ಮೆಣಸಿನಕಾಯಿ ಬೆಳೆಗೆ ರೋಗ: ಕ್ರಮಕ್ಕೆ ಪರಿಹಾರ

KannadaprabhaNewsNetwork | Published : Dec 14, 2024 12:47 AM

ಸಾರಾಂಶ

Diseases of Chilli Crop: Remedy for Action

-ಶಹಾಪುರದಲ್ಲಿ ಮೆಣಸಿನಕಾಯಿ ಬೆಳೆಗೆ ಎಲೆಮುಟುರು, ಬೂದಿರೋಗ ಬಾಧೆ । ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಮುಂದಾಗಲಿ

------

ಮಲ್ಲಯ್ಯ ಪೋಲಂಪಲ್ಲಿ

ಕನ್ನಡಪ್ರಭ ವಾರ್ತೆ ಶಹಾಪುರ

ರೈತರ ಪಾಲಿಗೆ ಪ್ರಮುಖ ವಾಣಿಜ್ಯ ಬೆಳೆ ಮೆಣಸಿನಕಾಯಿಗೆ ರೋಗಗಳು ಗಂಟು ಬಿದ್ದಿದ್ದು, ಇಳುವರಿ ಕುಂಠಿತ ಜೊತೆಗೆ ಬೆಲೆ ಕಡಿಮೆಯಾಗಿದ್ದು, ರೈತರಿಗೆ ನಷ್ಟದ ಹೊರೆಯಾಗಿದೆ.

ತಾಲೂಕಿನ ಸಗರ, ತಿಪ್ಪನಹಳ್ಳಿ, ರಸ್ತಾಪುರ, ಮಡ್ನಾಳ, ಶಾರದಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮೆಣಸಿನಕಾಯಿ ಬೆಳೆಗೆ ಬೂದಿ ರೋಗ, ಎಲೆ ಮುಟುರು ರೋಗ ಕಾಣಿಸಿಕೊಂಡಿದ್ದು, ರೈತರಿಗೆ ನಷ್ಟದ ಭೀತಿ ಎದುರಾಗಿದೆ. ಬೆಳೆ ಉತ್ತಮವಾಗಿ ಬಂದಿದೆ ಎಂದು ನೆಮ್ಮದಿಯಿಂದ ಇದ್ದ ರೈತರಿಗೆ ಒಂದಿಲ್ಲೊಂದು ತೊಂದರೆ ಬಂದೇ ಬರುತ್ತದೆ. ಇದೀಗ ಮೆಣಸಿನಕಾಯಿ ಬೆಳೆಗೆ ಎಲೆ ಮುಟುರು ಹಾಗೂ ಬೂದಿರೋಗ ಬಾಧಿಸುತ್ತಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎನ್ನುತ್ತಾರೆ ತಿಪ್ಪನಹಳ್ಳಿ ಗ್ರಾಮದ ರೈತ ನಿಂಗಣ್ಣ.

ಬೆಳೆ ವಿವರ: ಕಳೆದ ವರ್ಷ1500 ರಿಂದ 2 ಸಾವಿರ ಹೇಕ್ಟರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗಿತ್ತು. ಮಳೆ ಕೊರತೆ ಹಾಗೂ ಬೆಲೆ ಕುಸಿತದಿಂದ ರೈತರು ತತ್ತರಿಸಿ ಹೋಗಿ ಈ ವರ್ಷ 500 ರಿಂದ 600 ಹೇಕ್ಟರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯುತ್ತಿದ್ದಾರೆ.

