- ಜಿಲ್ಲೆಯಲ್ಲಿ 8272ಕ್ಕೂ ಅಧಿಕ ಪ್ರಕರಣಗಳ ಇತ್ಯರ್ಥ ಗುರಿ: ನ್ಯಾ. ರಾಜೇಶ್ವರಿ ಎನ್. ಹೆಗಡೆ ಹೇಳಿಕೆ
- - - ಕನ್ನಡಪ್ರಭ ವಾರ್ತೆ ದಾವಣಗೆರೆಶೀಘ್ರ ನ್ಯಾಯದಾನ, ರಾಜಿ ಸಂಧಾನ ಮೂಲಕ ಪ್ರಕರಣಗಳ ಇತ್ಯರ್ಥಪಡಿಸಲು ಸೆ.14ರಂದು 2024ನೇ ಸಾಲಿನ ಮೂರನೇ ರಾಷ್ಟ್ರೀಯ ಲೋಕ್ ಅದಾಲತ್ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಸುಮಾರು 8272ಕ್ಕೂ ಅಧಿಕ ಪ್ರಕರಣಗಳನ್ನು ಈ ಕಾರ್ಯಕ್ರಮದಲ್ಲಿ ಇತ್ಯರ್ಥಗೊಳಿಸುವ ಗುರಿ ಹೊಂದಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷೆ ರಾಜೇಶ್ವರಿ ಎನ್. ಹೆಗಡೆ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತ್ವರಿತ ನ್ಯಾಯ, ಕಡಿಮೆ ವೆಚ್ಚದಲ್ಲಿ ನ್ಯಾಯದಾನ ಮಾಡಲು ರಾಜಿ, ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥಗೊಳಿಸುವ ಉದ್ದೇಶ ಕಾರ್ಯಕ್ರಮ ಹೊಂದಿದೆ ಎಂದರು.ಕಕ್ಷಿದಾರರು- ಎದುರುದಾರರಿಗೆ ಅನುಕೂಲ:
ಲೋಕ್ ಅದಾಲತ್‍ನಲ್ಲಿ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಕಡಿಮೆ ಖರ್ಚಿನಲ್ಲಿ ಶೀಘ್ರ ಬಗೆಹರಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಿದೆ. ರಾಜಿ ಆಗಬಲ್ಲ ಎಲ್ಲ ಸಿವಿಲ್, ಕ್ರಿಮಿನಲ್ ಪ್ರಕರಣ, ಮೋಟಾರ್ ವಾಹನ ಅಪಘಾತ ಪರಿಹಾರ, ಚೆಕ್ ಅಮಾನ್ಯ, ಭೂ ಸ್ವಾಧೀನ ಪರಿಹಾರ, ಬ್ಯಾಂಕ್ ಸಾಲ ವಸೂಲಾತಿ, ಗಣಿ ಮತ್ತು ಭೂ ವಿಜ್ಞಾನ ಕಾಯ್ದೆಗೆ ಸಂಬಂಧಿಸಿದ ಕೇಸ್, ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳಲ್ಲಿ ವಿಚ್ಛೇದನ ಹೊರತುಪಡಿಸಿ, ಪಿಂಚಣಿ, ಚೇತನ ಭತ್ಯೆ, ವಿದ್ಯುತ್, ನೀರಿನ ಶುಲ್ಕ, ಕೈಗಾರಿಕಾ ಕಾರ್ಮಿಕರ ವೇತನ, ಕಾರ್ಮಿಕರ ವಿವಾದ, ಆಸ್ತಿ ತೆರಿಗೆ ಶೇ.5ರಷ್ಟು ರಿಯಾಯಿತಿ ಸೇರಿದಂತೆ ಇನ್ನಿತರೆ ರಾಜಿಯಾಗಬಲ್ಲ ಪ್ರಕರಣಗಳಲ್ಲಿ ಬಗೆಹರಿಸಿಕೊಳ್ಳಬಹುದು. ಇದರಿಂದ ಕಕ್ಷಿದಾರರು ಹಾಗೂ ಎದುರುದಾರರಿಗೂ ಅನುಕೂಲ ಎಂದು ಹೇಳಿದರು.