ಜಾತಿಗಳ ನಡುವೆ ಸಂಘರ್ಷಕ್ಕೆ ಜಿಲ್ಲಾಧಿಕಾರಿ ಕಾರಣ: ಹರಿಹರ ಶಾಸಕ ಬಿ.ಪಿ.ಹರೀಶ

KannadaprabhaNewsNetwork |  
Published : Jan 21, 2024, 01:30 AM IST
20ಕೆಡಿವಿಜಿ1-ದಾವಣಗೆರೆ ವರದಿಗಾರರ ಕೂಟದ ಮುಂಭಾಗ ಹರಿಹರ ಶಾಸಕ ಬಿ.ಪಿ.ಹರೀಶ ಗೌಡರಿಗೆ ಹರಿಹರ ತಾಲೂಕಿನ ಎಸ್ಟಿ ಸಮಾಜ ಬಾಂಧವರು ಮನವಿ ಅರ್ಪಿಸಿದರು.  | Kannada Prabha

ಸಾರಾಂಶ

ಚನ್ನಗಿರಿಯ ವೃತ್ತವೊಂದರಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಪ್ರತಿಷ್ಠಾಪಿಸಿದ್ದ ವಿಚಾರ ದೊಡ್ಡ ಸುದ್ದಿಯಾಗಿ ಆಗ ವಾಲ್ಮೀಕಿ ಪುತ್ಥಳಿ ತೆರವು ಮಾಡಲಾಗಿತ್ತು. ಈಗ ಹರಿಹರ ತಾಲೂಕು ಭಾನುವಳ್ಳಿ ಗ್ರಾಮದಲ್ಲಿ ದಶಕಗಳ ಹಿಂದೆಯೇ ಇದ್ದ ವೀರ ಮದಕರಿ ನಾಯಕ ವೃತ್ತದ ವಿಚಾರದಲ್ಲಿ ಜಿಲ್ಲಾಧಿಕಾರಿ ಬೇಜವಾಬ್ದಾರಿ ವರ್ತನೆ ತೋರಿ, ಜಾತಿಗಳ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲೆಯ ಶಾಂತವಾಗಿರಲು ಬಿಡದ ಇಲ್ಲಿನ ಜಿಲ್ಲಾಧಿಕಾರಿ ಕೆಲವರ ಏಜೆಂಟರಂತೆ ವರ್ತಿಸಿ, ಕಾನೂನು ಬಾಹಿರ ಕೆಲಸ ಮಾಡುತ್ತಾ, ಜಾತಿ ಜಾತಿಗಳ ಮಧ್ಯೆ ಸಂಘರ್ಷಕ್ಕೆ ಕಾರಣರಾಗುತ್ತಿದ್ದು, ಇಂತಹ ಅಧಿಕಾರಿ ವಿರುದ್ಧ ತೀವ್ರ ಹೋರಾಟ ನಡೆಸಬೇಕಾದೀತು ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ ಗೌಡ ಎಚ್ಚರಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚನ್ನಗಿರಿಯ ವೃತ್ತವೊಂದರಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಪ್ರತಿಷ್ಠಾಪಿಸಿದ್ದ ವಿಚಾರ ದೊಡ್ಡ ಸುದ್ದಿಯಾಗಿ ಆಗ ವಾಲ್ಮೀಕಿ ಪುತ್ಥಳಿ ತೆರವು ಮಾಡಲಾಗಿತ್ತು. ಈಗ ಹರಿಹರ ತಾಲೂಕು ಭಾನುವಳ್ಳಿ ಗ್ರಾಮದಲ್ಲಿ ದಶಕಗಳ ಹಿಂದೆಯೇ ಇದ್ದ ವೀರ ಮದಕರಿ ನಾಯಕ ವೃತ್ತದ ವಿಚಾರದಲ್ಲಿ ಜಿಲ್ಲಾಧಿಕಾರಿ ಬೇಜವಾಬ್ದಾರಿ ವರ್ತನೆ ತೋರಿ, ಜಾತಿಗಳ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿದ್ದಾರೆ ಎಂದರು.

