ಕನ್ನಡದ ‘ಮಠ’, ‘ಎದ್ದೇಳು ಮಂಜುನಾಥ’ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ

KannadaprabhaNewsNetwork |  
Published : Nov 04, 2024, 12:48 AM ISTUpdated : Nov 04, 2024, 06:32 AM IST
Kannada Actor Guruprasad

ಸಾರಾಂಶ

ಕನ್ನಡದ ‘ಮಠ’, ‘ಎದ್ದೇಳು ಮಂಜುನಾಥ’ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 ಬೆಂಗಳೂರು : ಕನ್ನಡದ ‘ಮಠ’, ‘ಎದ್ದೇಳು ಮಂಜುನಾಥ’ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಾಸನಪುರ ಹೋಬಳಿ ಹುಸ್ಕೂರು ರಸ್ತೆಯ ಟಾಟಾ ನ್ಯೂ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದುಕೊಂಡು ಗುರುಪ್ರಸಾದ್‌ (52) ಆತ್ಮಹತ್ಯೆ ಮಾಡಿಕೊಂಡಿದ್ದು, ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಭಾನುವಾರ ಬೆಳಗ್ಗೆ ಫ್ಲ್ಯಾಟ್‌ನಿಂದ ದುರ್ವಾಸನೆ ಬರುತ್ತಿತ್ತು. ಈ ಬಗ್ಗೆ ನೆರೆಹೊರೆಯವರು ನೀಡಿದ ಮಾಹಿತಿ ಮೇರೆಗೆ ಎರಡನೇ ಪತ್ನಿ ಸುಮಿತ್ರಾ ತವರು ಮನೆಯಿಂದ ಫ್ಲ್ಯಾಟ್‌ ಬಳಿ ಬಂದು ಸ್ಥಳೀಯರು ಹಾಗೂ ಪೊಲೀಸರ ನೆರವಿನಿಂದ ಬಾಗಿಲು ಲಾಕ್‌ ಮುರಿದು ಒಳಹೋಗಿ ನೋಡಿದಾಗ ಕಬ್ಬಿಣದ ಕೊಕ್ಕೆಗೆ ಹಗ್ಗದಿಂದ ನೇಣು ಬಿಗಿದು ಕೊಳೆತ ಸ್ಥಿತಿಯಲ್ಲಿ ನಿರ್ದೇಶಕ ಗುರುಪ್ರಸಾದ್‌ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕುಟುಂಬಸ್ಥರ ಸಮಕ್ಷಮದಲ್ಲಿ ಪೊಲೀಸರು ಮೃತದೇಹವನ್ನು ಕೆಳಗಿಳಿಸಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದರು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಈ ವೇಳೆ ನಟ ದುನಿಯಾ ವಿಜಯ್‌, ಡಾಲಿ ಧನಂಜಯ್‌, ತಬಲಾ ನಾಣಿ ಸೇರಿ ಚಿತ್ರರಂಗದ ಹಲವರು ಆಸ್ಪತ್ರೆಗೆ ಆಗಮಿಸಿದ್ದರು.

ಚಿತಾಗಾರದಲ್ಲಿ ಅಂತ್ಯಕ್ರಿಯೆ:

ಮರಣೋತ್ತರ ಪರೀಕ್ಷೆಯ ನಂತರ ಗುರುಪ್ರಸಾದ್‌ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಿಂದ ನೇರವಾಗಿ ವಿಲ್ಸನ್‌ ಗಾರ್ಡನ್‌ ಚಿತಾಗಾರಕ್ಕೆ ತರಲಾಯಿತು. ಎರಡನೇ ಪತ್ನಿ ಸುಮಿತ್ರಾ, ಕುಟುಂಬದ ಸದಸ್ಯರು ಹಾಗೂ ಚಿತ್ರರಂಗದ ಸ್ನೇಹಿತರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಸಾಲಬಾಧೆಯಿಂದ ಖಿನ್ನತೆ:

ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳದಲ್ಲಿ ಸದ್ಯಕ್ಕೆ ಯಾವುದೇ ಮರಣಪತ್ರವೂ ಸಿಕಿಲ್ಲ. ಮೂರ್ನಾಲ್ಕು ದಿನಗಳ ಹಿಂದೆಯೇ ಗುರುಪ್ರಸಾದ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ. ಹೀಗಾಗಿ ಮೃತದೇಹ ಊದಿಕೊಂಡು ಕೊಳೆತು ದುರ್ನಾತ ಬೀರುತ್ತಿತ್ತು. ಸಿನಿಮಾ ವಿಚಾರವಾಗಿ ಗುರುಪ್ರಸಾದ್‌ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲಾಗದೆ ಜಿಗುಪ್ಸೆಗೊಂಡು ಇತ್ತೀಚೆಗೆ ಮಾನಸಿಕ ಖಿನ್ನತೆಗೂ ಸಹ ಒಳಗಾಗಿದ್ದರು ಎಂದು ತಿಳಿದು ಬಂದಿದೆ. ಮಾದನಾಯಕಹಳ್ಳಿ ಪೊಲೀಸ್‌ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಪತ್ನಿಗೆ ವಿಚ್ಛೇದನ

ಗುರುಪ್ರಸಾದ್‌ ಈ ಹಿಂದೆ ಆರತಿ ಎಂಬುವವರನ್ನು ವಿವಾಹವಾಗಿದ್ದರು. ದಂಪತಿಗೆ ಓರ್ವ ಮಗಳು ಇದ್ದಾಳೆ. ಕೌಟುಂಬಿಕ ಕಲಹದಿಂದ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದರು. ಬಳಿಕ 2020ರಲ್ಲಿ ಸುಮಿತ್ರಾ ಅವರನ್ನು ಗುರುಪ್ರಸಾದ್‌ ಎರಡನೇ ವಿವಾಹವಾಗಿದ್ದು, ಮೂರೂವರೆ ವರ್ಷದ ಒಂದು ಹೆಣ್ಣು ಮಗುವಿದೆ. ಈ ಹಿಂದೆ ಕನಕಪುರ ರಸ್ತೆ, ರಾಜರಾಜೇಶ್ವರಿನಗರ, ಬಸವೇಶ್ವರನಗರ ಬಾಡಿಗೆ ಮನೆಗಳಲ್ಲಿ ನೆಲೆಸಿದ್ದರು. ಕಳೆದ ಆರು ತಿಂಗಳಿಂದ ದಾಸನಪುರ ಸಮೀಪದ ಫ್ಲ್ಯಾಟ್‌ವೊಂದನ್ನು ಬಾಡಿಗೆಗೆ ಪಡೆದು ನೆಲೆಸಿದ್ದರು.

2ನೇ ಪತ್ನಿ ತವರುಮನೆಯಲ್ಲಿ ವಾಸ

ಎರಡನೇ ಪತ್ನಿ ಸುಮಿತ್ರಾಗೆ ಅನಾರೋಗ್ಯವಿದ್ದ ಕಾರಣ ಕಳೆದ ಐದು ತಿಂಗಳಿಂದ ಮಗುವಿನ ಜತೆಗೆ ತವರು ಮನೆಯಲ್ಲಿ ನೆಲೆಸಿದ್ದರು. ಹೀಗಾಗಿ ಫ್ಲ್ಯಾಟ್‌ನಲ್ಲಿ ಗುರುಪ್ರಸಾದ್‌ ಒಬ್ಬರೇ ಇದ್ದರು. ಸಿನಿಮಾ ಕೆಲಸಗಳಲ್ಲಿ ಗುರುಪ್ರಸಾದ್‌ ವ್ಯಸ್ತರಾಗಿದ್ದ ಹಿನ್ನೆಲೆಯಲ್ಲಿ ಆಗಾಗ ಸುಮಿತ್ರಾ ಮೊಬೈಲ್‌ನಲ್ಲಿ ಸಂಪರ್ಕದಲ್ಲಿದ್ದರು. ಅ.25ರಂದು ಸುಮಿತ್ರಾ ಅವರು ಕೊನೆಯದಾಗಿ ಗುರುಪ್ರಸಾದ್‌ಗೆ ಕರೆ ಮಾಡಿದ್ದು, ಕರೆ ಸ್ವೀಕರಿಸಿಲ್ಲ. ಸಿನಿಮಾ ಕೆಲಸಗಳಲ್ಲಿ ಇರಬಹುದು ಎಂದು ಸುಮ್ಮನಾಗಿದ್ದರು ಎಂದು ತಿಳಿದು ಬಂದಿದೆ.