ಈಗ ಮೆಣಸಿನಕಾಯಿ ಹೂವು ಬಿಡುವ ಹಂತ ಮುಗಿದು, ಸಂಪೂರ್ಣ ಕಾಯಿ ಬಲಿಯುವ ಹಂತಕ್ಕೆ ಬಂದಿವೆ. ಮೆಣಸಿನಕಾಯಿ ಬೆಳೆಗೆ ಬೂದಿ ಹಾಗೂ ಮುಟುರು ರೋಗ ಬಾಧೆ ಆವರಿಸಿದೆ. ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ರೋಗ ಆವರಿಸುತ್ತಿದೆ. ರೋಗ ಬಂದ ಗಿಡಗಳು ಸಂಪೂರ್ಣ ಒಣಗುತ್ತಿವೆ. ಇನ್ನು ಮೆಣಸಿನಕಾಯಿ ಪೂರ್ಣ ಪ್ರಮಾಣದಲ್ಲಿ ಬೆಳೆಯದೆ ಗಿಡದಲ್ಲಿಯೇ ಬಾಡುತ್ತಿದೆ. ಕೊಳೆಯುವ ಹಂತಕ್ಕೆ ಬಂದಿವೆ. ರೋಗ ಹತೋಟೆಗೆ ರೈತರು ನಾನಾ ಕಸರತ್ತು ನಡೆಸುತ್ತಿದ್ದು, ವಿವಿಧ ಕ್ರಿಮಿನಾಶಕ ಸಿಂಪಡಿಸುತ್ತಿದ್ದಾರೆ.

ಖರ್ಚು ವ್ಯರ್ಥ: ಮೆಣಸಿನಕಾಯಿ ಬೆಳೆಯಲು ರೈತರು ಎಕರೆಗೆ ಕನಿಷ್ಠ 1 ಲಕ್ಷದಿಂದ ರಿಂದ 1.50 ಲಕ್ಷ ರು. ಖರ್ಚು ಮಾಡಿದ್ದಾರೆ. ಈ ವರ್ಷ ದುಬಾರಿ ಕ್ರಿಮಿನಾಶಕ ಸಿಂಪರಣೆಯಿಂದ ಎಕರೆಗೆ ಸರಾಸರಿ 2 ಲಕ್ಷ ರು. ಖರ್ಚಾಗಿದೆ. ಪ್ರತಿವರ್ಷ ಎಕರೆಗೆ ಸರಾಸರಿ 18 ರಿಂದ 25 ಕ್ವಿಂಟಲ್‌ ಇಳುವರಿ ಬರುತ್ತಿತ್ತು. ಆದರೆ, ಈ ವರ್ಷ ರೋಗಗಳು ಕಾಣಿಸಿಕೊಂಡಿರುವುದರಿಂದ 10 ರಿಂದ 12 ಕ್ವಿಂಟಲ್‌ ಇಳುವರಿ ಬರಬಹುದು ಎಂದು ಅಂದಾಜಿಸಿದ್ದು, ಪ್ರಸಕ್ತ ಮಾರುಕಟ್ಟೆಯಲ್ಲೂ ವಹಿವಾಟು ಪಾತಾಳಕ್ಕೆ ಕುಸಿದಿದೆ.

ಸಾಂಬಾರ್ ಪದಾರ್ಥ ಪಟ್ಟಿಗೆ ಸೇರಿಸಲು ಮನವಿ:

ಕೃಷ್ಣ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ರೈತರು ಮೆಣಸಿನಕಾಯಿಯನ್ನು ಬೆಳೆಯುತ್ತಿದ್ದಾರೆ. ಅವರಿಗೆ ಸರಿಯಾದ ಬೆಲೆ ಸಿಗದೇ ಕಂಗಲಾಗಿರುವ ರೈತರ ನೆರವಿಗೆ ಸರ್ಕಾರ ಬರಬೇಕು ಮತ್ತು ಸಾಂಬಾರ್ ಅಭಿವೃದ್ಧಿ ಮಂಡಳಿ ಪಟ್ಟಿಗೆ ಸೇರಿಸಬೇಕು. ಸರ್ಕಾರಕ್ಕೆ ರೈತರಿಗೆ ನೆರವು ನೀಡುವ ಕಾಳಜಿ ಇದ್ದರೆ ರೈತರು ಮೆಣಸಿನಕಾಯಿ ಬಿತ್ತುವ ಸಮಯದಲ್ಲಿ ಬೆಲೆ ನಿಗದಿಪಡಿಸಬೇಕು ಮತ್ತು ಕಡ್ಡಾಯ ಎಲ್ಲಾ ಮೆಣಸಿನಕಾಯಿ ಬೆಳೆಗಾರರಿಗೆ ವಿಮೆ ಮಾಡಿಸಬೇಕು ಎಂದು ಕೃಷ್ಣಾ ಅಚ್ಚುಕಟ್ಟು ಭೂಮಿ ಉಳಿಸಿ ಹೋರಾಟ ಸಮಿತಿ ಕಾರ್ಯದರ್ಶಿ ಅಶೋಕ್ ಮಲ್ಲವಾದಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

