ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಮ್ಮ ಸವಾಲು: ಪ್ರೊ. ಮಹದೇವ್‌

KannadaprabhaNewsNetwork | Published : Feb 19, 2024 1:34 AM

ಸಾರಾಂಶ

ವಿದ್ಯುನ್ಮಾನ ಮತ ಯಂತ್ರವನ್ನು ಕಾಣದ ಕೈಗಳು ತಿರುಚಬಹುದು ಎಂಬ ಊಹಾಪೋಹವಿದೆ. ಇದನ್ನು ಕೇಳಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲಲಿಲ್ಲವೇ? ಈ ಬಗ್ಗೆ ಯಾಕೇ ಚಕಾರ ಎತ್ತುವುದಿಲ್ಲ ಎಂಬ ಪ್ರಶ್ನೆ ಬರುತ್ತದೆ. ವಿದ್ಯುನ್ಮಾನ ಮತ ಯಂತ್ರದ ಕುರಿತು ಸುಳ್ಳು ಸುದ್ದಿ ಹರಡಿದರೆ ಚುನಾವಣಾ ಆಯೋಗ ಮಾನನಷ್ಟ ಮೊಕದ್ದಮೆ ಹೂಡುತ್ತದೆ. ಈ ವಿಷಯ ಸಂಕೀರ್ಣವಾದದ್ದು ಎಂದರು.

ಕನ್ನಡಪ್ರಭ ವಾರ್ತೆ ಮೈಸೂರು

ನಮ್ಮ ಮುಂದೆ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸುವ ಸವಾಲಿದೆ ಎಂದು ವಿಶ್ರಾಂತ ಕುಲಪತಿ ಪ್ರೊ. ಮಹದೇವ್ ಅಭಿಪ್ರಾಯಪಟ್ಟರು.

ಜಿಲ್ಲಾ ಕಾಂಗ್ರೆಸ್ ಸಮಿತಿಯು ಭಾನುವಾರ ಆಯೋಜಿಸಿದ್ದ ಭಾರತದ ಇವಿಎಂ ಮತದಾನ ಮತ್ತು ರಾಜಕೀಯ ಪಕ್ಷಗಳು ಒಂದು ಅವಲೋಕನ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ವಿದ್ಯುನ್ಮಾನ ಮತ ಯಂತ್ರವನ್ನು ಕಾಣದ ಕೈಗಳು ತಿರುಚಬಹುದು ಎಂಬ ಊಹಾಪೋಹವಿದೆ. ಇದನ್ನು ಕೇಳಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲಲಿಲ್ಲವೇ? ಈ ಬಗ್ಗೆ ಯಾಕೇ ಚಕಾರ ಎತ್ತುವುದಿಲ್ಲ ಎಂಬ ಪ್ರಶ್ನೆ ಬರುತ್ತದೆ. ವಿದ್ಯುನ್ಮಾನ ಮತ ಯಂತ್ರದ ಕುರಿತು ಸುಳ್ಳು ಸುದ್ದಿ ಹರಡಿದರೆ ಚುನಾವಣಾ ಆಯೋಗ ಮಾನನಷ್ಟ ಮೊಕದ್ದಮೆ ಹೂಡುತ್ತದೆ. ಈ ವಿಷಯ ಸಂಕೀರ್ಣವಾದದ್ದು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿವೃದ್ಧಿ ಪರ ಬಜೆಟ್‌ ಮಂಡಿಸಿದ್ದಾರೆ. ಆರ್ಥಿಕ ಸಂಪನ್ಮೂಲದ ಕೊರತೆ ಇರುವುದರಿಂದ 1 ಲಕ್ಷ ಕೋಟಿ ರು. ಸಾಲ ಮಾಡುವುದಾಗಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಕೇಂದ್ರ ಸರ್ಕಾರ ಉದ್ಯಮಿಗಳ 10 ಸಾವಿರ ಕೋಟಿ ಸಾಲ ಮನ್ನಾ ಮಾಡಬಹುದಾದರೆ ರಾಜ್ಯದ ಬಡ ಜನರ ಅನುಕೂಲಕ್ಕೆ ಒಂದು ಲಕ್ಷ ಕೋಟಿ ಸಾಲ ಮಾಡಿದರೆ ತಪ್ಪೇನು ಎಂದು ಅವರು ಪ್ರಶ್ನಿಸಿದರು.