ಭಾನುವಳ್ಳಿ ಗ್ರಾಮದಲ್ಲಿ 1990ರಲ್ಲೇ ಆಗಿನ ಶಾಸಕ ಎಚ್.ಶಿವಪ್ಪ ಅವಧಿಯಲ್ಲಿ ವೀರ ಮದಕರಿ ನಾಯಕ ಮಹಾದ್ವಾರ ನಿರ್ಮಾಣವಾಗಿ, ನಾಮಕರಣವಾಗಿತ್ತು. ಎಸ್ಸಿ-ಎಸ್ಟಿ ಅನುದಾನದಲ್ಲಿ ₹1.30 ಲಕ್ಷ ವೆಚ್ಚದಲ್ಲಿ ವೃತ್ತ ನಿರ್ಮಿಸಿದ್ದು ನಂತರ ಸಮಾಜ ಕಲ್ಯಾಣ ಸಚಿವರಾಗಿದ್ದ ಡಾ.ವೈ.ನಾಗಪ್ಪ ಉದ್ಘಾಟಿಸಿದ್ದರು. 2021ರಲ್ಲಿ ಜಿಪಂನಿಂದ 92 ಸಾವಿರ ರು. ಅನುದಾನ ಸ್ಲ್ಯಾಬ್ ನಿರ್ಮಾಣಕ್ಕೆ ಬಂದಿತ್ತು. ಈಚೆಗೆ ಅದೇ ವೃತ್ತದಲ್ಲಿ ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ಸ್ಥಾಪಿಸಿದ್ದರಿಂದ ಗ್ರಾಮದಲ್ಲಿ ಉಭಯ ಸಮುದಾಯದ ಜನರ ಮಧ್ಯೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು ಎಂದು ತಿಳಿಸಿದರು.

ಕೋಮುಗಳ ಮಧ್ಯೆ ತಂದಿಡುವ ಕೆಲಸ:

ದಾಖಲೆಗಳ ಸಮೇತ ಅದು ವೀರ ಮದಕರಿ ನಾಯಕ ವೃತ್ತವೆಂದು ವಾಲ್ಮೀಕಿ ನಾಯಕ ಸಮಾಜದವರು ಪ್ರತಿಭಟಿಸಿದ್ದರು. 2 ದಿನ ಹೋರಾಟದ ನಂತರ ಜಿಲ್ಲಾಧಿಕಾರಿಯವರು 3 ದಿನಗಳ ಕಾಲಾವಕಾಶ ಕೋರಿ, ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ಆದರೆ, 3 ದಿನದ ನಂತರ 10 ದಿನ ಕಾಲ ಕೇಳಿ, ಮತ್ತೆ 3 ದಿನ ಸಮಯಾವಕಾಶ ಕೇಳಿದ ಜಿಲ್ಲಾಧಿಕಾರಿ ಸಮಸ್ಯೆ ಪರಿಹರಿಸುವ ಬದಲಿಗೆ, ಅದನ್ನು ಜೀವಂತವಾಗಿಟ್ಟು, ಕೋಮುಗಳ ಮಧ್ಯೆ ತಂದಿಡುವ ಕೆಲಸ ಮಾಡುತ್ತಿದ್ದಾರೆ. ನಮಗೆ ಮಹರ್ಷಿ ವಾಲ್ಮೀಕಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ವೀರ ಮದಕರಿ ನಾಯಕರಂತಹ ಮಹನೀಯರ ಬಗ್ಗೆ ಅಪಾರ ಗೌರವ, ಅಭಿಮಾನವಿದೆ. ಆದರೆ, ಜಿಲ್ಲಾಧಿಕಾರಿ ಸಮಸ್ಯೆ ಪರಿಹರಿಸುವ ಬದಲು, ಯಾರದ್ದೋ ಏಜೆಂಟರಂತೆ ವರ್ತಿಸಿದ್ದು ಅಕ್ಷಮ್ಯ ಎಂದು ಕಿಡಿಕಾರಿದರು.

