ದಂತ ವೈದ್ಯ ಮಹಾವಿದ್ಯಾಲಯದಲ್ಲಿ ಡಿಜಿಟಲ್ ಚಿಕಿತ್ಸಾ ಸೌಲಭ್ಯ

KannadaprabhaNewsNetwork | Published : Mar 15, 2024 1:20 AM

ಸಾರಾಂಶ

₹25 ಲಕ್ಷ ಮೌಲ್ಯದ ಎಂಡೋ ಮೈಕ್ರೋಸ್ಕೋಪ್ ಯಂತ್ರ ದಂತ ರಕ್ಷಣಾ ವಿಭಾಗದಲ್ಲಿ ಹುಳುಕು ಹಲ್ಲಿನ ರೂಟ್ ಕೆನಾಲ್‌ನ ಪರಿಣಾಮಕಾರಿ ಚಿಕಿತ್ಸೆಗೆ ಬಳಸಲಾಗುವುದು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಗರದ ಬಿವಿವಿ ಸಂಘದ ಪಿ.ಎಂ.ನಾಡಗೌಡ ಸ್ಮಾರಕ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸುಲಭ ಮತ್ತು ಶೀಘ್ರ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಆಸ್ಪತ್ರೆಯ ಚಿಕಿತ್ಸಾ ಸೌಲಭ್ಯಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಈ ಸಂಬಂಧ ಐದು ಅತ್ಯಾಧುನಿಕ ಚಿಕಿತ್ಸಾ ಉಪಕರಣಗಳನ್ನು ಒಟ್ಟು ₹1.60 ಕೋಟಿ ವೆಚ್ಚದಲ್ಲಿ ಖರೀದಿಸಲಾಗಿದೆ.

₹25 ಲಕ್ಷ ಮೌಲ್ಯದ ಎಂಡೋ ಮೈಕ್ರೋಸ್ಕೋಪ್ ಯಂತ್ರ ದಂತ ರಕ್ಷಣಾ ವಿಭಾಗದಲ್ಲಿ ಹುಳುಕು ಹಲ್ಲಿನ ರೂಟ್ ಕೆನಾಲ್‌ನ ಪರಿಣಾಮಕಾರಿ ಚಿಕಿತ್ಸೆಗೆ ಬಳಸಲಾಗುವುದು. ನೂತನ ತಂತ್ರಜ್ಞಾನದ ಈ ಯಂತ್ರದಿಂದ ಸುಲಭವಾಗಿ ಚಿಕಿತ್ಸೆ ಮಾಡಲು ಸಾಧ್ಯವಾಗಲಿದೆ. ₹20 ಲಕ್ಷ ವೆಚ್ಚದಲ್ಲಿ ಖರೀದಿಸಲಾದ ಇಂಟ್ರಾ ಓರಲ್ ಸ್ಕ್ಯಾನರ್ ಯಂತ್ರ ಪ್ರೊಸ್ಥೊಡಾಂಟಿಕ್ಸ್ ವಿಭಾಗದಲ್ಲಿ ಬಾಯಿಯ ಸಂಪೂರ್ಣ ಡಿಜಿಟಲ್ ಸ್ಕ್ಯಾನ್ ಮಾಡಲು ಪ್ರಯೋಜನಕಾರಿಯಾಗಿದೆ. ಕ್ಷ - ಕಿರಣ ವಿಭಾಗದಲ್ಲಿ ಲಭ್ಯವಿರುವ ₹10 ಲಕ್ಷ ಮೌಲ್ಯದ ಆರ್‌ವಿಜಿ ಆ್ಯಂಡ್ ಒಪಿಜಿ ಯಂತ್ರವು ನೂತನ ತಂತ್ರಜ್ಞಾನದ ಕ್ಷ-ಕಿರಣ ಯಂತ್ರವಾಗಿದ್ದು, ಇದು ಬಾಯಿಯ ವಸಡು ಮತ್ತು ಹಲ್ಲುಗಳ ಕಾಯಿಲೆಗಳನ್ನು ಶೀಘ್ರ ಗುರುತಿಸಿ ಚಿಕಿತ್ಸೆಗೆ ಮಾಹಿತಿ ನೀಡುತ್ತದೆ.

₹5 ಲಕ್ಷ ವೆಚ್ಚದಲ್ಲಿ ಖರೀದಿಸಲಾದ ಲೇಜರ್ ಯಂತ್ರ ದಂತ ಕಾಯಿಲೆಯ ವಿವಿಧ ಶಸ್ತ್ರಚಿಕಿತ್ಸೆಗಳಿಗೆ ಬಹುಪಯೋಗಿಯಾಗಿದೆ. ಇವುಗಳ ಜೊತೆಗೆ ಸುಮಾರು ₹1ಕೋಟಿ ವೆಚ್ಚದಲ್ಲಿ ಖರೀದಿಸಲಾದ ಸಿಬಿಸಿಟಿ ಯಂತ್ರ ಅತೀ ಶೀಘ್ರದಲ್ಲಿ ಆಸ್ಪತ್ರೆಗೆ ಬರಲಿದ್ದು, ದಂತ ಕ್ಷೇತ್ರದಲ್ಲಿ ಇದೊಂದು ಅತ್ಯಾಧುನಿಕ ಕ್ಷ-ಕಿರಣ ಯಂತ್ರವಾಗಿದೆ. ಈ ಯಂತ್ರದ ಸಹಾಯದಿಂದ 3ಡಿ ಆಯಾಮದಲ್ಲಿ ಸಂಪೂರ್ಣವಾಗಿ ಬಾಯಿಯ ಚಿತ್ರವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ದಂತ ವೈದ್ಯರು ಪರಿಣಾಮಕಾರಿ ಚಿಕಿತ್ಸೆ ನೀಡಲು ಇದು ಅನುಕೂಲಕರ. ಈ ಎಲ್ಲ ಆಧುನಿಕ ಯಂತ್ರಗಳು ಪಿಎಂಎನ್ಎಂ ದಂತ ಆಸ್ಪತ್ರೆಯಲ್ಲಿ ಲಭ್ಯವಿದ್ದು, ಬಾಗಲಕೋಟೆ ಜಿಲ್ಲೆಯ ಎಲ್ಲ ದಂತ ವೈದ್ಯರು ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಶೀಘ್ರದಲ್ಲೇ ಸುಪರ್‌ ಸ್ಪೆಷಾಲಿಟಿ ದಂತ ಚಿಕಿತ್ಸಾ ವಿಭಾಗ ಆರಂಭವಾಗಲಿದೆ. ₹50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಸುಪರ್‌ ಸ್ಪೆಷಾಲಿಟಿ ವಿಭಾಗದಲ್ಲಿ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುವುದು. ಈ ಎಲ್ಲ ಸೌಲಭ್ಯಗಳ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ.ಎಂ.ಸಜ್ಜನ(ಬೇವೂರ) ಮತ್ತು ಪ್ರಾಚಾರ್ಯ ಡಾ.ಶ್ರೀನಿವಾಸ ವನಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article