ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮನಸ್ಸಿನ ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ಕೊಡುವುದು ಗ್ರಂಥಗಳು ಅಥವಾ ಪುಸ್ತಕಗಳು ಎಂದು ಸರ್ಕಾರಿ ಮಹಿಳಾ ಪ್ರಥಮ ಕಾಲೇಜಿನ ಗ್ರಂಥಪಾಲಕ ಬಾಲಸುಬ್ರಹ್ಮಣ್ಯ ಹೇಳಿದರು.ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಕೇಳುವುದು, ದೃಷ್ಟಿ ಹಾಗೂ ಓದು ಇವುಗಳಲ್ಲಿ ಓದುವುದು ಅತ್ಯಂತ ಮಹತ್ವದ್ದಾಗಿದೆ ಎಂದರು. ಇತಿಹಾಸ, ವರ್ತಮಾನಗಳನ್ನು ಮುಖಾಮುಖಿಯಾಗಿಸುವ ಪುಸ್ತಕಗಳು ಓದುಗರನ್ನು ಸತ್ಯಶೋಧನೆಯ ಕಡೆಗೆ ಕೊಂಡೊಯ್ಯುತ್ತವೆ. ಪುಸ್ತಕ ಓದುವ ಸಂಸ್ಕೃತಿಗೆ ಒತ್ತು ನೀಡಿದರೆ ಮನಸ್ಸನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುವುದರ ಜೊತೆಗೆ ಜ್ಞಾನಾರ್ಜನೆಯನ್ನು ಹೆಚ್ಚಿಸುತ್ತದೆ ಎಂದರು.೧೯೫೦ರಲ್ಲಿ ಅಮೆರಿಕಾದಲ್ಲಿ ಟಿ.ವಿ, ರೇಡಿಯೋಗಳಿಂದಾಗಿ ಓದುವವರ ಸಂಖ್ಯೆ ಕಡಿಮೆಯಾದ್ದರಿಂದ ಜನರಲ್ಲಿ ಪುಸ್ತಕ ಓದುವುದರ ಜಾಗೃತಿ ಮೂಡಿಸುವ ಸಲುವಾಗಿ ಗ್ರಂಥಾಲಯ ಸಪ್ತಾಹವನ್ನು ಎಚ್ಚರಗೊಳ್ಳಿ ಮತ್ತು ಓದಿ ಎಂಬ ಘೋಷವಾಕ್ಯದೊಂದಿಗೆ ಅಚರಣೆಗೆ ತರಲಾಯಿತು, ಅಲ್ಲಿಂದ ನವೆಂಬರ್ ೧೪ನ್ನು ರಾಷ್ಟ್ಟೀಯ ಗ್ರಂಥಾಲಯ ಸಪ್ತಾಹ ಆಚರಿಸಲಾಗುತ್ತಿದೆ ಎಂದರು. ಗ್ರಂಥಗಳನ್ನು ಅಧ್ಯಯನ ಮಾಡಿದವರು ಮಹೋನ್ನತ ನಾಯಕರಾಗಿ ಬೆಳೆದ ಉದಾಹರಣೆಗಳು ಸಾಕಷ್ಟಿವೆ. ಆದ್ದರಿಂದಲೇ ಡಾ.ಬಿ.ಆರ್.ಅಂಬೇಡ್ಕರ್ ಅವರು ಗ್ರಂಥಾಲಯಗಳು ದೇವಾಲಯವಿದ್ದಂತೆ ಎಂದರು. ಗ್ರಂಥಗಳಿಗೆ ನಮ್ಮ ಸಂಸ್ಕೃತಿಯಲ್ಲಿ ಪೂಜ್ಯನೀಯ ಭಾವನೆ ಇದೆ ಎಂದರು.
