ಒಲವು ತೋರಿರುವುದು ಭಕ್ತವಲಯದಲ್ಲಿ ತುಸು ನೆಮ್ಮದಿ ಮೂಡಿಸಿದೆ. ಕೆಮಿಕಲ್ ತ್ಯಾಜ್ಯ ಕಂಪನಿಗಳಿಂದ ಹೊರಹೊಮ್ಮುತ್ತಿರುವ ವಿಷಗಾಳಿ- ದುರ್ನಾತದಿಂದಾಗಿ ಅಸಹನೀಯ ಬದುಕು ಸಾಗಿಸುತ್ತಿರುವ ಈ ಭಾಗದ ಹತ್ತಾರು ಹಳ್ಳಿಗಳಲ್ಲಿ ಇಲ್ಲಿನ ಪ್ರಮುಖ ಮಠಾಧೀಶರು ಪಾದಯಾತ್ರೆ ಹಮ್ಮಿಕೊಂಡಿದ್ದು, ಈ ಮೂಲಕ, ಇಲ್ಲಿನವರ ನೋವು-ನಲಿವುಗಳಿಗೆ ಸ್ಪಂದಿಸುವಂತೆ ಸರ್ಕಾರಕ್ಕೆ ಕಿವಿ ಹಿಂಡಲಿದ್ದಾರೆ. ಚುನಾವಣೆಗಳ ಸಂದರ್ಭದಲ್ಲಿ ಮಾತ್ರ ಮಠ ಮಾನ್ಯಗಳಿಗೆ ಭೇಟಿ ಕೊಡುವುದಲ್ಲ, ನಂತರವೂ ಜನರ ಸಂಕಷ್ಟ ಆಲಿಸಲು ಪಕ್ಷಾತೀತ ರಾಜಕಾರಣದ ಅವಶ್ಯಕತೆ ಇರಬೇಕು ಎಂಬ ಬಗ್ಗೆ ಮಠಾಧೀಶರು ಹೆಜ್ಜೆ ಇಡುತ್ತಿರುವುದು ಸಕಾಲಿಕ ಎನ್ನಲಾಗುತ್ತಿದೆ.
-ಕೋಟ್- 1: ನಮ್ಮ ಈ ಪ್ರದೇಶದಲ್ಲಿ ಸ್ಥಾಪಿತವಾಗಿರುವ ರಾಸಾಯನಿಕ ಮತು ಘನತ್ಯಾಜ್ಯ ವಿಲೆವಾರಿ ಘಟಕಗಳಿಂದಾಗಿ ಮಕ್ಕಳಲ್ಲಿ ಚರ್ಮ ತುರಿಕೆ, ಕಣ್ಣಿನ ತೊಂದರೆ, ವೃದ್ಧರಿಗೆ ಉಸಿರಾಟದ ತೊಂದರೆ ಹಾಗೂ ಮಹಿಳೆಯರ ಮೇಲೆ ಅನೇಕ ತೊಂದರೆಗಳು ಆಗುತ್ತಿವೆ. ನಮ್ಮ ಕಲ್ಯಾಣ ಕರ್ನಾಟಕದ ಅತಿ ಹಿಂದುಳಿದ ಜಲ್ಲೆಯಲ್ಲಿ ಇಂತಹ ಕೈಗಾರಿಕೆಗಳಿಗೆ ಸರ್ಕಾರವು ಅನುಮತಿ ನೀಡಿ ಮತ್ತಷ್ಟೂ ಆರೋಗ್ಯದ ಸಮಸ್ಯೆಯನ್ನುಂಟು ಮಾಡುವುದಲ್ಲದೆ, ಹಿಂದಕ್ಕೆ ತಳ್ಳುತ್ತಿರುವುದು ಅತ್ಯಂತ ಖಂಡನೀಯವಾಗಿದೆ. ಈ ಭಾಗದ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಒಂದುಗೂಡಿ ಅತಿ ಶೀಘ್ರದಲ್ಲಿಯೇ ಈ ಕಂಪನಿಗಳನ್ನು ಬಂದ್ ಮಾಡಿ ಇಲ್ಲಿನ ಜನರ ಪ್ರಾಣ ಉಳಿಸುವುದಕ್ಕೆ ಮುಂದಾಗಬೇಕು. : ಕೃಷ್ಣಯ್ಯ ಗುಜ್ಜ, ಸೈದಾಪುರ. (21ವೈಡಿಆರ್12)-
ಕೋಟ್- 2 : ಈ ಕೈಗಾರಿಕಾ ಪ್ರದೇಶದಲ್ಲಿ ದಿನಕ್ಕೊಂದಾರೂ ಅವಘಡ ಸಂಭವಿಸುತ್ತಿರುತ್ತವೆ. ಇದರಲ್ಲಿ ಅನೇಕ ಕಾರ್ಮಿಕರಿಗೆ ನನ್ನ ಅಟೋದಲ್ಲಿ ಆಸ್ಪತ್ರೆಗೆ ಸಾಗಿಸಿದ್ದೇನೆ. ಅದರಲ್ಲಿ ಉತ್ತರ ಭಾರತದ ಕಾರ್ಮಿಕರೇ ಹೆಚ್ಚಾಗಿದ್ದಾರೆ. ನೀವು ಯಾವ ಯಾವ ಕಂಪನಿ ಕೆಲಸ ಮಾಡುತ್ತೀರಿ ಮತ್ತು ಏನಾಗಿದೆ ಎಂದು ಕೇಳಿದರೆ ಅವರು ಹೇಳ್ತಾರೆ, "ನಮ್ಮ ಮೇಸ್ತ್ರೀ ಸ್ಥಳೀಯರ ಜೊತೆ ಯಾವುದೇ ಮಾಹಿತಿ ಹಂಚಿಕೊಳ್ಳಬಾರದು ಅಂತ..! ". ಇದೆಲ್ಲ ನೋಡಿದರೆ, ಇಲ್ಲಿನ ದುಡಿಯುವ ಕಾರ್ಮಿಕರಿಗೆ ಜೀವಕ್ಕೆ ಬೆಲೆ ಇಲ್ಲವೇ ? ಅದಕ್ಕೆ ಇಲ್ಲಿನ ಅಧಿಕಾರಿಗಳು ಕಾರ್ಮಿಕರ ಹಿತ ಕಾಪಾಡಲು ಮುಂದಾಗಬೇಕು. : ಸೂಗಪ್ಪ ಮುನಗಾಲ್, ಅಟೋ ಚಾಲಕ ಕಡೇಚೂರು. (21ವೈಡಿಆರ್13)-
ಕೋಟ್- 3 : ಈ ಭಾಗದಲ್ಲಿ ಉತ್ತಮ ಮತ್ತು ಉನ್ನತ ಕೈಗಾರಿಕೆಗಳು ಸ್ಥಾಪನೆಯಾಗುವುದರಿಂದ ನಮ್ಮ ಭಾಗ ಅಭಿವೃದ್ಧಿಯಾಗುತ್ತದೆ, ಇಲ್ಲಿನ ನಿರೋದ್ಯೋಗಿ ಯುವಕರಿಗೆ ಉದ್ಯೋಗ ದೊರೆಯುತ್ತದೆ, ಇಲ್ಲಿನ ಜನ ಗುಳೆ ಹೋಗುವುದನ್ನು ಬಿಟ್ಟು ಇಲ್ಲೇ ದುಡಿದು ತಂದೆ-ತಾಯಿಯನ್ನು ನೋಡಿಕೊಂಡು ಜೀವನ ಸಾಗಿಸುತ್ತಾರೆ ಎಂದು ಕನಸು ಕಂಡಿದ್ದೆವು. ಆದರೆ, ಅದೆಲ್ಲವೂ ಹಗಲಗನಸು ಕಂಡಂತಾಗಿದೆ. ಉದ್ಯೋಗ ನೀಡದಿದ್ದರೂ ಪರವಾಗಿಲ್ಲ, ವಿಷಕಾರಿ ಕಂಪನಿಗಳನ್ನು ಬಂದ್ ಮಾಡಿ, ಜನರ ಜೀವ ರಕ್ಷಿಸಿ. : ಕಮಲಾ ಎಂ. ಕುಲಕರ್ಣಿ, ಸೈದಾಪುರ. (21ವೈಡಿಆರ್14)ಕೋಟ್- 4 : ಕಡೇಚೂರು-ಬಾಡಿಯಾಲ ಕೈಗಾರಿಕೆ ಪ್ರದೇಶಕ್ಕೆ ಅಂಟಿಕೊಂಡಿರುವ, ತೆಲಂಗಾಣದ ನಮ್ಮ ಚೇಗುಂಟಾ ಗ್ರಾಮದಲ್ಲಿ ಜನರು ರಾತ್ರಿ ಮತ್ತು ಬೆಳಗ್ಗಿನ ಜಾವದಲ್ಲಿ ಮೂಗಿಗೆ ಬಟ್ಟೆಕೊಟ್ಟಿಕೊಂಡು ಕಾಲ ಕಳೆಯುತ್ತಿದ್ದೇವೆ. ಹೊರಗಡೆ ನಿಲ್ಲಿಸಿರುವ ವಾಹನಗಳು, ಬಟ್ಟೆ ಮತ್ತು ದನಕರುಗಳ ಮೇಲೆ ಸಣ್ಣ -ಸಣ್ಣ ಹಳದಿ ಬಣ್ಣದ ಚುಕ್ಕೆಗಳು ಬಿದ್ದಿರುವುದು ಗಮನಿಸಿದ್ದೇವೆ. ಈ ಬಗ್ಗೆ ನಾವು ತೆಲಂಗಾಣ ರಾಜ್ಯ ಸರಕಾರಕ್ಕೆ ದೂರು ನೀಡಿದ್ದೇವೆ. ನಾವು ಗಡಿ ಕನ್ನಡಿಗರು, ನಮ್ಮ ಮಾತೃ ಭಾಷೆ ಕನ್ನಡವಾಗಿದೆ. ಆದರಿಂದ ಕರ್ನಾಟಕ ಸರಕಾರವು ನಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ಮನವಿ ಮಾಡುತ್ತೇವೆ. : ವಿಶ್ವನಾಥ ಪಾಟೀಲ್, ಚೇಗುಂಟಾ. (21ವೈಡಿಆರ್15)
-21ವೈಡಿಆರ್10 : ರಾಸಾಯನಿಕ ತಗುಲಿ ಆದ ಗಾಯ ತೋರಿಸುತ್ತಿರುವ ಆಸ್ಸಾಂ ಮೂಲದ ಕಾರ್ಮಿಕ
21ವೈಡಿಆರ್11 : ರಾಸಾಯನಿಕ ತಗುಲಿ ಬೆರಳುಗಳು ಊದಿಕೊಂಡಿರುವುದು.