ಕನ್ನಡಪ್ರಭ ವಾರ್ತೆ ಮೈಸೂರು
ರಾಜಧಾನಿ ಬೆಂಗಳೂರು ನಂತರ ಎರಡನೇ ಮಹಾನಗರ ಎಂಬ ಕೀರ್ತಿಗೆ ಭಾಜನವಾಗಿರುವ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ರಾಜಮಹಾರಾಜರು ನಿರ್ಮಿಸಿರುವ ಅನೇಕ ಪಾರಂಪರಿಕ ಕಟ್ಟಡಗಳಿವೆ. ಅವುಗಳನ್ನು ವಿವಿಧ ಇಲಾಖೆಗಳಿಗೆ ನೀಡಲಾಗಿತ್ತು. ಆದರೆ ಸೂಕ್ತ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆಯಲ್ಲಿವೆ. ಬಿದ್ದು ಹೋಗಿರುವ ಲ್ಯಾನ್ಸ್ ಡೌನ್ ಕಟ್ಟಡ, ದೇವರಾಜ ಮಾರುಕಟ್ಟೆ, ಫೇರ್ ಬಿರ್ಗೇಡ್ ಮುಂತಾದ ಕಟ್ಟಡಗಳಿಗೆ ದಶಕ ಸಂದರು ಕಾಯಕಲ್ಪ ಭಾಗ್ಯ ದೊರಕಿಲ್ಲ ಎಂದು ತಿಳಿಸಿದ್ದಾರೆ.
ವಿಶ್ವದ ಪ್ರಸಿದ್ಧ ಪ್ರವಾಸಿ ತಾಣಗಳು ಮೈಸೂರಿನ ಸುತ್ತಮುತ್ತ ಇವೆ. ಜಗತ್ತಿನ ನಾನು ಭಾಗಗಳಿಂದ ಪ್ರವಾಸಿಗರು ಪ್ರತಿದಿನ ಭೇಟಿ ನೀಡುತ್ತಾರೆ. ಆದರೆ ಅವರು ಒಂದೇ ದಿನಕ್ಕೆ ಹಿಂತಿರುಗುತ್ತಿದ್ದಾರೆ. ಬೆಟ್ಟ, ನದಿ, ಅರಣ್ಯ ಮುಂತಾದ ಪ್ರಾಕೃತಿಕ ಸಂಪತ್ತು ನಮ್ಮ ಜಿಲ್ಲೆಯಲ್ಲಿದೆ. ಅದನ್ನು ಸದುಪಯೋಗ ಪಡಿಸಿಕೊಂಡು ಮೈಸೂರು ಪ್ರವಾಸಿ ವೃತ್ತವನ್ನು (ಟೂರಿಸ್ಟ್ ಸರ್ಕ್ಯೂಟ್) ನಿರ್ಮಿಸಬೇಕಿದೆ. ಇದರಿಂದ ಪ್ರವಾಸಿಗರು ಕನಿಷ್ಠ ಮೂರು ದಿನವಾದರು ಉಳಿಯುವ ಸಾಧ್ಯತೆ ಇದೆ. ಪರಿಣಾಮ ವ್ಯಾಪಾರ ವಹಿವಾಟು ಹೆಚ್ಚಾಗಿ ಆದಾಯ ಜತೆಗೆ ಅಭಿವೃದ್ಧಿ ಸಾಧ್ಯವಾಗಲಿದೆ. ಈ ದಿಕ್ಕಿನಲ್ಲಿ ಯೋಜನೆ ಸಾಕಾರವಾಗದೆ. ಮೈಸೂರು ಪ್ರವಾಸಿ ತಾಣಗಳ ಅಭಿವೃದ್ಧಿ ಮರೀಚಿಕೆಯಾಗಿಯೇ ಉಳಿದಿದೆ ಎಂದಿದ್ದಾರೆ.ದಕ್ಷಿಣ ಏಷ್ಯಾದಲ್ಲೆ ಅತಿವಿಸ್ತಾರವಾದ ಹೆಬ್ಬಾಳು ಕೈಗಾರಿಕ ಪ್ರದೇಶ ಸೇರಿದಂತೆ ಮೇಟಗಳ್ಳಿ, ಕೂರ್ಗಳ್ಳಿ, ಹೂಟಗಳ್ಳಿ, ಬೆಳವಾಡಿ ಮತ್ತು ಯಾದವಗಿರಿ ಕೈಗಾರಿಕಾ ಪ್ರದೇಶಗಳಿವೆ. ಇವುಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸುವಂತೆ ಉದ್ಯಮಿಗಳು ಪ್ರತಿವರ್ಷ ಬೇಡಿಕೆ ಸಲ್ಲಿಸುತ್ತಾ ಬಂದಿದ್ದರೂ ಈವರೆಗೆ ಸಾಧ್ಯವಾಗಿಲ್ಲ. ಹಲವು ಉದ್ಯಮಗಳು ಮುಚ್ಚಿವೆ. ಅವುಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು. ಮತ್ತು ಇಲ್ಲಿನ ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ಸರ್ಕಾರ ಮುಂದಾಗಬೇಕು. ಉದ್ಯೋಗ ಸೃಷ್ಟಿಯಾದಾಗ ಮಾತ್ರ ಮಾನವ ಸಂಪನ್ಮೂಲ ಹೆಚ್ಚಳವಾಗಲಿದೆ. ಆ ಮೂಲಕ ಮೈಸೂರು ಮತ್ತಷ್ಟು ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದ್ದಾರೆ.
2013ರ ಅವಧಿಯಲ್ಲಿ ಇದೇ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಭೂಮಿ ಗುರುತಿಸಿ ಯೋಜನೆ ಸಿದ್ಧ ಪಡಿಸಿದ್ದರು. ಆದರೆ ಈವರೆಗೆ ಅದು ಕಾರ್ಯಗತವಾಗಿಲ್ಲ. ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದೆಡೆ ಅಲ್ಲಿನ ಮತದಾರರು ಸ್ವಂತ ನಿವೇಶನವಿಲ್ಲದೆ ಪರಿತಪಿಸುತ್ತಿದ್ದರೆ, ಇನ್ನೊಂದೆಡೆ ಈ ಭಾಗದಲ್ಲಿ ಅತಿಹೆಚ್ಚು ಅನಧಿಕೃತ ಬಡಾವಣೆ ನಿರ್ಮಾಣವಾಗತ್ತಲೆ ಇದೆ. ಎಂಡಿಎ ಹಾಗೂ ನಗರ ಪಾಲಿಕೆ ಅಧಿಕಾರಿಗಳು ಇದನ್ನೆಲ್ಲಾ ಗಮನಿಸಿದರೂ ಮೌನವಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಕೂಡಲೇ ಅನಧಿಕೃತ ಬಡಾವಣೆಗಳ ನಿರ್ಮಾಣಕ್ಕೆ ಕಡಿವಾಣ ಹಾಕಬೇಕು ಹಾಗೂ ವಸತಿ ವಂಚಿತರಿಗೆ ನಿವೇಶನ ಕಲ್ಪಿಸಲು ಮುಂದಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.