ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಫೆ.1 ಮತ್ತು 2ರಂದು ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ‘ಸಾಹಿತಿ ಡಿ.ಎಸ್. ನಾಗಭೂಷಣ್ ಮಹಾವೇದಿಕೆ’ಯಲ್ಲಿ ಶಿವಮೊಗ್ಗ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು.ನಗರದ ಪ್ರೆಸ್ ಟ್ರಸ್ಟ್‌ನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ. ಎಸ್.ಪಿ. ಪದ್ಮಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು,
ಫೆ.1ರಂದು ಬೆಳಗ್ಗೆ 9.30ಕ್ಕೆ ಸಾಹಿತ್ಯ ಗ್ರಾಮದ ಆವರಣದಲ್ಲಿ ಧ್ವಜಾರೋಹಣ ನಡೆಯಲ್ಲಿದ್ದು, ಹುಲಿ-ಸಿಂಹಧಾಮ ಕಾರ್ಯನಿರ್ವಹಣಾಧಿಕಾರಿ ಮುಕುಂದಚಂದ್ರ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೀಶ್, ರಾಷ್ಟ್ರಧ್ವಜ ನಾಡಧ್ವಜ ಹಾಗೂ ಪರಿಷತ್ತಿನ ಧ್ವಜಾರೋಹಣ ಕಾರ್ಯ ನೆರವೇರಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಗೋಪಾಳದ ಆನೆ ಪ್ರತಿಮೆ ವೃತ್ತದಿಂದ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಪ್ರಾರಂಭವಾಗುವ ಸಮ್ಮೇಳನಾಧ್ಯಕ್ಷರ ರಾಜಬೀದಿ ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಉಮೇಶ್ ಹಾಲಾಡಿ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.ಬೆಳಗ್ಗೆ 11 ಗಂಟೆಗೆ ನಡೆಯುವ ‘ಜ್ಯೋತಿ ಬೆಳಗೋಣ ಬನ್ನಿ’ ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಸಾಪ ರಾಜ್ಯಾಧ್ಯಕ್ಷ, ನಾಡೋಜ ಮಹೇಶ ಜೋಷಿ, ಹಿರಿಯ ಸಾಹಿತಿ ಎಲ್.ಎನ್. ಮುಕುಂದರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಿರಿಯ ಸಾಹಿತಿ ಡಾ. ಎಸ್.ಪಿ. ಪದ್ಮಪ್ರಸಾದ್ ಸಮ್ಮೇಳನಾಧ್ಯಕ್ಷರ ಮಾತುಗಳನ್ನಾಡಲಿದ್ದಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಲಕ್ಷ್ಮಣ ಕೊಡಸೆ ಉಪಸ್ಥಿತರಿರುವರು. ಶಾಸಕರಾದ ಶಾರದಾ ಪೂರ್ಯಾನಾಯ್ಕ, ಎಸ್.ಎನ್. ಚನ್ನಬಸಪ್ಪ, ಬೇಳೂರು ಗೋಪಾಲಕೃಷ್ಣ, ವಿಧಾನ ಪರಿಷತ್ತು ಸದಸ್ಯರಾದ ಎಸ್.ಎಲ್. ಭೋಜೇಗೌಡ, ಡಿ.ಎಸ್. ಅರುಣ್, ವೈದ್ಯ ಧನಂಜಯ ಸರ್ಜಿ ಅವರು ಭಾಗವಹಿಸುವರು ಎಂದು ವಿವರಿಸಿದರು.
