ಕನ್ನಡಪ್ರಭ ವಾರ್ತೆ ರಾಮದುರ್ಗ
ಶ್ರೀ ಧನಲಕ್ಷ್ಮೀ ಸಹಕಾರ ಸಕ್ಕರೆ ಕಾರ್ಖಾನೆ ಷೇರುದಾರರಿಗೆ ನಾಗರ ಪಂಚಮಿ ಹಬ್ಬಕ್ಕೆ ಸಿಹಿ ನೀಡಲು ಕಾರ್ಖಾನೆ ನಿರ್ಧಾರ ಮಾಡಿದ್ದು, ಅ.15ರವರೆಗೆ ರಿಯಾಯತಿ ದರದಲ್ಲಿ ಸಕ್ಕರೆ ವಿತರಣೆ ಮಾಡುಲಾಗುತ್ತಿದೆ ಎಂದು ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಹೇಳಿದರು.ಗುರುವಾರ ತಾಲೂಕಿನ ಖಾನಪೇಠದಲ್ಲಿರುವ ಕಾರ್ಖಾನೆಯ ಆವರಣದಲ್ಲಿ ಸಕ್ಕರೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದುಳಿದ ತಾಲೂಕಾಗಿದ್ದ ರಾಮದುರ್ಗದಲ್ಲಿ ಸಹಕಾರಿ ರಂಗದಲ್ಲಿ ಕಾರ್ಖಾನೆ ಆರಂಭಕ್ಕೆ ಷೇರು ಖರೀದಿ ಮಾಡಿರುವ ರೈತರ ಋಣ ತೀರಿಸಲು ಸಾಧ್ಯವಿಲ್ಲ. ಅವರಿಗೆ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಿಸಲು 12 ವರ್ಷದ ಹಿಂದೆ ಆಡಳಿತ ಮಂಡಳಿ ನಿರ್ಧಾರ ಮಾಡಿದ್ದು, ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದರು.
ಸಹಕಾರಿ ರಂಗದಲ್ಲಿ ಸ್ಥಾಪನೆಯಾದ ಕೆಲ ಸಕ್ಕರೆ ಕಾರ್ಖಾನೆಗಳು ಷೇರುದಾರರಿಗೆ ಏನೂನೀಡುತ್ತಿಲ್ಲ. ಆದರೆ, ನಮ್ಮ ಕಾರ್ಖಾನೆ ರೈತರಿಗೆ ರಿಯಾಯತಿ ದರದಲ್ಲಿ ಸಕ್ಕರೆ ನೀಡುತ್ತಿದ್ದು, ಆ.೧೫ರವರೆಗೆ ರಜಾ ದಿನ ಹೊರತುಪಡಿಸಿ ಪ್ರತಿದಿನ ವಿತರಣೆ ಮಾಡಲಾಗುವುದು. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ರೈತರಿಗೆ ಡಿವಿಡೆಂಡ್ ನೀಡುವ ಬದಲು ರಿಯಾಯತಿ ದರದಲ್ಲಿ ಸಕ್ಕರೆ ನೀಡಲು ಆರಂಭಿಸಿದ್ದು, ಮುಂದೆಯೂ ಕೂಡ ಸಕ್ಕರೆ ವಿತರಣೆ ಕಾರ್ಯ ಮುಂದುವರಿಯಲಿದೆ ಎಂದು ಹೇಳಿದ ಅವರು, ಕಾರ್ಖಾನೆಯ ಆಡಳಿತ ಮಂಡಳಿಯಲ್ಲಿ ಒಗ್ಗಟ್ಟು ಇರುವ ಪರಿಣಾಮ ಚೆನ್ನಾಗಿ ನಡೆಯುತ್ತಿದೆ. ಇಲ್ಲದಿದ್ದರೆ ಕಾರ್ಖಾನೆ ದಿವಾಳಿಯಾಗುತ್ತಿತ್ತು. ಷೇರುದಾರರ ಸಹಕಾರ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಿದರು.
ಕಿಲ್ಲಾ ತೊರಗಲ್‌ದ ಚನ್ನಮಲ್ಲ ಶಿವಾಚಾರ್ಯರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಖಾನೆಯ ಉಪಾಧ್ಯಕ್ಷ ಬಸನಗೌಡ ಪಾಟೀಲ, ನಿರ್ದೇಶಕರಾದ ಬಿ.ಎಂ. ತುಪ್ಪದ, ಅಡಿವೆಪ್ಪ ಸುರಗ, ಸುರೇಶ ಡುಳ್ಳೋಳ್ಳಿ, ದುಂಡಪ್ಪ ದೇವರಡ್ಡಿ, ಶಿವಪ್ಪ ಮೇಟಿ, ಶಂಕರಗೌಡ ಪಾಟೀಲ, ಎಂ.ಎಂ. ಆತಾರ, ಪ್ಯಾರಿ ಶುಗರ್ಸ್ ನ ಶಿವಸುಬ್ರಮಣ್ಯ ಸೇರಿದಂತೆ ಹಲವರಿದ್ದರು.