ನೂತನ ಗೋದಾಮು ಕಟ್ಟಡ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ

KannadaprabhaNewsNetwork | Published : Feb 21, 2025 11:47 PM

ಸಾರಾಂಶ

ನಾಗಮಂಗಲ ತಾಲೂಕಿನ ರೈತರ ಅನುಕೂಲಕ್ಕಾಗಿ ಕಳೆದ 75 ವರ್ಷಗಳ ಹಿಂದೆ ಹಿರಿಯ ಸಹಕಾರಿ ಧುರೀಣ ಟಿ.ಎನ್.ಮಾದಪ್ಪಗೌಡರು ಸ್ಥಾಪಿಸಿರುವ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು ಆಡಳಿತ ಮಂಡಳಿ ನಿರ್ದೇಶಕರು ಮತ್ತು ಸದಸ್ಯರ ಸಹಕಾರ ಮತ್ತು ಪರಿಶ್ರಮದಿಂದಾಗಿ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿರುವುದು ಶ್ಲಾಘನೀಯ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಿಂದ ಟಿ.ಬಿ.ಬಡಾವಣೆಯ ಎಚ್.ಪಿ.ಪೆಟ್ರೋಲ್ ಬಂಕ್ ಹಿಂಭಾದ 50 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಗೋದಾಮು ಕಟ್ಟಡವನ್ನು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಶುಕ್ರವಾರ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ತಾಲೂಕಿನ ರೈತರ ಅನುಕೂಲಕ್ಕಾಗಿ ಕಳೆದ 75 ವರ್ಷಗಳ ಹಿಂದೆ ಹಿರಿಯ ಸಹಕಾರಿ ಧುರೀಣ ಟಿ.ಎನ್.ಮಾದಪ್ಪಗೌಡರು ಸ್ಥಾಪಿಸಿರುವ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು ಆಡಳಿತ ಮಂಡಳಿ ನಿರ್ದೇಶಕರು ಮತ್ತು ಸದಸ್ಯರ ಸಹಕಾರ ಮತ್ತು ಪರಿಶ್ರಮದಿಂದಾಗಿ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಸಂಘದಲ್ಲಿ ಸದಸ್ಯತ್ವ ಹೊಂದಿರುವ ಷೇರುದಾರರ ಹಾಗೂ ಕಾಂಗ್ರೆಸ್ ಮುಖಂಡರ ಸಹಕಾರದಿಂದ ಈವರೆಗೆ ಪಕ್ಷದ ಬೆಂಬಲಿತ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಿದೆ. ಸಂಸ್ಥೆ ಅಭಿವೃದ್ಧಿಗೆ ಪೂರಕವಾಗಿ ಸ್ಥಾಪಿಸಿರುವ ಎಚ್.ಪಿ.ಪೆಟ್ರೋಲ್ ಬಂಕ್‌ನಿಂದ ಜನರಿಗೆ ಬಹಳಷ್ಟು ಅನುಕೂಲವಾಗುತ್ತಿದೆ ಎಂದರು.

ಆಹಾರ ಪದಾರ್ಥ ದಾಸ್ತಾನು ಮಾಡಲು ನೂತನವಾಗಿ ನಿರ್ಮಿಸಿರುವ ಈ ಗೋದಾಮು ಕಟ್ಟಡದ ಮೇಲ್ಭಾಗದಲ್ಲಿ ಸುಸಜ್ಜಿತ ಸಭಾಂಗಣ ಹಾಗೂ ಅತಿಥಿ ಗೃಹ ನಿರ್ಮಿಸಬೇಕೆಂದು ಆಡಳಿತ ಮಂಡಳಿ ಉದ್ದೇಶಿಸಿರುವುದು ಉತ್ತಮ ಬೆಳವಣಿಗೆ. ಇದಕ್ಕಾಗಿ ಶೀಘ್ರದಲ್ಲಿ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಸಂಸ್ಥೆಗೆ ಪೆಟ್ರೋಲ್ ಬಂಕ್ ಮಂಜೂರಾದಾಗ ಅನೇಕ ಅಡಚಣೆಗಳು ಎದುರಾದರೂ ಕೂಡ ಆಡಳಿತ ಮಂಡಳಿ ಪ್ರಯತ್ನಕ್ಕೆ ತಾವು ಸಹಕಾರ ನೀಡಿದ್ದರಿಂದ ಇಂದು ಅತ್ಯಂತ ಯಶಸ್ವಿಯಾಗಿ ನಡೆದು ಅದರ ಲಾಭದಿಂದಾಗಿ ನೌಕರರ ವೇತನವೂ ಸೇರಿದಂತೆ ಸಂಸ್ಥೆ ಅಭಿವೃದ್ಧಿಯತ್ತ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆ ಮೂಲಕ ಷೇರುದಾರರಿಗೆ ಮತ್ತು ಸಾರ್ವಜನಿಕರಿಗೆ ಮತ್ತಷ್ಟು ಸೇವೆ ಸಿಗಬೇಕೆಂಬುದೇ ನನ್ನ ಆಶಯವಾಗಿದೆ ಎಂದು ಹೇಳಿದರು.

ಈ ವೇಳೆ ಟಿಎಪಿಸಿಎಂಎಸ್ ಅಧ್ಯಕ್ಷ ಎಚ್.ಎನ್.ಗಿರೀಶ್, ಉಪಾಧ್ಯಕ್ಷ ಡಿ.ಬಿ.ರಾಜಯ್ಯ, ನಿರ್ದೇಶಕರಾದ ಕೆ.ವಿ.ದಿನೇಶ್, ಅಲ್ಪಹಳ್ಳಿ ಡಿ.ಕೃಷ್ಣೇಗೌಡ, ತಿಮ್ಮಪ್ಪ, ಎಚ್.ಸಿ.ಚೇತನ್‌ಕುಮಾರ್, ಎಂ.ಸವಿತ, ಆರ್.ಎ.ಗೀತಾ, ಜೆ. ಆಶಾ, ಚಿಕ್ಕಮ್ಮ, ಯತೀಶ್ ಆರ್.ಈಡಿಗ, ಸಿ.ಎಂ.ಕುಮಾರ, ಸಹಕಾರ ಸಂಘಗಳ ಉಪ ನಿರ್ದೇಶಕ ನಾಗಭೂಷಣ್, ಸಂಸ್ಥೆ ಕಾರ್ಯದರ್ಶಿ ಎಂ.ಕೆ.ಮೋಹನರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮುಖಂಡರಾದ ಎಂ.ಪ್ರಸನ್ನ, ಸಂಪತ್‌ಕುಮಾರ್, ತ್ಯಾಪೇನಹಳ್ಳಿ ಶ್ರೀನಿವಾಸ್, ಆರ್.ಕೃಷ್ಣೇಗೌಡ, ತಿಮ್ಮರಾಯಿಗೌಡ, ಎಸ್.ಬಿ.ರಮೇಶ್, ವಸಂತಮಣಿ, ದಾಸೇಗೌಡ ಸೇರಿದಂತೆ ಹಲವರು ಇದ್ದರು.

Share this article