ಅನಂತರ ನಡೆಯುವ ಕವಿಗೋಷ್ಟಿಯಲ್ಲಿ ನಾಗರಕೊಡಿಗೆ ಗಣೇಶಮೂರ್ತಿ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಸಾಹಿತಿ ಸಾಗರದ ವಿ.ಗಣೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಿಲ್ಲೆಯ 30ಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಲಿದ್ದಾರೆ. ಸಂಜೆ 4 ಗಂಟೆಗೆ ನಡೆಯುವ ಸಮ್ಮೇಳನಾಧ್ಯಕ್ಷರ ಬದುಕು- ಬರಹ ಗೋಷ್ಠಿಯಲ್ಲಿ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದು, ಸಮ್ಮೇಳನಾಧ್ಯಕ್ಷರ ಸೃಜನಶೀಲ ಸಾಹಿತ್ಯ ಕುರಿತು ಸಾಹಿತಿ ಡಾ.ಶ್ರೀಪತಿ ಹಳಗುಂದ, ಸಂಪಾದಿತ ಮತ್ತು ಅನುವಾದಿತ ಕೃತಿ ಕುರಿತು ಸಾಹಿತಿ ಡಾ.ಸುಂಕುಂ ಗೋವರ್ಧನ, ಅಂಕಣ ಬರಹ ವಿಮರ್ಶೆ ಹಾಗೂ ಜಾನಪದ ಕೃತಿಗಳ ಸಂಕೀರ್ಣದ ಕುರಿತು ಡಾ.ರತ್ನಾಕರ ಕುನಗೋಡು ಮಾತನಾಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಅಧಿಕಾರಿ ಎನ್.ಹರಿಕುಮಾರ್ ಉಪಸ್ಥಿತರಿರುವರು ಎಂದರು.ಅಂದು ಸಂಜೆ 6 ಗಂಟೆಗೆ ನಡೆಯುವ ಕನ್ನಡ ಸಾಹಿತ್ಯ ಸವಾಲುಗಳು ಕುರಿತು ಸಾಹಿತಿ ಡಾ.ಮಾರ್ಷಲ್ ಶರಾಮ್ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ಸಾಹಿತ್ಯ ಸಾಂವಿಧಾನಿಕ ಆಶಯಗಳು ಕುರಿತು ಎಲ್.ಎನ್. ಮುಕುಂದರಾಜ್, ಕನ್ನಡ ಸಾಹಿತ್ಯ ಜೀವವಿರೋಧಿ ನಿಲುವು ಕುರಿತು ಸಾಹಿತಿ ಬಿ.ಚಂದ್ರೇಗೌಡ, ಜಾನಪದ ಜಾಗತೀಕರಣ ಕುರಿತು ಪ್ರಾಧ್ಯಾಪಕ ಮೋಹನ ಚಂದ್ರಗುತ್ತಿ ಮಾತನಾಡಲಿದ್ದಾರೆ. ಉಪವಿಭಾಗಾಧಿಕಾರಿ ಸತ್ಯನಾರಾಯಣ.ಜಿ.ಹೆಚ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಫೆ.2ರಂದು ಬೆಳಗ್ಗೆ 10.30ಕ್ಕೆ ನಡೆಯುವ ಕನ್ನಡ ಬೇಗುದಿಗಳು ಗೋಷ್ಠಿಯಲ್ಲಿ ಮಾಜಿ ಶಾಸಕ ಆರ್.ಕೆ. ಸಿದ್ದರಾಮಣ್ಣ ಅಧ್ಯಕ್ಷತೆ ವಹಿಸಲಿದ್ದು, ಎನ್ಇಎಸ್ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ಪಾಲ್ಗೊಳ್ಳಲಿದ್ದಾರೆ. ಒಕ್ಕೂಟ ಸರ್ಕಾರದಲ್ಲಿ ಕನ್ನಡದ ಸ್ಥಾನಮಾನ ಕುರಿತು ಡಾ. ಎಚ್.ಟಿ. ಕೃಷ್ಣಮೂರ್ತಿ, ಶಿಕ್ಷಣದಲ್ಲಿ ಕನ್ನಡ ಕುರಿತು ಡಾ. ಪಿ.ಭಾರತೀದೇವಿ, ವ್ಯವಹಾರದಲ್ಲಿ ಕನ್ನಡ ಕುರಿತು ಗೋ.ರಮೇಶ ಗೌಡ ಮಾತನಾಡಲಿದ್ದಾರೆ. ಮಧ್ಯಾಹ್ನ 12.30ಕ್ಕೆ ನಡೆಯುವ ಮುಳುಗುತ್ತಿರುವ ಮಲೆನಾಡು ಗೋಷ್ಠಿಯಲ್ಲಿ ಚಿಂತಕ ರಾಜಪ್ಪ ಮಾಸ್ತರ್ ಅಧ್ಯಕ್ಷತೆ ವಹಿಸಲಿದ್ದು, ಡಿವಿಎಸ್ ಅಧ್ಯಕ್ಷ ಕೊಳಲೆ ರುದ್ರಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅರಣ್ಯ ಆತಂಕ ಕುರಿತು ಸತೀಶ್.ಜಿ.