ಸರ್ವಜ್ಞನ ವಚನ ಸರ್ವ ಕಾಲಕ್ಕೂ ಅನ್ವಯ: ಜಿಪಂ ಸಿಇಒ ಕೆ.ಎಂ. ಗಾಯತ್ರಿ

KannadaprabhaNewsNetwork | Published : Feb 21, 2024 2:02 AM

ಸಾರಾಂಶ

ಸರ್ವಜ್ಞನ ವಚನಗಳು ತ್ರಿಪದಿಗಳೆಂದೇ ಪ್ರಸಿದ್ಧಿಯಾಗಿದೆ. ಹಲವಾರು ಅಂಶಗಳನ್ನು ಕುರಿತು ವಚನಗಳನ್ನು ರಚಿಸಿದ ಒಬ್ಬ ಮೇಧಾವಿ ವಚನಕಾರರಾಗಿದ್ದಾರೆ. ಸಮಾಜದಲ್ಲಿನ ಅಂಕು ಡೊಂಕುಗಳನ್ನು, ಮೂಢನಂಬಿಕೆಗಳನ್ನು ಹಳೆಯ ಸಂಪ್ರಂದಾಯಗಳು ಮತ್ತು ಕಟ್ಟಾಚಾರ ಕುರಿತು ತನ್ನ ವಚನಗಳಲ್ಲಿ ಪ್ರಸ್ತುತಪಡಿಸಿದ್ದಾರೆ

ಕನ್ನಡಪ್ರಭ ವಾರ್ತೆ ಮೈಸೂರು

ಸರ್ವರಿಗೂ ಸರ್ವಕಾಲಕ್ಕೂ ಅನ್ವಯವಾಗುವ ವಚನಗಳನ್ನು ಸಂತ ಕವಿ ಸರ್ವಜ್ಞ ರಚಿಸಿದ್ದಾರೆ ಎಂದು ಜಿಪಂ ಸಿಇಒ ಕೆ.ಎಂ. ಗಾಯತ್ರಿ ತಿಳಿಸಿದರು.

ನಗರಕ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮಂಗಳವಾರ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ವಜ್ಞನ ವಚನಗಳು ತ್ರಿಪದಿಗಳೆಂದೇ ಪ್ರಸಿದ್ಧಿಯಾಗಿದೆ. ಹಲವಾರು ಅಂಶಗಳನ್ನು ಕುರಿತು ವಚನಗಳನ್ನು ರಚಿಸಿದ ಒಬ್ಬ ಮೇಧಾವಿ ವಚನಕಾರರಾಗಿದ್ದಾರೆ. ಸಮಾಜದಲ್ಲಿನ ಅಂಕು ಡೊಂಕುಗಳನ್ನು, ಮೂಢನಂಬಿಕೆಗಳನ್ನು ಹಳೆಯ ಸಂಪ್ರಂದಾಯಗಳು ಮತ್ತು ಕಟ್ಟಾಚಾರ ಕುರಿತು ತನ್ನ ವಚನಗಳಲ್ಲಿ ಪ್ರಸ್ತುತಪಡಿಸಿದ್ದಾರೆ ಎಂದರು.

