ಹಳಿಯಾಳ: ಅತಿವೃಷ್ಟಿಯಿಂದ ಈ ಬಾರಿ ಎಲ್ಲ ಬೆಳೆಗಳು ನಾಶವಾಗಿದ್ದರಿಂದ ರೈತರು ಸಂಕಷ್ಟಕೊಳ್ಳಗಾಗಿದ್ದಾರೆ. ಅದಕ್ಕಾಗಿ ಅವರು ತಮಗೆ ಹೆಚ್ಚು ದರ ನೀಡುವ ಅಥವಾ ಹೆಚ್ಚು ಲಾಭ ನೀಡುವ ಕಾರ್ಖಾನೆಗೆ ಕಬ್ಬನ್ನು ನೀಡಲು ಸ್ವತಂತ್ರರು ಎಂಬ ತೀರ್ಮಾನವನ್ನು ಹಳಿಯಾಳ, ಧಾರವಾಡ, ಕಲಘಟಗಿ ಮತ್ತು ಅಳ್ನಾವರ ಮತ್ತು ಅಕ್ಕಪಕ್ಕದ ಊರಿನ ಕಬ್ಬು ಬೆಳೆಗಾರರು ಸರ್ವಾನುಮತದಿಂದ ತೆಗೆದುಕೊಂಡಿದ್ದಾರೆ.
ಶನಿವಾರ ಉತ್ತರಕನ್ನಡ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಬ್ಬು ಬೆಳೆಗಾರರು ಅಪೇಕ್ಷಿಸದ ದರ ಘೋಷಣೆಯಾಗದ ಹಿನ್ನೆಲೆಯಲ್ಲಿ ತೀವ್ರವಾಗಿ ಅಸಮಾಧಾನಗೊಂಡು ಸಭೆಯಿಂದ ಹೊರಬಂದ ಕಬ್ಬು ಬೆಳೆಗಾರರು ತಾಲೂಕು ಆಡಳಿತ ಸೌಧದ ಆವರಣದಲ್ಲಿ ಸಂಜೆ ತುರ್ತು ಸಭೆ ನಡೆಸಿದರು.ಸಭೆಯನ್ನುದ್ದೇಶಿಸಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುಮಾರ ಬೊಬಾಟೆ, ತಾಲೂಕಾಧ್ಯಕ್ಷ ಶಂಕರ ಕಾಜಗಾರ, ನಾಗೇಂದ ಜಿವೋಜಿ, ಸಾತೇರಿ ಗೋಡೆಮನಿ, ಸುರೇಶ ಶಿವಣ್ಣನವರ ಮಾತನಾಡಿ ಸಭೆಯಲ್ಲಿ ನಡೆದ ಚರ್ಚೆ, ಕಾರ್ಖಾನೆಯ ನಿಲುವಗಳನ್ನು ಸ್ಪಷ್ಟಪಡಿಸಿದರು.
ಕಾರ್ಖಾನೆಯವರು ಕಬ್ಬು ಕಟಾವು ಮಾಡಲು ಶ್ರೇಣಿಯಾಧರಿತ ಯಾದಿ ಘೋಷಿಸಲಿದ್ದಾರೆ. ಅದಲ್ಲದೇ ಯಾವುದೇ ಕಾರಣಕ್ಕೂ ಕಬ್ಬು ಕಟಾವ್ ಮಾಡಲು ಯಾವುದೇ ಲಗಾಣಿ ಹೆಚ್ಚುವರಿ ಹಣ ನೀಡಬಾರದು. ಅಂತಹ ಬೇಡಿಕೆ ಬಂದಲ್ಲಿ ಪೊಲೀಸರ ಅಥವಾ ಸಂಘದ ಗಮನಕ್ಕೆ ತರಬೇಕು. ಕೇಂದ್ರ ಸರ್ಕಾರದ ಹೊಸ ಯೋಜನೆಯಂತೆ ರೈತ ತನ್ನ ಕೃಷಿ ಉತ್ಪನ್ನಗಳನ್ನು ತನಗೆ ಬೇಕಾದಲ್ಲಿ ಮಾರಾಟ ಮಾಡಬಹುದು. ಅದಕ್ಕಾಗಿ ರೈತರು ತಮ್ಮ ಕಬ್ಬನ್ನು ಯಾವ ಕಾರ್ಖಾನೆಗೆ ನೀಡಬೇಕೆಂಬ ತೀರ್ಮಾನವನ್ನು ಕೈಗೊಳ್ಳಲು ಸ್ವತಂತ್ರರು. ಹೀಗೆ ಕಬ್ಬು ಕಟಾವು ಮತ್ತು ಸಾಗಾಟ ಮಾಡಲು ಸಮಸ್ಯೆಗಳು ಎದುರಾದಲ್ಲಿ ಸ್ಥಳೀಯ ಕಬ್ಬು ಬೆಳೆಗಾರರ ಸಂಘದ ಗಮನಕ್ಕೆ ತರಲು ತೀರ್ಮಾನಿಸಲಾಯಿತು.ಸಭೆಯಲ್ಲಿ ಹಳಿಯಾಳ, ಧಾರವಾಡ, ಕಲಘಟಗಿ, ಅಳ್ನಾವರ ಹಾಗೂ ಅಕ್ಕಪಕ್ಕದ ತಾಲೂಕಿನ ಕಬ್ಬು ಬೆಳೆಗಾರರು ಇದ್ದರು.