ಕೆ,ಕೃಷಿ ಸವಾಲು ಕುರಿತು ಕಂಬಳಗೆರೆ ರಾಜೇಂದ್ರ, ನೀರು ನಿರ್ವಹಣೆ ಕುರಿತು ಡಾ.ವಿ.ಎಲ್.ಎಸ್.ಕುಮಾರ್ ಮಾತನಾಡಲಿದ್ದಾರೆ ಎಂದು ಹೇಳಿದರು.ಕಥೆ ಹೇಳುವೆವು ಬನ್ನಿ ಕಥಾಗೋಷ್ಠಿಯಲ್ಲಿ ಸಾಹಿತಿ ಕಂ.ನಾಡಿಗ ನಾರಾಯಣ ಅಧ್ಯಕ್ಷತೆ ವಹಿಸಲಿದ್ದು, ಅರಣ್ಯ ಇಲಾಖೆ ನಿವೃತ್ತ ಹಿರಿಯ ವ್ಯವಸ್ಥಾಪಕರಾದ ರಘುರಾಮ ದೇವಾಡಿಗ ಉಪಸ್ಥಿತರಿರುವರು. ಕಥೆಗಾರರಾದ ರವಿ ಸಸಿತೋಟ, ಡಾ.ಕಲೀಂ ಉಲ್ಲಾ, ತುರುವನೂರು ಮಲ್ಲಿಕಾರ್ಜುನ, ಡಾ. ಜಿ.ಆರ್. ಲವ, ಸಿ.ಎಂ. ನೃಪತುಂಗ, ಪರಮೇಶ್ವರ ಕರೂರು, ಡಿ.ಎಚ್. ಸೂರ್ಯಪ್ರಕಾಶ್ ಕಥಾ ವಾಚನ ಮಾಡಲಿದ್ದಾರೆ. ನವಮಾಧ್ಯಮ ಬಿಕ್ಕಟ್ಟುಗಳು ಗೋಷ್ಠಿಯಲ್ಲಿ ಖ್ಯಾತ ವೈದ್ಯ ಡಾ. ಕೆ.ಆರ್. ಶ್ರೀಧರ್ ಅಧ್ಯಕ್ಷತೆ ವಹಿಸಲಿದ್ದು, ಹೆಚ್ಚುವರಿ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮರೆಡ್ಡಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮೊಬೈಲ್ ಮತ್ತು ಯುವ ಮನಸ್ಸು ಕುರಿತು ಡಾ. ಎಸ್.ಟಿ. ಅರವಿಂದ, ಮೊಬೈಲ್- ಪೋಷಕರು- ಮಕ್ಕಳು ಕುರಿತು ಡಾ.ಪ್ರೀತಿ ಶಾನುಭಾಗ್ ಮಾತನಾಡಲಿದ್ದು, ವಿದ್ಯಾರ್ಥಿನಿ ಸಾನಿಕಾ ಎಂ.ಹೆಗಡೆ, ಪೋಷಕರ ಪರವಾಗಿ ಶೋಭಾ ವೆಂಕಟರಮಣ, ಶಿಕ್ಷಕರ ಪರವಾಗಿ ಬಿ.ಪಾಪಯ್ಯ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ತಿಳಿಸಿದರು.
ಸಂಜೆ 5:30ಕ್ಕೆ ನಡೆಯುವ ಹೊಸ ತಲೆಮಾರು ಸಾಹಿತ್ಯ ಸಂವೇದನೆ ಗೋಷ್ಠಿಯಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಪತ್ರಕರ್ತರಾದ ಶಿವಾನಂದ ಕರ್ಕಿ, ಸಾಹಿತಿ ಡಾ.ಸ್ಟ್ಯಾನಿ ಲೋಪಿಸ್ ಕಾರ್ಗಲ್, ಉಪನ್ಯಾಸಕರಾದ ಸುನೀಲ್‌ಕುಮಾರ್, ರಚನಾ ಕಾಮತ್ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.ಸಂಜೆ 6:30 ಗಂಟೆಗೆ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಜಿ.ಪ್ರಶಾಂತ ನಾಯಕ ಸಮಾರೋಪ ಮಾತುಗಳನ್ನಾಡಲಿದ್ದಾರೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಬಿ.ಕೆ. ಸಂಗಮೇಶ್, ಬಿ.ವೈ.ವಿಜಯೇಂದ್ರ, ವಿಧಾನ ಪರಿಷತ್ತು ಸದಸ್ಯ ಎಸ್.ರುದ್ರೇಗೌಡ, ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್, ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪಂಚಾಯತಿ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ, ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುತ್ತಿದೆ ಎಂದು ವಿವರಿಸಿದರು.