ಹರಿಹರ ನಗರ ಘಟಕದ ವಾಲ್ಮೀಕಿ ನಾಯಕ(ಎಸ್ಟಿ) ಟ್ರಸ್ಟ್‌ನ ಪದಾಧಿಕಾರಿಗಳ, ನಾಯಕ ಸಮಾಜದ ಪುರುಷರು, ಮಹಿಳೆಯರು ಇದ್ದರು.ಡಿಸಿ ವಿರುದ್ಧ ಹೋರಾಟ

ಭಾನುವಳ್ಳಿ ಗ್ರಾಮದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಬೇಕಾದ ಜಿಲ್ಲಾಧಿಕಾರಿ ವರ್ತನೆ ಸಾಕಷ್ಟು ಅನುಮಾನಕ್ಕೂ ಕಾರಣವಾಗುತ್ತಿದೆ. ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಹಾಗೂ ಜಿಲ್ಲಾಧಿಕಾರಿ ವಿರುದ್ಧ ಶೀಘ್ರವೇ ಹೋರಾಟ ನಡೆಸಬೇಕಾದೀತು.

ಬಿ.ಪಿ.ಹರೀಶ, ಹರಿಹರ ಶಾಸಕಕೆಲವರ ಏಜೆಂಟರಂತೆ ಜಿಲ್ಲಾಧಿಕಾರಿ ವರ್ತನೆ

ದಾವಣಗೆರೆ ಜಿಲ್ಲೆ ಶಾಂತವಾಗಿರಲು ಜಿಲ್ಲಾಧಿಕಾರಿ ಬಿಡುತ್ತಿಲ್ಲ. ಕಳೆದ 15-20 ದಿನಗಳಿಂದ ಜಾತಿ, ಜಾತಿಗಳ ಮಧ್ಯೆ ಘರ್ಷಣೆಯಾಗುತ್ತಿದೆ. ಜಿಲ್ಲಾಧಿಕಾರಿ ಕುಮ್ಮಕ್ಕಿನಿಂದ ಭಾನುವಳ್ಳಿ ಗ್ರಾಪಂ ಪಿಡಿಒ ಮೇಲೆ ಒತ್ತಡ ಹೇರಿ, ಸಂಗೊಳ್ಳಿ ರಾಯಣ್ಣ ವೃತ್ತ ಅಂತಾ ನಿರ್ಣಯ ಮಾಡಿಸಿದ್ದಾರೆ. ಜಿಲ್ಲಾಧಿಕಾರಿ ಕೆಲವರ ಏಜೆಂಟರಂತೆ ವರ್ತಿಸುತ್ತಿರುವುದು ಅಕ್ಷಮ್ಯ. ಲೋಕೋಪಯೋಗಿ ಇಲಾಖೆ ರಸ್ತೆಯ ಮಧ್ಯ ಭಾಗದಿಂದ 21 ಮೀಟರ್ ಯಾವುದೇ ಕಾರ್ಯ ಮಾಡುವಂತಿಲ್ಲ. ಆದರೆ, ಕಾನೂನು ಪಾಲನೆ ಮಾಡಬೇಕಾದ ಜಿಲ್ಲಾಧಿಕಾರಿಯೇ ಭಾನುವಳ್ಳಿ ವಿಚಾರದಲ್ಲಿ ಎಲ್ಲವನ್ನೂ ಧಿಕ್ಕರಿಸಿದ್ದಾರೆ. ರಸ್ತೆ ಮಧ್ಯಭಾಗದಿಂದ ಕೇವಲ 7 ಮೀಟರ್‌ನಲ್ಲಿ ಪುತ್ಥಳಿ ಪ್ರತಿಷ್ಠಾಪಿಸಲು ಕಾರಣ‍ರಾಗಿದ್ದಾರೆ ಎಂದು ಶಾಸಕ ಬಿ.ಪಿ.ಹರೀಶ ಬೇಸರ ಹೊರ ಹಾಕಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