ಪ್ರಸ್ತುತ ಕಾನೂನು ಕ್ಷೇತ್ರದಲ್ಲಿ ಉತ್ತಮ ಅವಕಾಶ, ಸಂಬಳ, ಸೌಲಭ್ಯಗಳಿವೆ: - ನ್ಯಾ.ಪಿ.ಎಸ್. ದಿನೇಶ್ ಕುಮಾರ್

KannadaprabhaNewsNetwork | Published : Feb 14, 2024 2:16 AM

ಸಾರಾಂಶ

ಶಿಸ್ತು, ಶ್ರದ್ಧೆ, ನೈತಿಕತೆಯುಳ್ಳ ಜೀವನ ಮಾತ್ರ ನಮ್ಮನ್ನು ಉತ್ತಮ ಹಂತಕ್ಕೆ ಕೊಂಡೊಯ್ಯಬಲ್ಲದು. ನ್ಯಾಯಾಲಯಕ್ಕೆ ಹೋಗುವಾಗ ತಯಾರಿ ಮುಖ್ಯ. ಒಂದು ವೇಳೆ ವಕೀಲರಾಗಿ, ತಯಾರಿ ಮಾಡಿರದಿದ್ದರೆ ಪ್ರಮಾಣಿಕವಾಗಿ ನ್ಯಾಯಾಧೀಶರಲ್ಲಿ ಸಮಯ ಕೇಳಿ. ನ್ಯಾಯಾಂಗಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ವೃತ್ತಿ ಆರಂಭಿಸುವವರು ಕಾನೂನಿನ ಅರಿವು, ಉತ್ತಮ ನಡತೆ ಹಾಗೂ ನಿರಂತರ ತಯಾರಿಗೆ ಆದ್ಯತೆ ನೀಡಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಪ್ರಸ್ತುತ ಕಾನೂನು ಕ್ಷೇತ್ರದಲ್ಲಿ ಉತ್ತಮ ಅವಕಾಶ, ಸಂಬಳ, ಸೌಲಭ್ಯಗಳಿವೆ ಎಂದು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ತಿಳಿಸಿದರು.

ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಹಾಗೂ ವಕೀಲರ ಸಂಘವು ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಹುಣಸೂರು ಮತ್ತು ಪಿರಿಯಾಪಟ್ಟಣದ ನ್ಯಾಯಾಧೀಶರುಗಳ ನಿವಾಸಗಳ ವರ್ಚುವಲ್‌ ಉದ್ಘಾಟನೆ, ಮೈಸೂರು ಜಿಲ್ಲಾ ನ್ಯಾಯಾಂಗ ನೌಕರರ ಸಂಘದ ಕಟ್ಟಡ ಮತ್ತು ಮಳಲವಾಡಿಯ ಹೊಸ ನ್ಯಾಯಾಲಯಗಳ ಸಂಕೀರ್ಣದಲ್ಲಿನ ಎರಡು ಹೆಚ್ಚುವರಿ ಲಿಫ್ಟ್‌ ಗಳನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಶಿಸ್ತು, ಶ್ರದ್ಧೆ, ನೈತಿಕತೆಯುಳ್ಳ ಜೀವನ ಮಾತ್ರ ನಮ್ಮನ್ನು ಉತ್ತಮ ಹಂತಕ್ಕೆ ಕೊಂಡೊಯ್ಯಬಲ್ಲದು. ನ್ಯಾಯಾಲಯಕ್ಕೆ ಹೋಗುವಾಗ ತಯಾರಿ ಮುಖ್ಯ. ಒಂದು ವೇಳೆ ವಕೀಲರಾಗಿ, ತಯಾರಿ ಮಾಡಿರದಿದ್ದರೆ ಪ್ರಮಾಣಿಕವಾಗಿ ನ್ಯಾಯಾಧೀಶರಲ್ಲಿ ಸಮಯ ಕೇಳಿ. ನ್ಯಾಯಾಂಗಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ವೃತ್ತಿ ಆರಂಭಿಸುವವರು ಕಾನೂನಿನ ಅರಿವು, ಉತ್ತಮ ನಡತೆ ಹಾಗೂ ನಿರಂತರ ತಯಾರಿಗೆ ಆದ್ಯತೆ ನೀಡಬೇಕು ಎಂದು ಅವರು ಕಿವಿಮಾತು ಹೇಳಿದರು.

28 ವರ್ಷಗಳ ಬಳಿಕ ರಾಜ್ಯದವರನ್ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಗಿದೆ. ನಾನು ಆಯ್ಕೆಯಾಗುವ ಬಗ್ಗೆ ಎಂದೂ ಯೋಚಿಸಿರಲಿಲ್ಲ. ಮಹನೀಯರ ಒಡನಾಟದಿಂದ ಸರಳ ಸಜ್ಜನಿಕೆಯ ಜೀವನ ನನ್ನದಾಗಿದೆ. ನಿಮಗೆಲ್ಲ ಏನಾದರೂ ಸೇವೆ ಮಾಡುವ ಅವಕಾಶ ಸಿಕ್ಕರೆ ಸಂತಸವಾಗುತ್ತದೆ ಎಂದರು.

ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಕೆ. ಸೋಮಶೇಖರ್‌, ನ್ಯಾ. ಶ್ರೀನಿವಾಸ್‌ ಹರೀಶ್‌ ಕುಮಾರ್‌, ನ್ಯಾ.ಟಿ.ಜಿ. ಶಿವಶಂಕರೇಗೌಡ, ಮಹಾ ವಿಲೇಖನಾಧಿಕಾರಿ ಕೆ.ಎಸ್‌. ಭರತ್‌ ಕುಮಾರ್, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಪ್ರಭಾವತಿ ಎಂ. ಹಿರೇಮಠ, ಶಾಸಕ ದರ್ಶನ್ ಧ್ರುವನಾರಾಯಣ್, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಂ. ಮಹಾದೇವಸ್ವಾಮಿ, ಉಪಾಧ್ಯಕ್ಷ ಪುಟ್ಟಸಿದ್ದೇಗೌಡ, ಕಾರ್ಯದರ್ಶಿ ಎಸ್‌. ಉಮೇಶ್‌, ಲೋಕೋಪಯೋಗಿ ಅಧೀಕ್ಷಕ ಎಂಜಿನಿಯರ್ ಆರ್‌. ವಿನಯ್‌ ಕುಮಾರ್‌ ಮೊದಲಾದವರು ಇದ್ದರು.

-- ಬಾಕ್ಸ್--

ಗ್ರಂಥಾಲಯ ಉದ್ಘಾಟನೆ- ಸನ್ಮಾನ

ಜಿಲ್ಲಾ ನ್ಯಾಯಾಲಯದಲ್ಲಿನ ನವೀಕೃತ ಗ್ರಂಥಾಲಯವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಉದ್ಘಾಟಿಸಿದರು.

ಇದೇ ವೇಳೆ ಗ್ರಂಥಾಲಯ ನವೀಕರಣಕ್ಕೆ ಸಹಕರಿಸಿದ ಶಾಸಕ ದರ್ಶನ್ ಧ್ರುವನಾರಾಯಣ್, ವಕೀಲರಾದ ರಾಜಣ್ಣ, ಎಸ್‌. ಶಂಕರ್‌, ಎಚ್‌.ಎನ್‌. ವೆಂಕಟೇಶ್‌ ಅವರನ್ನು ಸನ್ಮಾನಿಸಲಾಯಿತು.

Share this article