ಪುಸ್ತಕಗಳ ಓದುವಿಕೆ ನಿರಂತರವಾಗಿದ್ದರೆ ವ್ಯಕ್ತಿ ಬೌದ್ಧಿಕವಾಗಿಯೂ ಜೀವಂತವಾಗಿರುತ್ತಾನೆ. ಜ್ಞಾನಾರ್ಜನೆಗೆ ಪೂರಕವಾದ ಗ್ರಂಥಾಲಯಗಳು ದೇವಾಲಯಗಳಿದ್ದಂತೆ. ಹಣವಿದ್ದರೆ ಕಳೆದುಹೋಗಬಹುದು. ಆದರೆ, ಪುಸ್ತಕಗಳಿಂದ ಪಡೆದ ಜ್ಞಾನ ಕಳೆದು ಹೋಗಲು ಸಾಧ್ಯವೇ ಇಲ್ಲ ಜ್ಞಾನವಿಸ್ತಾರಕ್ಕೆ ಪೂರಕವಾಗಿರುವ ಪುಸ್ತಕಗಳನ್ನು ಅಧ್ಯಯನ ಮಾಡಲು ಯುವ ವಿದ್ಯಾರ್ಥಿಗಳು ಮುಂದಾಗಬೇಕು ಎಂದರು. ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿಯೂ ಪುಸ್ತಕಗಳು ಮಹತ್ತರ ಪಾತ್ರ ವಹಿಸುತ್ತಿದ್ದು, ಸಮಾಜ ಪರಿವರ್ತನೆ ಮತ್ತು ದೇಶದ ಅಭಿವೃದ್ಧಿಯಲ್ಲಿ ಪರಿಣಾಮಕಾರಿ ಸಾಧನಗಳಾಗಿವೆ. ಸ್ಪರ್ಧಾತ್ಮ,ಕ ಪರೀಕ್ಷೆಗಳನ್ನು ಎದುರಿಸಲು ಸಹ ಪುಸ್ತಕಗಳು ಪೂರಕವಾಗಿವೆ ಎಂದರು.ಜ್ಞಾನದ ಗಣಿ: ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎನ್. ಮಹದೇವಸ್ವಾಮಿ ಮಾತನಾಡಿ, ಗ್ರಂಥಗಳು ಮತ್ತು ಪುಸ್ತಕಗಳು ಜ್ಞಾನದ ಗಣಿಯಾಗಿವೆ ಎಂದರು. ಗ್ರಂಥಾಲಯಗಳು ಎಷ್ಟು ಮಹತ್ವದ್ದಾಗಿದೆ ಎಂಬುದಕ್ಕೆ ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಇವತ್ತಿಗೂ ಎರಡು ಕುರ್ಚಿಗಳನ್ನು ಖಾಲಿ ಬಿಟ್ಟಿದೆ ಇವುಗಳನ್ನು ಸ್ಮಾರಕವನ್ನಾಗಿಸಿದೆ. ಏಕೆಂದರೆ ಒಂದು ಕುರ್ಚಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಕುಳಿತು ಪುಸ್ತಕಗಳನ್ನು ಓದಿದ್ದರೆ, ಇನ್ನೊಂದರಲ್ಲಿ ಕಾರ್ಲ್ ಮಾರ್ಕ್ಸ್ ಕುಳಿತು ಓದಿದ್ದು. ಈ ಗ್ರಂಥಾಲಯದಲ್ಲಿ ಕುಳಿತು ಓದಿ ಇಬ್ಬರು ಮಹಾನ್ ವ್ಯಕ್ತಿಗಳಾದರು, ಇದು ಗ್ರಂಥಾಲಯದ ಮಹತ್ವವನ್ನು ಸಾರುತ್ತದೆ ಎಂದರು.
ನಮ್ಮ ದೇಶದ ಪುರಾತನ ನಳಂದ ವಿಶ್ವವಿದ್ಯಾಲಯ ಅತ್ಯಂತ ಮಹತ್ವವಾದದ್ದು, ಅದು ದಾಳಿಕೋರರಿಗೆ ತುತ್ತಾಗಿ ಬೆಂಕಿ ಹಚ್ಚಿದಾಗ ಅಲ್ಲಿದ್ದ ತಾಳೆಗರಿ ಸೇರಿದಂತೆ ಮಹತ್ವದ ಗ್ರಂಥಗಳು ಭಸ್ಮವಾಗಲು ಸುಮಾರು ೩ರಿಂದ ೪ ತಿಂಗಳು ಬೇಕಾಯಿತು ಎಂದರು.ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದೇವರಾಜಮೂರ್ತಿ ಮಾತನಾಡಿ, ಪುಸ್ತಕಕ್ಕಿಂತ ಮತ್ತೊಬ್ಬ ಒಳ್ಳೆಯ ಸ್ನೆಹಿತ ಇರಲು ಸಾಧ್ಯವಿಲ್ಲ. ಉತ್ತಮ ವ್ಯಕ್ತಿತ್ವ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಲು ಹಾಗೂ ಮಾನವೀಯತೆ ಬೆಳೆಸಲು ಸಹಕಾರಿಯಾಗುವ ಪುಸ್ತಕಗಳು ಜ್ಞಾನ ಕೇಂದ್ರಗಳು. ಜ್ಞಾನಪರಿಧಿಯನ್ನು ವಿಸ್ತರಿಸಲು ಸಹಕಾರಿಯಾಗಿರುವ ಪುಸ್ತಕಗಳನ್ನು ಓದುವ ಸಂಸ್ಕೃತಿ ಹೆಚ್ಚಾಗುವ ಅಗತ್ಯವಿದೆ ಎಂದರು. ಗ್ರಂಥಪಾಲಕ ಡಾ.ಜಿ.ಎಂ.ಗುರುಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ವಾರವು ವಾರ್ಷಿಕ ಆಚರಣೆಯಾಗಿದ್ದು ಓದುಗರಲ್ಲಿ, ವಿಶೇಷವಾಗಿ ಮಕ್ಕಳಲ್ಲಿ ಗ್ರಂಥಾಲಯದ ಬಗ್ಗೆ ಜಾಗೃತಿ ಮೂಡಿಸುವುದು, ಆಚರಣೆಯ ಉದ್ದೇಶವಾಗಿದೆ ಎಂದರು. ಸಪ್ತಾಹದ ಅಂಗವಾಗಿ ಕಾಲೇಜಿನ ಗ್ರಂಥಾಲಯದಲ್ಲಿ ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿತ್ತು.