ಪ್ಲ್ಯಾಟ್‌ನಿಂದ ಕೆಟ್ಟ ವಾಸನೆ

ಭಾನುವಾರ ಬೆಳಗ್ಗೆ ಗುರುಪ್ರಸಾದ್‌ ವಾಸವಿದ್ದ ಫ್ಲ್ಯಾಟ್‌ನಿಂದ ಕೆಟ್ಟ ವಾಸನೆ ಬರಲಾರಂಭಿಸಿದೆ. ಅನುಮಾನಗೊಂಡ ಅಪಾರ್ಟ್‌ಮೆಂಟ್‌ ನಿವಾಸಿ ಜಯರಾಮ್‌ ಎಂಬುವರು ಫ್ಲ್ಯಾಟ್‌ನ ಬಾಗಿಲು ಬಡಿದಿದ್ದಾರೆ. ಆದರೆ, ಒಳಗಿಂದ ಬಾಗಿಲು ಲಾಕ್‌ ಆಗಿದ್ದು, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಳಿಕ ಎರಡನೇ ಪತ್ನಿ ಸುಮಿತ್ರಾ ಅವರಿಗೆ ಕರೆ ಮಾಡಿ ಫ್ಲ್ಯಾಟ್‌ನಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ತಿಳಿಸಿದ್ದಾರೆ. ಬಳಿಕ ಸುಮಿತ್ರಾ ಅವರು ಕುಟುಂಬದವರೊಂದಿಗೆ ಬೆಳಗ್ಗೆ 11ರ ಸುಮಾರಿಗೆ ಫ್ಲ್ಯಾಟ್‌ ಬಳಿ ಬಂದು ಪೊಲೀಸರ ನೆರವಿನಿಂದ ಬಾಗಿಲು ಮುರಿದು ನೋಡಿದಾಗ ಮೃತದೇಹ ಪತ್ತೆಯಾಗಿದೆ.------

ಸಾವಿನ ಬಗ್ಗೆ ಅನುಮಾನವಿಲ್ಲ: ಪತ್ನಿ

ಗುರುಪ್ರಸಾದ್ ಸಿನಿಮಾ ವಿಚಾರವಾಗಿ ಸಾಲ ಮಾಡಿಕೊಂಡಿದ್ದರು. ಅದರಿಂದ ಮಾನಸಿಕ ಖಿನ್ನತೆಗೂ ಒಳಗಾಗಿ ಜೀವನದ ಬಗ್ಗೆ ಜಿಗುಪ್ಸೆಗೊಂಡಿದ್ದರು. ಸಾಲ ತೀರಿಸೋಣ ಎಂದು ನಾನು ಧೈರ್ಯ ಹೇಳಿದ್ದೆ. ಆದರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಸಾವಿನ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ ಎಂದು ಗುರುಪ್ರಸಾದ್‌ ಅವರ ಎರಡನೇ ಪತ್ನಿ ಸುಮಿತ್ರಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಹುಟ್ಟುಹಬ್ಬದ ಮರುದಿನವೇ ದೇಹ ಪತ್ತೆ

ಕನಕಪುರ ಮೂಲದ ನಿರ್ದೇಶಕ ಗುರುಪ್ರಸಾದ್‌ 1972ರ ನವೆಂಬರ್‌ 2ರಂದು ಜನಿಸಿದ್ದರು. ಶನಿವಾರವಷ್ಟೇ ಅವರ ಹುಟ್ಟುಹಬ್ಬ ಇತ್ತು. ಮಾರನೇ ದಿನವೇ ಅವರ ಆತ್ಮಹತ್ಯೆ ಘಟನೆ ಬೆಳಕಿಗೆ ಬಂದಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