ಕನ್ನಡಪ್ರಭ ವಾರ್ತೆ ಸವದತ್ತಿ
ಪಟ್ಟಣದ ಮಾಮನಿ ಕಲ್ಯಾಣ ಮಂಟಪದಲ್ಲಿ ಸೆ.೧೪ ರಂದು ಬಸವಾದಿ ಶಿವಶರಣ ಹೂಗಾರ ಮಾದಯ್ಯನವರ ಜಯಂತ್ಯುತ್ಸವ ಮತ್ತು ಹೂಗಾರ, ಗುರುವ, ಜೀರ ಮತ್ತು ಪೂಜಾರ ಸಮಾಜಗಳ ಜಿಲ್ಲಾಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೂಗಾರ ಸಮಾಜದ ಜಿಲ್ಲಾಧ್ಯಕ್ಷ ಶಿವಾನಂದ ಪಾಂ.ಹೂಗಾರ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಹೂಗಾರ ಮಾದಯ್ಯನವರ ಜಯಂತಿ ಅಂಗವಾಗಿ ಬೆಳಗ್ಗೆ ೧೦ಕ್ಕೆ ಬೃಹತ್ತ ಕುಂಭಮೇಳವನ್ನು ಆಯೋಜಿಸಲಾಗಿದ್ದು, ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಕುಂಭಮೇಳದ ಮೆರವಣಿಗೆಯೊಂದಿಗೆ ಮಾಮನಿ ಕಲ್ಯಾಣ ಮಂಟಪ ತಲುಪಿ ಅಲ್ಲಿ ಸಮಾವೇಶ ನಡೆಯಲಿದೆ ಎಂದರು.ಕಾಗವಾಡದ ಯತೀಶ್ವರಾನಂದ ಮಹಾಸ್ವಾಮೀಜಿ, ಸವದತ್ತಿ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಲಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಶಾಸಕ ವಿಶ್ವಾಸ ವೈದ್ಯ ಸೇರಿದಂತೆ ಜಿಲ್ಲೆಯಲ್ಲಿ ಶಾಸಕರು, ಸಂಸದರು, ವಿ.ಪ ಸದಸ್ಯರು ಮತ್ತು ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಲಿದೆ. ಡಾ.ಮಲ್ಲಿಕಾರ್ಜುನ ಹೂಗಾರ ಉಪನ್ಯಾಸ ನೀಡಲಿದ್ದಾರೆ ಎಂದರು.ಜಿಲ್ಲಾ ಉಪಾಧ್ಯಕ್ಷ ಶಿವಲಿಂಗಪ್ರಭು ಹೂಗಾರ ಹಾಗೂ ಪ್ರಧಾನ ಕಾರ್ಯದರ್ಶಿ ಮೋಹನ ಹೂಗಾರ ಮಾತನಾಡಿ, ರಾಜ್ಯದಲ್ಲಿ ೧೫ ಲಕ್ಷ ಜನ ಹೂಗಾರ ಸಮಾಜ ಬಾಂಧವರಿದ್ದು, ಜಿಲ್ಲೆಯಲ್ಲಿ ೧.೮ ಲಕ್ಷ ಜನಸಂಖ್ಯೆಯನ್ನು ಈ ಸಮಾಜ ಹೊಂದಿದೆ. ಸಮಾಜದ ಜನರಿಗೆ ಶಕ್ತಿ ತುಂಬುವ ಕಾರ್ಯವನ್ನು ಈ ಸಮಾವೇಶದ ಮೂಲಕ ಮಾಡಲಾಗುತ್ತಿದ್ದು, ನಮ್ಮ ಸಮಾಜಕ್ಕೆ ಸಿಗಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತಿದೆ ಎಂದು ತಿಳಿಸಿದರು.ಸವದತ್ತಿ ತಾಲೂಕು ಅಧ್ಯಕ್ಷ ಶಿವಾನಂದ ಹೂಗಾರ ಮಾತನಾಡಿ, ಎಲ್ಲ ಸಮಾಜದವರಿಗೆ ಕೊಂಡಿಯಾಗಿ ಹೂಗಾರ ಸಮಾಜವು ನಿತ್ಯವು ತಮ್ಮ ಕಾಯಕವನ್ನು ಮಾಡಿಕೊಂಡು ಬರುತ್ತಿದ್ದು, ಸರ್ಕಾರದಿಂದ ನಮಗೆ ನ್ಯಾಯ ಸಮ್ಮತವಾದ ಸೌಲಭ್ಯಗಳು ದೊರಕುತ್ತಿಲ್ಲ ಎಂದು ದೂರಿದರು.ಬಿ.ಎಂ.ಹೂಗಾರ, ಅರ್ಜುನ ಹೂಗಾರ, ಉದಯ ಹೂಗಾರ, ಶಿವಪುತ್ರಪ್ಪ ಹೂಗಾರ, ಸಿ.ಬಿ.ಪೂಜಾರ, ಬಸವರಾಜ ಹೂಗಾರ, ರವಿ ಹೂಗಾರ, ಕಾಂತು ಪೂಜಾರ ಹಾಗೂ ಹೂಗಾರ ಸಮಾಜದ ಮುಖಂಡರು ಉಪಸ್ಥಿತರಿದ್ದರು.ಹೂಗಾರ ಸಮಾಜದ ಜನರಲ್ಲಿ ಜಾಗೃತಿಯನ್ನು ಮೂಡಿಸುವುದರ ಜೊತೆಗೆ ಆರ್ಥಿಕ ಮತ್ತು ಶೈಕ್ಷಣಿಕ ಬೆಳವಣಿಗೆಯ ಅಭಿವೃದ್ಧಿಗೊಸ್ಕರ ಜಿಲ್ಲಾಮಟ್ಟದ ಸಭೆಯನ್ನು ಸವದತ್ತಿಯಲ್ಲಿ ಆಯೋಜಿಸಲಾಗುತ್ತಿದೆ.
-ಶಿವಾನಂದ ಪಾಂ.ಹೂಗಾರ, ಹೂಗಾರ ಸಮಾಜದ ಜಿಲ್ಲಾಧ್ಯಕ್ಷರು.