* ಮಾರುಕಟ್ಟೆ ತೆರೆಯಲು ಆಗ್ರಹ:

ತಾಲೂಕಿನಲ್ಲಿ ಸಾವಿರಾರು ರೈತರು ಮೆಣಸಿನಕಾಯಿಯನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಅವರಿಗೆ ಸೂಕ್ತವಾದ ಮಾರುಕಟ್ಟೆ ಇಲ್ಲದೆ ಬ್ಯಾಡಗಿ, ಹೈದ್ರಾಬಾದ್, ಗುಂಟೂರ್ ತೀರ್ಥ ದೂರದ ನಗರಗಳಿಗೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಅಲ್ಲಿ ಒಳ್ಳೆ ಬೆಲೆ ಸಿಕ್ಕದೆ, ಚಿಂತೆ ಇಲ್ಲ. ಲಾರಿ ಬಾಡಿಗೆ ಹಮಾಲಿ, ಮೆಣಸಿನಕಾಯಿ ಬೆಳೆಯಲು ಮಾಡಿದ ಸಾಲ ಸೇರಿದರೆ ಸಾಲ ಕಟ್ಟಲಾಗದ ಸ್ಥಿತಿಯಲ್ಲಿ ರೈತರಿದ್ದಾರೆ. ಶಹಾಪುರದಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಮರುಕಟ್ಟೆ ಪ್ರಾರಂಭಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಅಧಿಕಾರಿಗಳು ಜನಪ್ರತಿನಿಧಿಗಳು ಸಚಿವರು ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ರೈತ ಮುಖಂಡ ಬಸವರಾಜ್ ಭಜಂತ್ರಿ ಮನವಿ ಮಾಡಿದ್ದಾರೆ.

------

.....ಕೋಟ್.....1ರೈತರು ಕಷ್ಟಪಟ್ಟು ಬೆಳೆದ ಮೆಣಸಿನಕಾಯಿ ರೋಗಬಾಧೆಯಿಂದ ನಷ್ಟವಾಗಿದ್ದು ರೈತರು ಬದುಕಿನ ಭರವಸೆ ಕಳೆದುಕೊಂಡಿದ್ದಾರೆ. ಸರ್ಕಾರ ಇಂಥ ನಷ್ಟಗಳ ಪಟ್ಟಿ ಮಾಡಿ ಕಷ್ಟದಲ್ಲಿರುವ ರೈತರ ಸಹಾಯಕ್ಕೆ ಬರಬೇಕು. ಮೆಣಸಿನಕಾಯಿಯನ್ನು ಸಾಂಬಾರ್ ಅಭಿವೃದ್ಧಿ ಮಂಡಳಿ ಪಟ್ಟಿಗೆ ಸೇರಿಸಬೇಕು.

-ಅಶೋಕ್ ಮಲ್ಲಾಬಾದಿ, ಕಾರ್ಯದರ್ಶಿ, ಕೃಷ್ಣಾಅಚ್ಚುಕಟ್ಟು ಭೂಮಿ ಉಳಿಸಿ ಹೋರಾಟ ಸಮಿತಿ ಶಹಾಪುರ.

-----

.....ಕೋಟ್.....2 ಹತ್ತಿ, ಹೆಸರು, ತೊಗರಿ ಬೆಳೆಗೆ ಇದ್ದಂತೆ ಮೆಣಸಿನಕಾಯಿ ಬೆಳೆಗೂ ಬೆಂಬಲ ಬೆಲೆ ನೀಡಿದರೆ ರೈತರಿಗೆ ಅನುಕೂಲವಾಗುತ್ತದೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಬರಬೇಕು.- ಶಿಲಾರುದ್ದೀನ್ ತಿಪ್ಪನಹಳ್ಳಿ, ಮೆಣಸಿನಕಾಯಿ ಬೆಳೆಗಾರ ಶಹಾಪುರ.

-----

13ವೈಡಿಆರ್10: ಶಹಾಪುರ ತಾಲೂಕಿನ ಜಮೀನೊಂದರಲ್ಲಿ ರೋಗಗ್ರಸ್ಥ ಮೆಣಸಿನಕಾಯಿ ಬೆಳೆ.

Share this article