ಪ್ರತಿನಿಧಿಗಳಿಗೆ ಒಒಡಿ ಸೌಲಭ್ಯ:ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ಶಿಕ್ಷಕರು ಉಪನ್ಯಾಸಕರು ಸೇರಿದಂತೆ ಮೂರು ಸಾವಿರಕ್ಕೂ ಹೆಚ್ಚು ಸಾಹಿತ್ಯ ಸಾಂಸ್ಕೃತಿಕ ಆಸಕ್ತರು ಸಾಹಿತ್ಯ ಸಮ್ಮೇಳನಕ್ಕೆ ನೋಂದಣಿ ಆಗುತ್ತಿದ್ದು, ಒಒಡಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ವಿವಿಧ ಬಗೆಯ ಉತ್ಪನ್ನಗಳ ಮಾರಾಟ:ಸಾಹಿತ್ಯ ಸಮ್ಮೇಳನದ ಆವರಣದಲ್ಲಿ ವಿವಿಧ ಬಗೆಯ ಪುಸ್ತಕಗಳು, ದೇಶೀಯ ಉತ್ಪನ್ನಗಳು, ಆಹಾರ ಮಾರಾಟ ಮಳಿಗೆಗಳಿಗೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಎಂ.ನವೀನ್ ಕುಮಾರ್, ಡಿ.ಗಣೇಶ್, ಎಸ್.ಷಣ್ಮುಖಪ್ಪ, ಮಧುಸೂಧನ ಐತಾಳ್, ತಾಲೂಕು ಕಸಾಪ ಅಧ್ಯಕ್ಷರಾದ ಮಹಾದೇವಿ, ಬಿ.ಟಿ.ಅಂಬಿಕಾ, ಭೈರಾಪುರ ಶಿವಪ್ಪಗೌಡ, ಸೋಮಿನಕಟ್ಟಿ, ಅನುರಾಧ, ನಳೀನಾಕ್ಷಿ, ಎಸ್.ಶಿವಮೂರ್ತಿ ಮತ್ತಿತರರು ಇದ್ದರು.- - - ಬಾಕ್ಸ್‌ಸಮ್ಮೇಳನಾಧ್ಯಕ್ಷರ ಕಿರುಪರಿಚಯ ಜಾನಪದ, ಕಾವ್ಯ, ನಾಟಕ, ವಿಮರ್ಶೆ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಡಾ. ಎಸ್.ಪಿ. ಪದ್ಮಪ್ರಸಾದ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ. ತಂದೆ ಎಸ್.ಪಿ. ಪಾಯಪ್ಪಶೆಟ್ಟಿ, ತಾಯಿ ಜಿನ್ನಮ್ಮ. ಪ್ರಾರಂಭಿಕ ಶಿಕ್ಷಣ ಹೊಸನಗರದಲ್ಲಿ ನಡೆಸಿ, ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಿಂದ ಬಿ.ಎಸ್ಸಿ ಪದವಿ ಮತ್ತು ನ್ಯಾಷನಲ್ ಕಾಲೇಜ್ ಆಫ್ ಎಜುಕೇಷನ್‌ನಿಂದ ಬಿ.ಇಡಿ. ಪದವಿ ವ್ಯಾಸಂಗ ಮಾಡಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಹಾಗೂ ‘‘ಜೈನ ಜನಪದ ಸಾಹಿತ್ಯ-ಸಂಪಾದನೆ ಹಾಗೂ ಅಧ್ಯಯನ’’ ಪ್ರಬಂಧ ಮಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ ಪಡೆದು, ಪ್ರೌಢಶಾಲಾ ಅಧ್ಯಾಪಕರಾಗಿ ಪಿಎಚ್.ಡಿ. ಪದವಿ ಗಳಿಸಿದ ರಾಜ್ಯದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ತಮಿಳುನಾಡಿನ ಅಣ್ಣಾಮಲೈ ವಿ.