ಮುಂದಿನ ಪೀಳಿಗೆಗೆ ಮಾದರಿಯಾಗುವ ನಿಟ್ಟಿನಲ್ಲಿ ಜಯಂತಿಗಳನ್ನು ನಾವು ಆಚರಿಸಬೇಕು. 12ನೇ ಶತಮಾನದಲ್ಲಿ ಕನ್ನಡದ ವಚನ ಸಾಹಿತ್ಯ ಕಬ್ಬಿಣದ ಕಡಲೆಯಾಗಿತ್ತು, ನಂತರದ ಕಾಲಮಾನದಲ್ಲಿ ಸರ್ವಜ್ಞನ ವಚನಗಳು ಸುಲಭ ರೀತಿಯಲ್ಲಿ ಜನ ಸಾಮಾನ್ಯರಿಗೂ ಅರ್ಥವಾಗುವಂತಹ ರೀತಿಯಲ್ಲಿ ತ್ರಿಪದಿಗಳನ್ನು ರಚಿಸಿದ್ದಾರೆ. ಸರ್ವಜ್ಞನ ವಚನಗಳಲ್ಲಿರುವ ಆದರ್ಶ ತತ್ವಗಳು, ಸಮಾಜದಲ್ಲಿರುವ ಅನಾಚಾರಗಳನ್ನು ತಿದ್ದುವ ಕೆಲಸ ಮಾಡುತ್ತಿದೆ. ಉತ್ತಮ ಸಮಾಜವನ್ನು ಬಲಪಡಿಸುವಂತಹ ಸಾರಾಂಶಗಳು ಇವರ ತ್ರಿಪದಿಗಳಲ್ಲಿ ಇದೆ ಎಂದು ಅವರು ಹೇಳಿದರು.

ಕೆ.ಆರ್. ನಗರ ತಾಲೂಕು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಪ್ರಭಾಕರ್ ಹೆಗ್ಗಂದೂರು ಮಾತನಾಡಿ, ಸರ್ವಜ್ಞರು ಆಡುಭಾಷೆಯಲ್ಲಿ ತ್ರಿಪದಿಗಳನ್ನು ರಚಿಸಿ, ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಸಮಾಜ ಸುಧಾರಕ, ತ್ರಿಪದಿಗಳ ಮೂಲಕ ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆ ನೀಡಿದ ಶ್ರೇಷ್ಠ ವಚನಕಾರ ಎಂದರು.

ತ್ರಿಪದಿಗಳ ಮೂಲಕ ಸರ್ವಜ್ಞ ಎಲ್ಲರ ಮನದಲ್ಲಿ ಉಳಿದಿದ್ದಾರೆ. ತ್ರಿಪದಿಗಳು ಸಾರುವ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ. ಸಾಗರದಂತಹ ದೊಡ್ಡ ವಿಷಯದ ಅಂಶಗಳನ್ನು ಸಾಸಿವೆ ಗಾತ್ರದಲ್ಲಿ ಅರ್ಥೈಸುವ ಸರ್ವಜ್ಞ, ತನಗೆ ತಿಳಿದದ್ದನ್ನು ಹಾಗೂ ನೋಡಿದ್ದನ್ನು ತ್ರಿಪದಿ ಮೂಲಕ ಬರೆದಿದ್ದಾರೆ ಎಂದು ಅವರು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಕುಂಬಾರ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಕೆ.ಆರ್. ಸೋಮಶೇಖರ್ ಮಹಿಳಾ ಸಂಘದ ಅಧ್ಯಕ್ಷೆ ರೇಣುಕಾಂಬ, ಸರ್ವಜ್ಞ ಸೇವಾ ಸಮಿತಿನ ಅಧ್ಯಕ್ಷ ವಾಸು ಮೊದಲಾದವರು ಇದ್ದರು.

ಪ್ರತಿಯೊಂದು ತ್ರಿಪದಿಗಳು ಸಹ ವೈಜ್ಞಾನಿಕವಾದ ವಿಮರ್ಶೆಯನ್ನು ಒಳಗೊಂಡಿದ್ದು, ಸರ್ವ ಕಾಲಕ್ಕೂ ಅನ್ವಯಿಸುವ ತತ್ವಗಳನ್ನು ಕವಿ ಸರ್ವಜ್ಞ ಕೊಟ್ಟಿದ್ದಾರೆ. ಇದು ಕೇವಲ ಒಂದೇ ಸಮಾಜಕ್ಕೆ ಅಥವಾ ಸಮುದಾಯಕ್ಕೆ ಸೀಮಿತವಲ್ಲ ಸರ್ವ ಜನರಿಗೂ ಅನ್ವಯಿಸುತ್ತದೆ.

- ಕೆ.ಎಂ. ಗಾಯತ್ರಿ, ಜಿಪಂ ಸಿಇಒ

Share this article