ಕನ್ನಡಪ್ರಭ ವಾರ್ತೆ ಮಂಡ್ಯ
ಅನುದಾನ ಮತ್ತು ಅನುದಾನ ರಹಿತ ಶಾಲೆಗಳನ್ನು ಸರ್ಕಾರ ಗುರಿಯಾಗಿಸಿಕೊಂಡು ತಾರತಮ್ಯ ಮಾಡಲಾಗುತ್ತಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನೂ ಸಂಕಷ್ಟಕ್ಕೆ ಸಿಲುಕಿಸಿದೆ. ಇದರ ವಿರುದ್ಧ ಸದನದಲ್ಲಿ ಹೋರಾಟ ನಡೆಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ಹೇಳಿದರು.ನಗರದ ಸಂತ ಜೋಸೆಫರ ಶಾಲೆಯಲ್ಲಿ ಅನುದಾನ-ಅನುದಾನ ರಹಿತ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿದ ವೇಳೆ ಹಲವಾರು ಶಿಕ್ಷಕರು ಸಮಸ್ಯೆಗಳ ಕುರಿತಂತೆ ಗಮನಕ್ಕೆ ತಂದರು. ಅನುದಾನಿತ ಶಾಲೆಗಳಲ್ಲಿ ಕನಿಷ್ಠ ೨೫ ವಿದ್ಯಾರ್ಥಿಗಳು ದಾಖಲಾಗಲೇಬೇಕು. ವಿದ್ಯಾರ್ಥಿಗಳ ಸಂಖ್ಯೆ ಒಂದೆರಡು ಕಡಿಮೆಯಾದರೂ ಸಂಬಳ ಪಾವತಿಸದಿರುವುದು, ಕಟ್ಟಡಗಳ ಸುಸ್ಥಿತಿಯ ಬಗ್ಗೆ ಪ್ರತಿ ವರ್ಷ ಪ್ರಮಾಣ ಪತ್ರ ಸಲ್ಲಿಸುವುದು. ಶಿಕ್ಷಕರ ಕೊರತೆ ಹೀಗೆ ನಾನಾ ರೀತಿಯ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ತಿಳಿಸಿದರು.
ಶಿಕ್ಷಕರಿಂದ ಸಮಸ್ಯೆಗಳನ್ನು ತಿಳಿದುಕೊಂಡು ಮಾತನಾಡಿದ ಕೆ.ವಿವೇಕಾನಂದ, ಅನುದಾನಿತ ಶಾಲೆಗಳ ಕಟ್ಟಡಗಳ ಸ್ಥಿತಿಯ ಬಗ್ಗೆ ಪ್ರತಿ ವರ್ಷ ಪ್ರಮಾಣ ಪತ್ರ ಸಲ್ಲಿಸುವುದು, ಮಕ್ಕಳ ನೋಂದಣಿ ಪ್ರಮಾಣಪತ್ರ ಸಲ್ಲಿಕೆಯನ್ನು ಕಡ್ಡಾಯಗೊಳಿಸುವ ಮೂಲಕ ಅಧಿಕಾರಿಗಳ ಲಂಚಕ್ಕೆ ಸರ್ಕಾರ ದಾರಿ ಮಾಡಿಕೊಟ್ಟಿದೆ. ಇಂತಹ ನಿಯಮಗಳನ್ನು ರೂಪಿಸುವುದಕ್ಕೂ ಮೊದಲು ಸರ್ಕಾರಿ ಶಾಲೆಗಳ ಸ್ಥಿತಿ-ಗತಿ ಹೇಗಿದೆ, ಅಲ್ಲಿ ಎಷ್ಟು ಸಂಖ್ಯೆಯ ಮಕ್ಕಳು ದಾಖಲಾಗುತ್ತಿದ್ದಾರೆ. ಶಿಕ್ಷಕರು, ಪ್ರಾಂಶುಪಾಲರ ಕೊರತೆ ಎಷ್ಟಿದೆ ಎಂಬುದನ್ನೂ ಮನಗಾಣಬೇಕಿದೆ ಎಂದರು.ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ೫೦ ಸಾವಿರ ಶಿಕ್ಷಕರ ಕೊರತೆ ಇದೆ. ಒಂದು ಶಾಲೆಯಲ್ಲಿ ಏಳೆಂಟು ಶಿಕ್ಷಕರಿರಬೇಕಾದ ಕಡೆ ಮೂರರಿಂದ ನಾಲ್ಕು ಶಿಕ್ಷಕರು ಮಾತ್ರ ಇದ್ದಾರೆ. ೩ ರಿಂದ ೫ ಮಕ್ಕಳಿದ್ದರೂ ಸರ್ಕಾರಿ ಶಾಲೆಯನ್ನು ನಡೆಸಲಾಗುತ್ತಿದೆ. ಅಂದ ಮೇಲೆ ಸರ್ಕಾರಿ ಶಾಲೆಗಳಿಲ್ಲದ ನಿಯಮಾವಳಿಗಳನ್ನು ಅನುದಾನಿತ ಶಾಲೆಗಳ ಮೇಲೆ ಬಲವಂತವಾಗಿ ಹೇರುತ್ತಿರುವುದೇಕೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ದಾಖಲಾಗುತ್ತಿರುವವರು ಕೇವಲ ಬಡ ಮತ್ತು ಕೂಲಿ ಕಾರ್ಮಿಕರ ಮಕ್ಕಳಾಗಿದ್ದಾರೆ. ಅನುದಾನಿತ ಶಾಲೆಗಳಿಗೆ ೨೫ ಮಕ್ಕಳು ದಾಖಲಾಗಲೇಬೇಕು. ಅದಕ್ಕಿಂತ ಕಡಿಮೆ ಮಕ್ಕಳಿದ್ದರೆ ಶಿಕ್ಷಕರಿಗೆ ಸಂಬಳ ಕೊಡುವುದಿಲ್ಲ ಎನ್ನುವುದು ನ್ಯಾಯಸಮ್ಮತವಲ್ಲ. ಶಾಲಾ ಕಟ್ಟಡಗಳ ಸುಸ್ಥಿತಿಯ ಪ್ರಮಾಣಪತ್ರ ಸಲ್ಲಿಕೆ ಅವಧಿಯನ್ನು ೫ ಅಥವಾ ೧೦ ವರ್ಷಕ್ಕೊಮ್ಮೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಶಿಕ್ಷಕರ ಈ ಎಲ್ಲಾ ಸಮಸ್ಯೆಗಳ ಕುರಿತಂತೆ ಸದನದಲ್ಲಿ ದನಿ ಎತ್ತಿ ಹೋರಾಟ ನಡೆಸುತ್ತೇನೆ. ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ನಡೆಸುತ್ತೇನೆ ಎಂದರು.ಶಿಕ್ಷಕರಾದ ವಿ.ಕೆ.ಶಿವಾನಂದ್, ಬೋರೇಗೌಡ, ವಸಂತಕುಮಾರ್, ಜಗದೀಶ್, ಎಂ.ಸಿ.ರಾಜು ಇತರರಿದ್ದರು.