ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಗ್ರಾಮದಿಂದ ದುಡಿಯಲು, ನೌಕರಿ ಮಾಡಲು ಮತ್ತಿತರ ಕಾರಣಗಳಿಂದ ಊರಬಿಟ್ಟು ಹೋದವರು ದುರ್ಗಾದೇವಿ ಜಾತ್ರೆಯಲ್ಲಿ ಸೇರುತ್ತೀರಿ. ಇಲ್ಲಿನ ಸಂತೋಷ, ಸಂಭ್ರಮ ಕಳೆಗಟ್ಟಿರುವುದು ಖುಷಿ ತಂದಿದೆ. ಜಾತ್ರೆಗಳಿಂದ ಪರಸ್ಪರ ಮನಸ್ತಾಪಗಳು ದೂರವಾಗಿ ಎಲ್ಲರಲ್ಲೂ ಒಗ್ಗೂಡಿಸುತ್ತವೆ ಎಂದು ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.ಸೋಮವಾರ ರಾತ್ರಿ ತಾಲೂಕಿನ ಹುಲ್ಲಿಕೇರಿ ತಾಂಡಾದಲ್ಲಿ ದುರ್ಗಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಜರುಗಿದ ರಾಜ್ಯಮಟ್ಟದ ಡಾನ್ಸ್, ಡಾನ್ಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಂಜಾರ ಕಲೆ ಶ್ರೀಮಂತವಾಗಿದೆ. ಅದನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಅಗತ್ಯವಿದೆ ಎಂದು ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ ಮಾತನಾಡಿ, ಜಾತ್ರೆಗಳಿಗೆ ತನ್ನದೆ ಪರಂಪರೆಯಿದೆ. ಬಂಜಾರ ಸಮುದಾಯ ಹಲವು ವೈವಿದ್ಯತೆ ಹಾಗೂ ವೈಶಿಷ್ಟ್ಯತೆಯಿಂದ ಕೂಡಿದೆ. ಈ ಸಮುದಾಯದ ಆಚಾರ, ವಿಚಾರಗಳು ಹಿಂದಿನಿಂದಲೂ ಮುಂದುವರಿದುಕೊಂಡು ಬಂದಿವೆ. ತಾಲೂಕಿನ ಹುಲ್ಲಿಕೇರಿ ತಾಂಡಾ ಶಿಕ್ಷಣ, ಶ್ರಮದ ಬದುಕು ಹಾಗೂ ಸಂಘಟನೆಗೆ ಸುತ್ತ ಮುತ್ತಲಿನ ಗ್ರಾಮಗಳಿಗೆ ಮಾದರಿಯಾಗಿದೆ. ಸಂತ ಸೇವಾಲಾಲ್ ಹಾಗೂ ಶ್ರೀ ದುರ್ಗಾ ದೇವಿ ಎಲ್ಲರಲ್ಲೂ ಸುಖ, ಶಾಂತಿ ಸಮೃದ್ಧಿ ತರಲಿ ಎಂದರು.ಸಾನ್ನಿಧ್ಯ ವಹಿಸಿದ್ದ ನೀಲಾನಗರದ ಬಂಜಾರಾ ಶಕ್ತಿ ಪೀಠದ ಶ್ರೀ ಕುಮಾರ ಮಹಾರಾಜರು ಮಾತನಾಡಿ, ಸಮುದಾಯದ ಯುವಕರು ಕ್ರಿಯಾಶೀಲರಾಗಿದ್ಧೀರಿ. ಎಲ್ಲರು ಉತ್ತಮ ಸಂಸ್ಕಾರ, ಶಿಕ್ಷಣ ಪಡೆಯಬೇಕು. ಬಂಜಾರ ಸಮುದಾಯದವರು ಬಡಿದು ಬದುಕುವವರಲ್ಲ. ದುಡಿದು ಬದುಕುವವರು. ಸಮಾಜದಲ್ಲಿ ಶಾಂತಿ, ಸಂಘಟನೆ ಮುಖ್ಯವಾಗಿದೆ. ಶಿಕ್ಷಣ ಎಂಬ ಹುಲಿಯ ಹಾಲನ್ನು ಕುಡಿದಾಗ ಬದಲಾವಣೆ ಸಾಧ್ಯ ಎಂದು ಹೇಳಿದರು.
ಸಂತ ಸೇವಾಲಾಲ್ ಮತ್ತು ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಾಯಿತು. ಜಿಪಂ ಉಪಕಾರ್ಯದರ್ಶಿ ಅಮರೇಶ ನಾಯಕ್, ಮನೋಹರ ರಾಠೋಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಮಹೇಶ ಬಿಜಾಪೂರ, ಅನ್ವರ್ ಖಾನ ಪಠಾಣ, ಮುತ್ತಣ್ಣ ಕಳ್ಳಿಗುಡ್ಡ, ಜಿಪಂ ಮಾಜಿ ಉಪಾಧ್ಯಕ್ಷೆ ಮಂಜುಳಾ ರಾಠೋಡ, ಜಿಪಂ ಮಾಜಿ ಸದಸ್ಯ ಡಾ.ಎಂ.ಜಿ. ಕಿತ್ತಲಿ, ಸಂತೋಷ ನಾಯನೇಗಲಿ, ರಮೇಶ ಬೂದಿಹಾಳ, ಯಮನಪ್ಪ ಹಿರೇಗೌಡ್ರ, ಎಂಜಿನಿಯರ್ ಬಿ.ಎಂ. ರಾಠೋಡ, ಶೇಖರ ರಾಠೋಡ, ಮೋತಿಲಾಲ ರಾಠೋಡ, ಪಿಂಟು ರಾಠೋಡ ಇತರರು ಇದ್ದರು.