ಕನ್ನಡಪ್ರಭ ವಾರ್ತೆ ಬೇಲೂರು
ಸೋಮವಾರ ವಿಧಾನಸಭಾ ಅಧಿವೇಶನದಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್ ಕೆ ಸುರೇಶ್ ಶೂನ್ಯ ವೇಳೆಯಲ್ಲಿ ಭಾನುವಾರ ನಡೆದ ಕಟ್ಟಡ ದುರಂತದ ಬಗ್ಗೆ ಮಾತನಾಡಿದರು. ಬೇಲೂರು ಪಟ್ಟಣದ ಬಸ್ ನಿಲ್ದಾಣ ಮುಂಭಾಗ ಖಾಸಗಿ ವಾಣಿಜ್ಯ ಕಟ್ಟಡ ಮೇಲ್ಚಾವಣಿ ಕುಸಿದು ಇಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ದುರ್ಘಟನೆ ನಡೆದ ಸಂದರ್ಭದಲ್ಲಿ ಜಿಲ್ಲಾ ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಜಿಲ್ಲಾಮಟ್ಟದ ಅಧಿಕಾರಿಗಳು ಸೌಜನ್ಯಕ್ಕೂ ಭೇಟಿ ನೀಡಿಲ್ಲ. ಜಿಲ್ಲಾಧಿಕಾರಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಮೌನವಾಗಿದ್ದಾರೆ. ಜಿಲ್ಲಾ ಸಚಿವರಂತೂ ಹೊರಗಡೆ ಇರುತ್ತಾರೆ, ಆದರೆ ಜಿಲ್ಲೆಯಲ್ಲಿ ಇದ್ದ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಯಾಕೆ ಭೇಟಿ ನೀಡಲಿಲ್ಲ, ರಾಜ್ಯ ಸರ್ಕಾರದವರು ಹಾಸನ ಜಿಲ್ಲೆಯನ್ನು ಹೊರಗಿಟ್ಟು ರಾಜ್ಯಭಾರ ಮಾಡುತ್ತಿದ್ದೀರಾ ಎಂದು ಕಿಡಿಕಾರಿದರು.
ಮಾರುಕಟ್ಟೆ ಅಂದಮೇಲೆ ಎಲ್ಲಾ ಜನಾಂಗದವರು ಬರುತ್ತಾರೆ. ಮೃತರಲ್ಲಿ ಒಬ್ಬರು ಮುಸ್ಲಿಮರಾದರೆ ಮತ್ತೊಬ್ಬರು ಉಪ್ಪಾರ ಜನಾಂಗದವರು. ತೀವ್ರವಾಗಿ ಗಾಯಗೊಂಡಿರುವ ಜ್ಯೋತಿ ಎಂಬ ಮಹಿಳೆ ಈಡಿಗರಾದರೆ, ನೀಲಮ್ಮ ಎಂಬುವರು ಪರಿಶಿಷ್ಟ ಜಾತಿಗೆ ಬರುತ್ತಾರೆ. ಸರ್ಕಾರ ಜಾತಿ ಲೆಕ್ಕ ನೋಡದೆ ಪರಿಹಾರಕ್ಕೆ ಮುಂದಾಗಬೇಕು. ಕಟ್ಟಡ ಮೇಲ್ಛಾವಣಿ ಕುಸಿತದಲ್ಲಿ ಗಾಯಗೊಂಡಿರುವವರಿಗೆ ಉತ್ತಮ ಚಿಕಿತ್ಸೆ ನೀಡಿ ಕನಿಷ್ಠ 25 ಲಕ್ಷ ನೆರವು ನೀಡಬೇಕು. ಮೃತರ ಕುಟುಂಬಕ್ಕೆ ಐವತ್ತು ಲಕ್ಷ ಆರ್ಥಿಕ ನೆರವು ಒದಗಿಸಬೇಕೆಂದು ಕೋರಿದರು.ಕಾಡಾನೆ ಹಾವಳಿಂದ ಬೆಳೆ ನಾಶವಾಗಿ 9 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡರೂ ಇದುವರೆಗೂ ಜಿಲ್ಲಾಡಳಿತವಾಗಲಿ ಸರ್ಕಾರವಾಗಲಿ ಎಚ್ಚೆತ್ತುಕೊಂಡಿಲ್ಲ. ಕೂಡಲೇ ಈ ಬಗ್ಗೆ ಚರ್ಚೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.