ನಿಯಮಿತ ವ್ಯಾಯಾಮದಿಂದ ರೋಗಗಳ ನಿಯಂತ್ರಣ ಸಾಧ್ಯ

KannadaprabhaNewsNetwork |  
Published : Mar 19, 2024, 12:48 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ  | Kannada Prabha

ಸಾರಾಂಶ

ಆಹಾರ ಪದ್ಧತಿ ಹಾಗೂ ವ್ಯಾಯಾಮದ ಮೂಲಕ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದೆಂದು ಎಂಡೋಕ್ರೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ.ಬ್ರಿಜೇಶ್.ಕೆ ತಿಳಿಸಿದರು.

ಚಿತ್ರದುರ್ಗ: ಆಹಾರ ಪದ್ಧತಿ ಹಾಗೂ ವ್ಯಾಯಾಮದ ಮೂಲಕ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದೆಂದು ಎಂಡೋಕ್ರೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ.ಬ್ರಿಜೇಶ್.ಕೆ ತಿಳಿಸಿದರು.

ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್, ಧರ್ಮಸ್ಥಳ ಸಿರಿ ಮಿಲೆಟ್ ಎಂಡೋಕ್ರೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಪತಂಜಲಿ ಯೋಗ ಕೇಂದ್ರಗಳ ಸಹಯೋಗದೊಂದಿಗೆ ವಾಸವಿ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಲಾಗಿದ್ದ ಪೌಷ್ಟಿಕಾಂಶ ಭರಿತ ಸಿರಿಧಾನ್ಯ ಆಹಾರದಿಂದ ಮಧುಮೇಹ ನಿಯಂತ್ರಣ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸಕ್ಕರೆ ಕಾಯಿಲೆಯಿರುವವರಿಗೆ ಅತಿಯಾದ ಮೂತ್ರ ವಿಸರ್ಜನೆಯಾಗುತ್ತಿರುತ್ತದೆ. ಬಾಯಾರಿಕೆ, ದೇಹದ ತೂಕದಲ್ಲಿ ಏರುಪೇರು, ಆಯಾಸವಾಗುವುದು ಇವು ಸಕ್ಕರೆ ಕಾಯಿಲೆಯ ಲಕ್ಷಣಗಳಾಗಿದ್ದು, ಇದರ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಜಾಗೃತಿ ಮೂಡಿಸಬೇಕಿದೆ. ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳದಿದ್ದರೆ ಹೃದಯಾಘಾತ, ಪಾರ್ಶ್ವವಾಯು, ಕಣ್ಣು ಮತ್ತು ನರಗಳ ಸಮಸ್ಯೆಗಳಿಗೆ ಬಲಿಯಾಗಬಹುದು. ಹಾಗಾಗಿ ಈ ಕಾಯಿಲೆಯಿಂದ ಬಳಲುತ್ತಿರುವವರು ಕಡ್ಡಾಯವಾಗಿ ವ್ಯಾಯಾಮ ಮತ್ತು ಆಹಾರದಲ್ಲಿ ಹತೋಟಿಗೆ ತಂದುಕೊಳ್ಳಬಹುದು ಎಂದರು.

ಧರ್ಮಸ್ಥಳ ಸಿರಿ ಮಿಲೆಟ್ ನಿರ್ದೇಶಕ ದಿನೇಶ್ ಮಾತನಾಡಿ, ಪೂರ್ವಜರು ಮಕ್ಕಳಿಗೆ ನೀಡುತ್ತಿದ್ದ ಆಹಾರ ಈಗ ಇಲ್ಲದಂತಾಗುತ್ತಿದೆ. ದೇಹ ದಂಡನೆಯಾಗುತ್ತಿಲ್ಲ. ಎಲ್ಲರೂ ವೈಯಕ್ತಿಕ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು. ಈ ಮೊದಲು ಕೊಟ್ಟಿಗೆ ಗೊಬ್ಬರ ಬಳಿಸಿ ಆಹಾರ ಧಾನ್ಯಗಳನ್ನು ರೈತರು ಬೆಳೆಯುತ್ತಿದ್ದರು. ಆಹಾರವೆನ್ನುವುದು ಈಗ ವಿಷವಾಗಿ ವ್ಯಾಪಾರಿಕರಣ, ಹಣಗಳಿಸುವ ದಂಧೆಯಾಗಿರುವುದರಿಂದ ಪೌಷ್ಟಿಕಾಂಶವಿಲ್ಲದ ಆಹಾರ ಸೇವಿಸುತ್ತಿರುವ ಮನುಷ್ಯ ಒಂದಲ್ಲ ಒಂದು ರೀತಿಯ ರೋಗಗಳಿಗೆ ತುತ್ತಾಗುತ್ತಿದ್ದಾನೆಂದು ವಿಷಾದಿಸಿದರು.

ರಾಗಿ, ಜೋಳ, ಸಜ್ಜೆ, ನವಣೆ, ಬರಗು, ಸಾಮೆ, ಆರ್ಕ, ಊದಲು, ಕೊರಲೆ ಇವುಗಳನ್ನು ಹೆಚ್ಚು ಬಳಸುವುದರಿಂದ ಆರೋಗ್ಯವಂತರಾಗಿರಬಹುದಲ್ಲದೆ ಸಿರಿಧಾನ್ಯ ಸೇವನೆಯಿಂದ ಮಧುಮೇಹದಂತ ಕಾಯಿಲೆಯಿಂದ ದೂರವಿರಬಹುದು. ಕೊಪ್ಪಳ, ದಾವಣಗೆರೆ, ಚಿಕ್ಕನಾಯಕನ ಹಳ್ಳಿಯಲ್ಲಿ ರೈತರಿಂದ ಸಿರಿಧಾನ್ಯ ಬೆಳೆಸಿ ರೈತೋತ್ಪಾದಕ ಕಂಪನಿ ಆರಂಭಿಸಿದ್ದೇವೆ. ಸಿರಿಧಾನ್ಯ ಬೆಳೆಗಾರರ ಸಂಘ ರಾಜ್ಯದಲ್ಲಿದೆ. ರಾಸಾಯನಿಕ ಭೂಮಿಗೆ ಬೀಳಬಾರದು. ಆಗ ಭೂಮಿ ಫಲವತ್ತತೆಯನ್ನು ಕಳೆದುಕೊಳ್ಳುವುದಿಲ್ಲ. ಕೀಟನಾಶಕಗಳ ಕಂಪನಿ ಜಾಸ್ತಿಯಾಗಿದೆ. ಸಿರಿಧಾನ್ಯಗಳ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.

ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷರಾದ ಸತ್ಯನಾರಾಯಣ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಕೆ.ಆರ್.ಮಂಜುನಾಥ್, ಸದಸ್ಯೆ ರೂಪ ಜನಾರ್ಧನ್, ತಾಲೂಕು ಯೋಜನಾಧಿಕಾರಿ ಬಿ.ಅಶೋಕ್ ವೇದಿಕೆಯಲ್ಲಿದ್ದರು. ಉಚಿತವಾಗಿ ಎಲ್ಲರಿಗೂ ರಕ್ತ ತಪಾಸಣೆ ನಡೆಸಲಾಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