ಹೂವಿನಹಡಗಲಿ: ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿನ ಜನ- ಜಾನುವಾರುಗಳಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಅಕ್ರಮ ಎಸಗಿಸಿದರೆ ಶಿಸ್ತುಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಶಾಸಕ ಕೃಷ್ಣನಾಯ್ಕ ಎಚ್ಚರಿಸಿದರು.
ಇಲ್ಲಿನ ತಾಲೂಕು ಪಂಚಾಯಿತಿ ರಾಜೀವ್ ಗಾಂಧಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಬರ ಹಾಗೂ ಕುಡಿಯುವ ನೀರು ಮತ್ತು ಮೇವು ನಿರ್ವಹಣಾ ಸಭೆಯಲ್ಲಿ ಮಾತನಾಡಿದರು.ಮಳೆ ಇಲ್ಲದೇ ಅಂತರ್ಜಲ ಮಟ್ಟ ಕುಸಿದಿದೆ. ಈ ಹಿನ್ನೆಲೆ ಹೊಸ ಕೊಳವೆ ಬಾವಿಗಳನ್ನು ಕೊರೆಯುವ ಬದಲು ಸ್ಥಳೀಯ ಮಟ್ಟದ ರೈತರ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ಆ ಮೂಲಕ ಜನರಿಗೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕಿದೆ. ಹೊಸ ಕೊಳವೆ ಬಾವಿಗಳನ್ನು ಕೊರೆಸಿದಾಗ ನೀರು ಬರದಿದ್ದರೆ ಅನುದಾನ ಹಾಳಾಗುತ್ತದೆ. ಕುಡಿಯುವ ನೀರಿಗೆ ಅನುದಾನ ಬಹಳ ಕಡಿಮೆ ಇದೆ. ಆದಷ್ಟು ಹಿಡಿತದಿಂದ ಹಣವನ್ನು ವೆಚ್ಚ ಮಾಡಬೇಕೆಂದರು.
ತಾಲೂಕಿನ 112 ಜನವಸತಿ ಪ್ರದೇಶಗಳಲ್ಲಿ 64 ಹಳ್ಳಿಗಳನ್ನು ಈಗಾಗಲೇ ಸಮಸ್ಯಾತ್ಮಕ ಎಂದು ಗುರುತಿಸಲಾಗಿದೆ. ಇದರಲ್ಲಿ ಈಗಾಗಲೇ 5 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿ ಬಾಡಿಗೆ ಪಡೆದು ನೀರು ಹರಿಸಲಾಗುತ್ತದೆ. ಉಳಿದಂತೆ ಎಲ್ಲ ಹಳ್ಳಿಗಳಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿದ್ದು, ರೈತರೊಂದಿಗೆ ಒಪ್ಪಂದ ಮಾಡಿಕೊಂಡು ನೀರು ಒದಗಿಸುತ್ತೇವೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಅಂಬೇಡ್ಕರ್ ಮಾಹಿತಿ ನೀಡಿದರು.ಕುಡಿಯುವ ನೀರು ಪೂರೈಕೆಗಾಗಿ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದರೆ ಅವುಗಳಿಗೆ 24 ಗಂಟೆ ವಿದ್ಯುತ್ ಸಂಪರ್ಕ ನೀಡುವ ಕೆಲಸವನ್ನು ಜೆಸ್ಕಾಂ ಎಇಇ ಮಾಡಬೇಕು. ತಾಪಂ ಇಒ, ಆಯಾ ಪಿಡಿಒ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಇವರು ಸೇರಿ ತಂಡ ರಚನೆ ಮಾಡಿಕೊಂಡು ಕುಡಿಯುವ ನೀರಿನ ಸಮಸ್ಯೆ ಆಲಿಸಿ ಪಟ್ಟಿ ಮಾಡಿ ಕೂಡಲೇ ಕ್ರಮಕ್ಕೆ ಮುಂದಾಗಬೇಕೆಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ನಮ್ಮ ಕೊಯಿಲಾರಗಟ್ಟಿ ತಾಂಡಾದಲ್ಲೇ ಜನರಿಗೆ ನೀರಿಲ್ಲ. ನಿತ್ಯ ನಮ್ಮ ಬಳಿ ಬಂದು ನೀರಿನ ಸಮಸ್ಯೆ ಹೇಳುತ್ತಾರೆ. ಮೊದಲು ರೈತರ ಕೊಳವೆ ಬಾವಿ ಬಾಡಿಗೆ ಪಡೆಯಬೇಕು. ತಿಪ್ಪೆಗುಂಡಿಯಲ್ಲಿನ ದುರಸ್ತಿಗೆ ಬಂದಿರುವ ಪೈಪ್‌ಲೈನ್ ರಿಪೇರಿ ಮಾಡಿಸಿ, ಬೇಸಿಗೆ ಸಂದರ್ಭದಲ್ಲಿ ಕಲುಷಿತ ನೀರು ಕುಡಿದು ಜನರಿಗೆ ವಾಂತಿ ಭೇದಿ ಉಂಟಾದರೆ ಅಧಿಕಾರಿಗಳನ್ನೇ ಹೊಣೆ ಮಾಡಬೇಕಾಗುತ್ತದೆ ಎಂದರು.ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ನಿರ್ವಹಣೆ ಮಾಡುವ ಗುತ್ತಿಗೆದಾರರು, ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ ಗುತ್ತಿಗೆದಾರರ ಸಭೆ ಕರೆದು ಅವರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಅಂಬರೀಷ, ತಾಪಂ ಇಒ ಜಯರಾಮ ಚವ್ಹಾಣ್ ಉಪಸ್ಥಿತರಿದ್ದರು.ಬಿಜೆಪಿ, ಕಾಂಗ್ರೆಸ್ ಮಿಶ್ರಣ ನೀರು!ನಂದಿಹಳ್ಳಿ ಗ್ರಾಮದಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷದ ನಾಯಕರಿಬ್ಬರ ಕೊಳವೆ ಬಾವಿಗಳನ್ನು ಜನರಿಗೆ ಉಚಿತವಾಗಿ ನೀಡಲು ದುಂಬಾಲು ಬಿದ್ದಿದ್ದಾರೆ. ಆದರೆ ಆ ಊರಿನ ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಬಿಜೆಪಿಯ ಕರಿಬಸಪ್ಪ, ಕಾಂಗ್ರೆಸ್‌ನ ಕಂಠಿ ವಿಶ್ವನಾಥ ಅವರ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ಇಬ್ಬರ ನೀರನ್ನು ಮಿಶ್ರಣ ಮಾಡಿ ಗ್ರಾಮಕ್ಕೆ ಪೂರೈಕೆ ಮಾಡಬೇಕೆಂದು ಶಾಸಕ ಕೃಷ್ಣನಾಯ್ಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂದಿಹಳ್ಳಿ ಕುಡಿಯುವ ನೀರಿನ ವಿಚಾರದಲ್ಲಿ ಯಾರೂ ಒಣ ರಾಜಕೀಯ ಮಾಡುವುದು ಬೇಡ. ಇದರಿಂದ ಜನರಿಗೆ ಸಿಕ್ಕಾಪಟ್ಟೆ ತೊಂದರೆ ಉಂಟಾಗಲಿದೆ. ಗ್ರಾಮಸ್ಥರು ಹಟ ಮಾಡದೇ ಇಬ್ಬರೂ ಪಕ್ಷದವರ ನೀರನ್ನು ಬಳಕೆ ಮಾಡಬೇಕು. ಸರ್ಕಾರ ಕೊರೆಸಿರುವ ಕೊಳವೆ ಬಾವಿಗಳಲ್ಲಿ ನೀರು ಇಲ್ಲದ ಕಾರಣ ಈ ರೀತಿಯ ಕ್ರಮಕ್ಕೆ ಮುಂದಾಗಿದ್ದೇವೆ ಎಂದರು.ಈ ನೀರಿನ ವಿಚಾರವಾಗಿ ಅಧಿಕಾರಿಗಳು ಸಿಕ್ಕಾಪಟ್ಟೆ ತೊಂದರೆ ಅನುಭವಿಸುತ್ತಿದ್ದಾರೆ. ಇದಕ್ಕೆ ತಾವೇ ಒಂದು ಮಾರ್ಗ ಸೂಚಿಸಬೇಕಿದೆ ಎಂದು ತಾಪಂ ಇಒ ಜಯರಾಮ್ ಚವ್ಹಾಣ್ ಶಾಸಕರಲ್ಲಿ ಮನವಿ ಮಾಡಿದರು.