ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಪರಿಸರ ಹಾನಿಯಿಂದಾಗಿ ಪ್ರಕೃತಿ ಸಮತೋಲನ ಕಳೆದುಕೊಳ್ಳುತ್ತಿದ್ದು, ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಪ್ರಕೃತಿಯ ಕೋಪದಿಂದ ಸುನಾಮಿ, ವಯನಾಡು ಮತ್ತು ಶೀರೂರುನಲ್ಲಿ ನಡೆದ ಘಟನೆಗಳು ನಮ್ಮ ಕಣ್ಣ ಮುಂದಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಪಟ್ಟಣದ ಗ್ರಾಮೀಣ ಸೌಧದ ಎದುರು ಶುಕ್ರವಾರ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ನವದೆಹಲಿ ಹಾಗೂ ಪರ್ಯಾವರಣ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಶೃಂಗೇರಿಯಿಂದ ಕಿಷ್ಕೆಂಧೆವರೆಗಿನ ನಿರ್ಮಲ ತುಂಗಭದ್ರಾ ಪಾದಯಾತ್ರೆಯ ಸಲುವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ವಯಸ್ಸಿನ ಅಂತರವನ್ನು ಲೆಕ್ಕಿಸದೇ ಸಂಕಲ್ಪದ ಮೂಲಕ ಆಂದೋಲನಕ್ಕೆ ಧುಮುಕಿರುವ ಮಹನೀಯರ ಕಾಳಜಿ ಮತ್ತು ವಿದ್ಯಾರ್ಥಿಗಳೂ ಈ ಆಂದೋಲನ ಆಸಕ್ತಿ ಅವಿಸ್ಮರಣೀಯ ಎಂದು ಶ್ಲಾಘಿಸಿದರು.ಪರಿಸರವಾದಿ ಅನಂತ ಹೆಗ್ಡೆ ಆಶಿಸರ ಮಾತನಾಡಿ, ಮಲೆನಾಡಿಗೆ ನದಿಗಳೇ ಜೀವನಾಡಿಯಾಗಿದ್ದು, ಈ ಭಾಗದ ನದಿಗಳು ಮತ್ತು ಪಶ್ಚಿಮ ಘಟ್ಟದ ಹಿತರಕ್ಷಣೆಗಾಗಿ ಸುಮಾರು ನಾಲ್ಕು ದಶಕಗಳಿಂದ ಹಲವಾರು ಹೋರಾಟಗಳು ಶಾಂತಿಯುತವಾಗಿ ನಡೆದಿರೋದು ಗಮನಾರ್ಹವಾಗಿದೆ. ಪರಿಸರ ಕಲುಷಿತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅತ್ಯಂತ ಅಪರೂಪದ ಸಸ್ಯ ಸಂಕುಲಗಳು ಮಾತ್ರವಲ್ಲದೇ ಸಮೃದ್ಧವಾಗಿದ್ದ ನದಿಗಳೂ ಒಣಗುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಭವಿಷ್ಯ ಕರಾಳವಾಗುವ ಮುನ್ನ ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಪಾದಯಾತ್ರೆಯ ನೇತೃತ್ವ ವಹಿಸಿರುವ ಡಾ. ಎಂ.ಬಿ. ಕುಮಾರಸ್ವಾಮಿ ಮಾತನಾಡಿ, ಕರ್ನಾಟಕ, ಆಂಧ್ರ ರಾಜ್ಯಗಳ ಜನತೆಯ ಜೀವನಾಡಿಯಾಗಿರುವ ತುಂಗಭದ್ರಾ ನದಿಯ ಪಾವಿತ್ರ್ಯತೆಗೆ ಧಕ್ಕೆ ಉಂಟಾಗಿರುವುದು ಮಾತ್ರವಲ್ಲದೇ ನದಿಯ ಉಳಿವು ಅಳಿವಿನ ಪ್ರಶ್ನೆ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಈ ನದಿಗಳ ನೀರು ಕುಡಿಯುವ ಎಲ್ಲರಿಗೂ ಇದರ ರಕ್ಷಣೆಯ ಹೊಣೆಗಾರಿಕೆ ಇದೆ. ತಾಲೂಕಿನಲ್ಲಿ ನಡೆದ ಯಶಸ್ವಿ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರೂ ಅಭಿನಂದನಾರ್ಹರಾಗಿದ್ದಾರೆ ಎಂದರು.
ಶುಕ್ರವಾರ ಮುಂಜಾನೆ ಭೀಮನಕಟ್ಟೆಯಿಂದ ಹೊರಟ ಪಾದಯಾತ್ರೆಯನ್ನು ಶಿವರಾಜಪುರದಲ್ಲಿ ಸ್ವಾಗತಿಸಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನದಿಯ ರಕ್ಷಣೆ ಕುರಿತ ನಾಟಕ ಪ್ರದರ್ಶನ ಹಾಗೂ ಸಭೆಯನ್ನು ನಡೆಸಲಾಯಿತು. ಪಟ್ಟಣದಲ್ಲಿ ನಡೆದ ಪಾದಯಾತ್ರೆಯ ನಂತರ ಬಾಳಗಾರು ರಾಘವೇಂದ್ರ ಸ್ವಾಮಿ ಮಠದವರೆಗೆ ಬೀಳ್ಕೊಡಲಾಯ್ತು.ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್, ಸಿಒ ನಾಗರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಒಕ್ಕಲಿಗರ ಸಂಘದ ಅಧ್ಯಕ್ಷ ಬಾಳೇಹಳ್ಳಿ ಪ್ರಭಾಕರ್ ಮುಂತಾದವರು ಇದ್ದರು.