ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜರುಗಿದ ಪೂರ್ವ ಸಿದ್ಧತಾ ಸಭೆಯಲ್ಲಿ ಯೋಗ ದಿನಾಚರಣೆ ಯಶಸ್ವಿಗೆ ಚರ್ಚಿಸಿ, ನೀಲನಕ್ಷೆ ರೂಪಿಸಲಾಯಿತು. ಈ ವೇಳೆ ಮಾತನಾಡಿದ ಬಿ.ಟಿ.ಕುಮಾರಸ್ವಾಮಿ, ಅಂದು ಬೆಳಗ್ಗೆ 7ಗಂಟೆಯಿಂದ 7.45ರ ವರೆಗೆ ಸುಮಾರು 2000 ಸಾವಿರಕ್ಕೂ ಅಧಿಕ ಯೋಗಾಸಕ್ತರು ಸಾಮೂಹಿಕ ಯೋಗಾಭ್ಯಾಸ ಮಾಡುವ ಮೂಲಕ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವರು. ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆ ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು.
ನಗರ ಸಭೆಯಿಂದ ಮೈದಾನ ಸ್ವಚ್ಛಗೊಳಿಸಬೇಕು. ಜಿಲ್ಲಾ ಆಯುಷ್ ಇಲಾಖೆಯಿಂದ ಮ್ಯಾಟ್ ಹಾಸುವುದರೊಂದಿಗೆ ಮೈದಾನವನ್ನು ಯೋಗಾಭ್ಯಾಸಕ್ಕೆ ಸಜ್ಜುಗೊಳಿಸಬೇಕು. ಯೋಗದಲ್ಲಿ ಪಾಲ್ಗೊಳ್ಳುವರಿಗೆ ತೊಂದರೆಯಾಗದಂತೆ ಮೈದಾನದ ಸುತ್ತಲಿನ ಸರ್ಕಾರಿ ಕಚೇರಿ ಹಾಗೂ ಶಾಲೆಗಳ ಶೌಚಾಲಯ ತೆರದಿಡಬೇಕು. ಆಯುಷ್ ಇಲಾಖೆ ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳುವವರಿಗೆ ಶುದ್ಧ ಕುಡಿಯುವ ನೀರು ಹಾಗೂ ಉಪಹಾರದ ವ್ಯವಸ್ಥೆ ಮಾಡಬೇಕು. ತುರ್ತು ಸಂದರ್ಭಕ್ಕಾಗಿ ಆಂಬ್ಯುಲೆನ್ಸ್ ಹಾಗೂ ಅಗ್ನಿಶಾಮಕ ವಾಹನಗಳನ್ನು ಸನ್ನದ್ಧವಾಗಿ ಇರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಬಾರಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪೊಲೀಸ್ ಇಲಾಖೆ ಕೈ ಜೋಡಿಸಿದ್ದು, ಎಲ್ಲಾ ಪೊಲೀಸ್ ಸಿಬ್ಬಂದಿ ಹಳೆ ಮಾಧ್ಯಮ ಆವರಣದಲ್ಲಿನ ಸಾಮೂಹಿಕ ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.ಅಂತಾರಾಷ್ಟ್ರಿಯ ಯೋಗ ದಿನಾಚರಣೆ ಪೂರ್ವಭಾವಿಯಾಗಿ ಜನರಲ್ಲಿ ಯೋಗದ ಮಹತ್ವ ಸಾರಲು ಜೂ.18ರಂದು ಬೃಹತ್ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 7 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಜಾಥಾಕ್ಕೆ ಹಸಿರು ನಿಶಾನೆ ತೋರುವರು. ಜಿಲ್ಲೆಯ ಯೋಗ ಸಂಸ್ಥೆಗಳು, ಆಯುರ್ವೇದ ಕಾಲೇಜು ವಿದ್ಯಾರ್ಥಿಗಳು ಹಾಗೂ ಚಿತ್ರದುರ್ಗ ನಗರದಲ್ಲಿನ ಎಲ್ಲಾ ಸರ್ಕಾರಿ ಕಚೇರಿ ಸಿಬ್ಬಂದಿ ಜಾಗೃತಿ ಜಾಥಾದಲ್ಲಿ ಪಾಲ್ಗೊಳ್ಳುವರು. ಓನಕೆ ಒಬವ್ವ ವೃತ್ತ, ಮದಕರಿ ನಾಯಕ ವೃತ್ತ, ರಂಗಯ್ಯನ ಬಾಗಿಲು, ದೊಡ್ಡಪೇಟೆ, ಉಚ್ಚಂಗೆಲ್ಲಮ್ಮ ದೇವಾಸ್ಥಾನ ಬೀದಿ, ಆನೆ ಬಾಗಿಲು, ಗಾಂಧಿ ವೃತ್ತ, ಎಸ್ ಬಿಐ ವೃತ್ತದ ಮೂಲಕ ಜಾಥಾ ಹಳೆ ಮಾಧ್ಯಮಿಕ ಆವರಣದಲ್ಲಿ ಸಂಪನ್ನಗೊಳ್ಳಲಿದೆ.