ವಿ.ಯಿಂದ ಎಂ.ಇಡಿ ಹಾಗೂ ಮೈಸೂರು ಹಿಂದಿ ಪ್ರಚಾರ ಪರಿಷತ್ತಿನಿಂದ ಹಿಂದಿ ರತ್ನ ಪದವಿಗಳು ಹಾಗೂ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಅಂಡ್ ಫಾರಿನ್ ಲಾಂಗ್ವೇಜಸ್ ಅವರಿಂದ ಇಂಗ್ಲಿಷ್ ಬೋಧನೆಯ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿದ್ದಾರೆ. ಶಿವಮೊಗ್ಗದ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ, ಕಾರವಾರದ ಶಿವಾಜಿ ಶಿಕ್ಷಣ ಬಿ.ಇಡಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಇಳಕಲ್ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸದ್ಯ ತುಮಕೂರು ವಿವಿ ಎಂ.ಇಡಿ ತರಗತಿಗಳಿಗೆ ಅತಿಥಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಲವಾರು ಶೈಕ್ಷಣಿಕ ಸಮಿತಿಗಳಲ್ಲಿ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿದ್ದು, ಬಿ.ಇಡಿ. ಸಿಲಬಸ್ ಸಮಿತಿ ಅಧ್ಯಕ್ಷರಾಗಿ, ಬೆಂಗಳೂರು ಮತ್ತು ತುಮಕೂರು ವಿವಿ ಬಿ.ಇಡಿ ತರಗತಿಗಳ ಆಂತರಿಕ ವೌಲ್ಯಮಾಪನ ಸಮಿತಿ ಸದಸ್ಯರಾಗಿ, ಬೆಂಗಳೂರು ಮತ್ತು ತುಮಕೂರು ಅಕಾಡಮಿಕ್ ಕೌನ್ಸಿಲ್ ಸದಸ್ಯರಾಗಿ, ಕರ್ನಾಟಕ ಸರಕಾರದ ರಾಜ್ಯಭಾಷಾ ಸಮಿತಿ ಸದಸ್ಯರಾಗಿ ನಿರ್ವಹಿಸಿದ್ದಾರೆ. ಜಾನಪದ, ಕಾವ್ಯ, ನಾಟಕ, ವಿಮರ್ಶೆ, ಕಥೆ, ಲಲಿತ ಪ್ರಬಂಧ, ಕಾದಂಬರಿ, ಜೀವನ ಚರಿತ್ರೆ, ಗ್ರಂಥ ಸಂಪಾದನೆ ಮುಂತಾದ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಜಾನಪದ ಮತ್ತು ಜೈನಕಥಾ ಸಾಹಿತ್ಯ, ಹಾಡ್ಹೇಳೆ ತಂಗಿ ದನಿ ಎತ್ತಿ, ಜೈನ ಜನಪದ ಗೀತೆಗಳು ಸೇರಿದಂತೆ 8ಕ್ಕೂ ಹೆಚ್ಚು ಜಾನಪದ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಕೆರೆಗೆ ಹಾರ, ನಗೆ ಚೆಲ್ಲಿದ ಹುಡುಗಿ, ಜಲಿಯನ್ ವಾಲಾ ಬಾಗ್, ಮೊದಲಾದ 7ಕ್ಕೂ ಹೆಚ್ಚು ನಾಟಕ ಕೃತಿಗಳನ್ನು ರಚಿಸಿದ್ದಾರೆ. ಇದರಲ್ಲಿ ನನ್ನ ಜನ, ನನ್ನ ಕಿಟಕಿಯ ಆಚೆ, ಆರೋಹಣ, ದ್ರಾಕ್ಷಿ ಗೊಂಚಲು ಸೇರಿದಂತೆ ಮೊದಲಾದ 5 ಕವನ ಸಂಕಲನಗಳು, ಬೃಂದಾವನ, ಮಗುವೆಂಬ ಮುದ್ದು ಕವಿತೆ ಮುಂತಾದ ಲಲಿತ ಪ್ರಬಂಧ ಸಂಕಲನಗಳು, ಶೈಕ್ಷಣಿಕ ಸಂಶೋಧನೆ, ಶಾಲಾ ನಿರ್ವಹಣೆ, ಭಾರತದಲ್ಲಿ ಪ್ರೌಢ ಶಿಕ್ಷಣ, ಉದಯೋನ್ಮುಖ ಭಾರತದಲ್ಲಿ ಶಿಕ್ಷಣ, ಶಿಕ್ಷಣ ಮತ್ತು ರಾಷ್ಟ್ರೀಯ ಕಾಳಜಿಗಳು ಮೊದಲಾದ 10 ಶೈಕ್ಷಣಿಕ ಕೃತಿಗಳು, ಪಾಯಣ್ಣ ಕವಿಯ ಪ್ರಾಚೀನ ಜೈನ ನಾಟಕಗಳು, ಆಧುನಿಕ ಜೈನ ಪುಣ್ಯ ಪುರುಷರು ಮಾಲಿಕೆಯಲ್ಲಿ 8 ಗ್ರಂಥಗಳೂ ಸೇರಿ 10 ಸಂಪಾದಿತ ಕೃತಿಗಳು, ಸಿ.ಪಿ.ಕೆ. ಒಂದು ಕಾವ್ಯಾಭ್ಯಾಸ, ಕಮಲಾ ಹಂಪನಾ ಒಂದು ಸಾಂಸ್ಕೃತಿಕ ಅಧ್ಯಯನ, ಆಸ್ವಾದನೆ ನಿಕಷ ಮೊದಲಾದ ವಿಮರ್ಶಾ ಕೃತಿಗಳು; ಜೀವನ ಚರಿತ್ರೆ, ಪ್ರವಾಸ ಕಥನ ಹಾಗೂ 50 ತುಂಬಿದ ಸಂದರ್ಭದಲ್ಲಿ ಅರ್ಪಿಸಿದ ಗ್ರಂಥ ‘ಸುವರ್ಣ ಪದ್ಮ’ ಮತ್ತು 60ರ ಸಂಭ್ರಮದಲ್ಲಿ ‘ಸತ್ವ’ ಕೃತಿಗಳು ಸೇರಿ ಒಟ್ಟು 60ಕ್ಕೂ ಹೆಚ್ಚು ಕೃತಿಗಳು ಪ್ರಕಟಿತಗೊಂಡಿದೆ.ಭಾರತದ ಪ್ರಮುಖ ಬ್ಲಾಗ್ ಲೇಖಕರಲ್ಲಿ ಒಬ್ಬರಾದ ಪದ್ಮಪ್ರಸಾದ್ ಅವರು ಪ್ರಸಾದ ಜೈನ್ ಎಂಬ ಹೆಸರಿನಿಂದ ಬರೆದ 100ಕ್ಕೂ ಹೆಚ್ಚು ಇಂಗ್ಲಿಷ್ ಲೇಖನಗಳನ್ನು ರಚಿಸಿದ್ದು, 3 ಲಕ್ಷಕ್ಕೂ ಹೆಚ್ಚು ವೀಕ್ಷಕರನ್ನು ನಾಲ್ಕು ವರ್ಷಗಳಲ್ಲಿ ಬ್ಲಾಗ್ ಮೂಲಕ ಪಡೆದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಬಹುಮಾನ (4 ಬಾರಿ) ಶ್ರವಣ ಬೆಳಗೊಳದ ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿ, ದ.ಕ. ಜಿಲ್ಲೆಯ ಬೇಲಾಡಿ ಗ್ರಾಮದ ಮಾರಣ್ಣಮಾಡ ಪ್ರಶಸ್ತಿ, ಹೊನ್ನಾವರದ ಜಾನಪದ ಪ್ರತಿಷ್ಠಾನದಿಂದ ‘ಕುವೆಂಪು ಜಾನಪದ ದೀಪ’ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡಮಿಯ ಡಾ. ಬಿ.ಎಸ್. ಗದ್ದಿಗಿಮಠ ಜಾನಪದ ತಜ್ಞ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಗೌರವಗಳನ್ನು ಪಡೆದಿದ್ದಾರೆ.
- - - -30ಎಸ್‌ಎಂಜಿಕೆಪಿ04:ಡಾ.ಎಸ್.ಪಿ.ಪದ್ಮಪ್ರಸಾದ್
ಸಮ್ಮೇಳನಾಧ್ಯಕ್ಷ