ದೇಶಪಾಂಡೆ ವಿರುದ್ಧದ ಹೇಳಿಕೆ ಸರಿಯಲ್ಲ: ಕೃಷ್ಣ ಪಾಟೀಲಹಳಿಯಾಳ: ಶಾಸಕ ಆರ್.ವಿ. ದೇಶಪಾಂಡೆಯವರು ರೈತರ ಹಾಗೂ ಕಬ್ಬು ಬೆಳೆಗಾರರ ಸಮಸ್ಯೆಗಳ ಪರವಾಗಿ ಸ್ಪಂದಿಸಿದರ ಫಲವಾಗಿ ಕ್ಷೇತ್ರದ ಮತದಾರರು ಅವರನ್ನು 9 ಬಾರಿ ಆಯ್ಕೆ ಮಾಡಿದ್ದಾರೆ. ಕೆಲವು ರೈತ ಮುಖಂಡರು ಹಾಗೂ ಮಾಜಿ ಶಾಸಕರು ದೇಶಪಾಂಡೆಯವರ ವ್ಯಕ್ತಿತ್ವಕ್ಕೆ ತೇಜೋವಧೆ ಮಾಡುವಂಥ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ ತಿಳಿಸಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2022- 23ನೇ ಸಾಲಿನಲ್ಲಿ ಕೆಲವು ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದರು. ಆಗ ಸಮಸ್ಯೆಯನ್ನು ಬಗೆಹರಿಸಲು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ನಾಯಕ ದೇಶಪಾಂಡೆಯವರನ್ನು ಅವರ ಘನತೆ ಸ್ಥಾನ ಮಾನ ವಯಸ್ಸಿಗೂ ಗೌರವ ತೋರದೇ ಖಾಲಿ ನೆಲದ ಮೇಲೆ ಕುಳಿತುಕೊಳ್ಳುವಂತೆ ಮಾಡಿದರು. ಆದರೆ ಇದೇ ಕಬ್ಬು ಬೆಳೆಗಾರರು ಈಗ ದೇಶಪಾಂಡೆಯವರು ರೈತರ ಪರವಾಗಿಲ್ಲವೆಂದು ಆರೋಪ ಮಾಡುತ್ತಿದ್ದಾರೆ ಎಂದರು.ಕಾಂಗ್ರೆಸ್ ವಕ್ತಾರ ಉಮೇಶ ಬೊಳಶೆಟ್ಟಿ ಮಾತನಾಡಿ, ದೇಶಪಾಂಡೆಯವರು 9 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಅವರ ಜನಪರ ಕಾಳಜಿಯನ್ನು ತೋರುತ್ತದೆ. ರಾಜ್ಯದಲ್ಲಿ ಅತಿ ಹೆಚ್ಚು ಬಾಂದಾರುಗಳನ್ನು ನಿರ್ಮಿಸಿದ್ದು ದೇಶಪಾಂಡೆ ಎಂದರು.ಯುವ ಕಾಂಗ್ರೆಸ್ ಅಧ್ಯಕ್ಷ ರವಿ ತೋರಣಗಟ್ಟಿ, ಕೆಪಿಸಿಸಿ ಸದಸ್ಯ ಸುಭಾಸ್ ಕೊರ್ವೆಕರ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಹಳಿಯಾಳ ಪುರಸಭೆ ಅಧ್ಯಕ್ಷ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ನಾಯಕರಾದ ಅಜರ ಬಸರಿಕಟ್ಟಿ, ಬಿ.ಡಿ. ಚೌಗಲೆ, ಸತ್ಯಜಿತ ಗಿರಿ, ಶಂಕರ ಬೆಳಗಾಂವಕರ, ಫಯಾಜ್ ಶೇಖ್, ಅಣ್ಣಪ್ಪ ವಡ್ಡರ, ಸುರೇಶ ವಗ್ರಾಯಿ, ಅನಿಲ ಚವ್ಹಾಣ ಇತರರು ಇದ್ದರು.