ಮಹಿಳಾ ಸಬಲೀಕರಣ, ಬಡತನ ನಿರ್ಮೂಲನೆ, ಸರ್ವಧರ್ಮ ಹಿತ, ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಅಭಿವೃದ್ಧಿ ಪರವಾದ ಬಜೆಟ್ ಆಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಸ್ತ್ರೀಯರಿಗೆ ಹೆಚ್ಚಿನ ಲಾಭ ದೊರೆಯುತ್ತಿದೆ. ರಾಜ್ಯದ 1.20 ಲಕ್ಷ ಸ್ತ್ರೀಯರು ವಾರ್ಷಿಕ 50 ಸಾವಿರ ಪಡೆಯುತ್ತಾರೆ. ಇದು ಕ್ರಾಂತಿಕಾರಕ ಅಭಿವೃದ್ಧಿ ಪರ ಚಿಂತನೆ ಎಂದರು.

ಜಿಲ್ಲಾ ಕಾಂಗ್ರೆಸ್ ಸಂಶೋಧನಾ ವಿಭಾಗದ ಅಧ್ಯಕ್ಷ ನಾಗರಾಜ್ ಮಾತನಾಡಿ, ಕೋಮುವಾದಿಗಳ ಬಗ್ಗೆ ಜನರಿಗೆ ತಿಳವಳಿಕೆ ನೀಡಬೇಕು. ಕಾಂಗ್ರೆಸ್ ಪಕ್ಷದ ಬಗೆಗಿನ ತಪ್ಪು ಕಲ್ಪನೆ ಹೋಗಲಾಡಿಸಲು ಜನರಿಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಪಕ್ಷದ ಪ್ರತಿ ಕಾರ್ಯಕರ್ತರು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ಮೈಸೂರು ಮತ್ತು ಚಾಮರಾಜನಗರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಪಡೆಯಬೇಕು. ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಪರಾಮರ್ಶೆ ಮಾಡಲು ಸಂಶೋಧನಾ ವಿಭಾಗದಿಂದ ಗ್ಯಾರಂಟಿ ಸಲಹಾ ಸಮಿತಿ, ಚುನಾವಣಾ ಸಲಹಾ ಸಮಿತಿ ಸೇರಿ 6 ಸಮಿತಿಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.

ರೋಜ್ಗಾರ್ ಮೇಳದಲ್ಲಿ 75 ಸಾವಿರ ಯುವಕರಿಗೆ ಉದ್ಯೋಗ ನೀಡಲಾಗಿದೆ. ಎಂದು ಪ್ರಧಾನಿ ಮೋದಿ ಹೇಳಿದ್ದರು. ಅದನ್ನು ಪರಿಶೀಲಿಸಿದಾಗ 6 ತಿಂಗಳ ಹಿಂದೆ ರೈಲ್ವೆಯಲ್ಲಿ ನೇಮಕಾತಿ ನಡೆದಿರುವುದು ತಿಳಿಯಿದು. ಮೋದಿ ಅವರು ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡಿದರು. ರೋಜ್ಗಾರ್ ಮೇಳದಲ್ಲಿ ಸರ್ಕಾರ ನೇಮಕಾತಿ ನಡೆಯುವುದಿಲ್ಲ ಎಂಬುದನ್ನು ನಾವೆಲ್ಲರೂ ತಿಳಿಯಬೇಕು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯ್‌ ಕುಮಾರ್ ಮಾತನಾಡಿ, ಎಐಸಿಸಿ ಸೂಚನೆ ಮೇರೆಗೆ ರಚಿಸಿರುವ ಸಂಶೋಧನಾ ವಿಭಾಗದಲ್ಲಿ 150 ನಿವೃತ್ತ ಅಧಿಕಾರಿಗಳು ಇದ್ದಾರೆ. ಇವರು ಸಮಾಜವಾದಿ ಮನೋಭಾವದವರಾಗಿದ್ದು, ತೆರೆಯ ಹಿಂದೆ ಪಕ್ಷಕ್ಕೆ ಸಲಹೆ ನೀಡುವುದಾಗಿ ತಿಳಿಸಿದರು.

ಸಭೆಯಲ್ಲಿ ವಿದ್ಯುನ್ಮಾನ ಮತ ಯಂತ್ರದ ಬದಲು ಹಿಂದಿನಂತೆಯೇ ಮತ ಪತ್ರ ಜಾರಿಗೆ ತರುವಂತೆ ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಗುವುದು. ಇದನ್ನು ಅನುಷ್ಠಾನಗೊಳಿಸುವಂತೆ ಕೇಂದ್ರ ಚುನಾವಣಾ ಆಯೋಗವನ್ನು ಒತ್ತಾಯಿಸುವುದಾಗಿ ಅವರು ಹೇಳಿದರು.

ಕೆಪಿಸಿಸಿ ಮಾಧ್ಯಮ ವಕ್ತಾರ ಅನಿಲ್ ಕುಮಾರ ತಡಕಲ್ ವಿಷಯ ಮಂಡಿಸಿದರು. ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ ಇದ್ದರು.

Share this article