ರಾಸಾಯನಿಕಯುಕ್ತ ಆಹಾರದಿಂದ ಮಕ್ಕಳಲ್ಲೂ ಕಾಯಿಲೆ ಹೆಚ್ಚಳ: ಗಿರೀಶ್ ಪಾವಸ್ಕರ್

KannadaprabhaNewsNetwork | Published : Jun 11, 2024 1:33 AM

ಸಾರಾಂಶ

ನೂರು ವರ್ಷ ಬದುಕಿದರೂ ಆರೋಗ್ಯವಾಗಿರುತ್ತಿದ್ದ ಎರಡು ತಲೆಮಾರಿನ ಹಿಂದಿನ ಆಹಾರಕ್ಕೂ ಇಂದು ನಾವು ಸೇವಿಸುತ್ತಿರುವ ಆಹಾರಕ್ಕೂ ಬಹಳ ವ್ಯತ್ಯಾಸ ಇದೆ. ರಾಸಾಯನಯುಕ್ತ ಆಹಾರ ಸೇವನೆಯಿಂದ ಚಿಕ್ಕ ಮಕ್ಕಳಿಗೂ ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದೆ. ಅದನ್ನು ತಡೆಗಟ್ಟಲು ಸಿರಿಧಾನ್ಯದಂತಹ ಪರಿಶುದ್ಧ ಸಾವಯವ ಆಹಾರ ಸೇವನೆ ಸೂಕ್ತ

ಕನ್ನಡಪ್ರಭ ವಾರ್ತೆ ತಾಳಗುಪ್ಪ

ಆಧುನಿಕ ಆಹಾರ ಅನುಸರಣೆಯಿಂದ ವ್ಯಕ್ತಿ ಬಾಲ್ಯಾವಸ್ಥೆಯಿಂದಲೇ ರೋಗಪೀಡಿತನಾಗುತ್ತಿದ್ದಾನೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಗಿರೀಶ್ ಪಾವಸ್ಕರ್ ಹೇಳಿದರು. ಭಾನುವಾರ ಗ್ರಾಮದ ಪಂಚಾಯತಿ ಸಮುದಾಯ ಭವನದಲ್ಲಿ ಯೋಜನೆಯ ಪ್ರೇರಣಾ ಕಾರ್ಯಕ್ರಮದಲ್ಲಿ ಮಾತನಾಡಿ ನೂರು ವರ್ಷ ಬದುಕಿದರೂ ಆರೋಗ್ಯವಾಗಿರುತ್ತಿದ್ದ ಎರಡು ತಲೆಮಾರಿನ ಹಿಂದಿನ ಆಹಾರಕ್ಕೂ ಇಂದು ನಾವು ಸೇವಿಸುತ್ತಿರುವ ಆಹಾರಕ್ಕೂ ಬಹಳ ವ್ಯತ್ಯಾಸ ಇದೆ. ರಾಸಾಯನಯುಕ್ತ ಆಹಾರ ಸೇವನೆಯಿಂದ ಚಿಕ್ಕ ಮಕ್ಕಳಿಗೂ ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದೆ. ಅದನ್ನು ತಡೆಗಟ್ಟಲು ಸಿರಿಧಾನ್ಯದಂತಹ ಪರಿಶುದ್ಧ ಸಾವಯವ ಆಹಾರ ಸೇವನೆ ಸೂಕ್ತ ಎಂದರು. ಅಕ್ಕಿ ಸೇವಿಸುವವನು ಹಕ್ಕಿಯಂತಾಗುವನು, ಜೋಳ ತಿನ್ನುವವನು ತೋಳದಂತಾಗುವನು, ರಾಗಿ ಸೇವಿಸುವವನು ನಿರೋಗಿಯಾಗುವನು ಎಂಬ ವಾಡಿಕೆಯ ಮಾತು ರೂಢಿಯಲ್ಲಿದ್ದು, ರಾಗಿ ಪರಿಶುದ್ಧ ಆಹಾರವಾಗಿದೆ. ಡಾ.ವೀರೇಂದ್ರ ಹೆಗ್ಗಡೆಯವರಿಂದ ಪ್ರವೃತ್ತವಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಧಾರವಾಡದಲ್ಲಿ ಗುಣಮಟ್ಟದ ಆಹಾರ ಸಾಮಗ್ರಿಗಳ ಉತ್ಪಾದಕ ಘಟಕವಿದ್ದು, ಅಲ್ಲಿ ಸಿರಿಧಾನ್ಯಗಳಿಂದ ಸಿದ್ಧ ಪಡಿಸಿದ ಮಕ್ಕಳ ಹಾಗೂ ವೃದ್ಧರಿಗೆ ಸೂಕ್ತವಾದ ಆಹಾರಗಳ ಸಿದ್ಧಪಡಿಸಲಾಗುತ್ತಿದೆ. ಮಧುಮೇಹ, ರಕ್ತದೊತ್ತಡ ಮುಂತಾದ ರೋಗಿಗಳಿಗೆ ಸೂಕ್ತವಾದ ಆಹಾರ ಕಿಟ್‍ಗಳು, ಬಿಸ್ಕತ್ತುಗಳು, ರಾಗಿ ಮಾಲ್ಟ್ ಮೊದಲಾದ ಪರಿಶುದ್ಧ ವಸ್ತುಗಳು ಲಭ್ಯವಿದೆ ಎಂದರು.

2000ಕ್ಕೂ ಹೆಚ್ಚು ಮಹಿಳೆಯರು ಭಾಗಿ:

ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮಾರುಕಟ್ಟೆ ವಿಭಾಗದ ಹರ್ಷ ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಮಹಿಳೆಯರಿಗೆ ವಿವಿಧ ಉತ್ಪನ್ನಗಳ ತಯಾರಿಕೆ ಪ್ರೋತ್ಸಾಹಿಸುತ್ತಿದ್ದು, ಸೂಕ್ತ ಮಾರ್ಗದರ್ಶನ, ತರಬೇತಿ, ಸಂಪನ್ಮೂಲಗಳ ಒದಗಿಸುತ್ತಿದೆ. ಸುಮಾರು 2000ಕ್ಕೂ ಹೆಚ್ಚು ಮಹಿಳೆಯರು ಗುಣಮಟ್ಟದ ಉತ್ಪನ್ನಗಳ ತಯಾರಿಯಲ್ಲಿ ತೊಡಗಿಕೊಂಡಿದ್ದು , ಬೆಳ್ತಂಗಡಿ ಹಾಗೂ ಧಾರವಾಡದಲ್ಲಿ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಸ್ಥಾಪಿಸಲಾಗಿದೆ. ಪ್ರಸಕ್ತ ವಾರ್ಷಿಕ 30 ಕೋಟಿಗೂ ಅಧಿಕ ವಹಿವಾಟು ಇದ್ದು ವಿತರಕರಿಗೂ ಲಾಭದಾಯಕವಾಗುವಂತೆ ಮಾರುಕಟ್ಟೆಯ ವಿಸ್ತರಣೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿ, ಸಿರಿ ಬ್ರಾಂಡಿನ 59 ಉತ್ಪನ್ನಗಳನ್ನು ಪರಿಚಯಿಸಿದರು.ಆರೋಗ್ಯ ಇಲಾಖೆಯ ಜುಲೇಕ ಗರ್ಭಿಣಿಯರು ಹಾಗೂ ಬಾಣಂತಿಯರು ಸೇವಿಸಬೇಕಾದ ಆಹಾರ, ವಿವಿಧ ವಯಸ್ಸಿನ ಮಹಿಳೆಯರು ಸೇವಿಸಬೇಕಾದ ಪೌಷ್ಟಿಕಾಂಶಗಳ ಮಾಹಿತಿ ನೀಡಿದರು.

ಗ್ರಾಪಂ ಸದಸ್ಯ ಮಾರುತಿ ಕಾರ್ಯಕ್ರಮ ಉದ್ಘಾಟಿಸಿದರು. ಒಕ್ಕೂಟದ ಅಧ್ಯಕ್ಷೆ ಪ್ರೇಮಾ ಭಾಸ್ಕರ್ ಅಧ್ಯಕ್ಷತೆ ವಹಿಸಿದ್ದರು. ಪ್ರೇರಣಾ ಜ್ಞಾನ ವಿಕಾಸ ತಂಡದ ಅಧ್ಯಕ್ಷೆ ಅನಸೂಯ, ಸಮನ್ವಯಾಧಿಕಾರಿ ಲಲಿತಾ, ಗ್ರಂಥಾಲಯ ಮೇಲ್ವಿಚಾರಕಿ ಮಾಲತಿ ಹಾಗೂ ಸೇವಾ ಪ್ರತಿನಿಧಿಗಳು ಹಾಜರಿದ್ದರು.

ವಲಯದ ಮೇಲ್ವಿಚಾರಕರಾದ ನಾಗರತ್ನಾ ಸ್ವಾಗತಿಸಿ, ಸೇವಾ ಪ್ರತಿನಿಧಿಯಾದ ಗ್ರೇಸಿ ವಂದಿಸಿದರು.

----------------------------

Share this article