ಸೆ.14ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ. ವ್ಯಾಜ್ಯ ಮುಕ್ತ ಗ್ರಾಮಗಳೆಂದು ಘೋಷಣೆಗೆ ದಾವಣಗೆರೆ ತಾಲೂಕಿನ ಬಾವಿಹಾಳ್, ಓಬಣ್ಣನಹಳ್ಳಿ, ರಂಗಯ್ಯನಮಟ್ಟಿ (ಗುಡ್ಡದ ಕ್ಯಾಪ್) ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅದೇ ರೀತಿ ಆಯಾ ತಾಲೂಕಿನಲ್ಲಿ ವ್ಯಾಜ್ಯಮುಕ್ತ ಗ್ರಾಮಗಳನ್ನಾಗಿ ಆಯ್ಕೆ ಮಾಡಿ ಘೋಷಣೆ ಮಾಡಲಾಗುವುದು. ಲೋಕ್ ಅದಾಲತ್‍ನಲ್ಲಿ ಸಾರ್ವಜನಿಕರು, ಕಕ್ಷಿದಾರರು ರಾಜಿ, ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಆಯಾ ತಾಲೂಕಿನ ನ್ಯಾಯಾಲಯದಲ್ಲಿ ಭಾಗವಹಿಸಬಹುದು. ಜಿಲ್ಲಾ ನ್ಯಾಯಾಲಯದ ವೆಬ್‍ಸೈಟ್ ಮೂಲಕ ಲಿಂಕ್ ನೀಡಲಿದ್ದು, ವೀಡಿಯೋ ಕಾನ್ಫರೆನ್ಸ್ ಮೂಲಕವೂ ಅದಾಲತ್‍ನಲ್ಲಿ ಭಾಗಿಯಾಗಬಹುದು ಎಂದು ನ್ಯಾ.ರಾಜೇಶ್ವರಿ ಹೆಗಡೆ ಅವರು ಮಾಹಿತಿ ನೀಡಿದರು.
ಈ ಸಲ 17 ದಂಪತಿ:ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ಮಾತನಾಡಿ, ಕಳೆದ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 18 ಪತಿ-ಪತ್ನಿಯರು ಒಂದಾಗಿದ್ದರು. ಈ ಸಲ 17 ದಂಪತಿಗಳು ಒಂದಾಗಲು ಮುಂದಾಗಿದ್ದಾರೆ. ಈಗಾಗಲೇ ಎಲ್ಲ ತಾಲೂಕು ನ್ಯಾಯಾಲಯಗಳಿಗೆ ಭೇಟಿ ನೀಡಿ, ಬೈಠಕ್ ನಡೆಸುವ ಮೂಲಕ ಜಾಗೃತಿ ಮೂಡಿಸಲಾಗಿದೆ. ಜಗಳೂರಲ್ಲಿ ನಡೆದ ಬೈಠಕ್ ಒಂದರಲ್ಲಿ 35 ಪ್ರಕರಣಗಳನ್ನು ಒಂದೇ ದಿನ ರಾಜಿ, ಸಂಧಾನ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಮಾತನಾಡಿ, ರಾಷ್ಟ್ರೀಯ ಲೋಕ್ ಅದಾಲತ್‍ಗೆ ಬೇಕಾದ ಎಲ್ಲ ಸಹಕಾರವನ್ನು ಇಲಾಖೆ ನೀಡಲಿದೆ. ಇದರಿಂದ ತ್ವರಿತ ನ್ಯಾಯದಾನವೂ ಆದಂತಾಗುತ್ತದೆ. ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಈ ಅವಕಾಶ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಟಿ.ಎಂ.ನಿವೇದಿತಾ, ವಕೀಲರ ಸಂಘ ಅಧ್ಯಕ್ಷ ಎಲ್.ಎಚ್. ಅರುಣಕುಮಾರ, ಕಾರ್ಯದರ್ಶಿ ಎಸ್.ಬಸವರಾಜ, ಜಂಟಿ ಕಾರ್ಯದರ್ಶಿ ಮಂಜುನಾಥ ಇದ್ದರು.
- - -ಕೋಟ್ * ಜಿಲ್ಲೆಯಲ್ಲಿ 42523 ಪ್ರಕರಣ ಬಾಕಿ ಜಿಲ್ಲೆಯಲ್ಲಿ ಸೆ.9 ರವರೆಗೆ ಒಟ್ಟು 42523 ಪ್ರಕರಣ ಇತ್ಯರ್ಥಕ್ಕೆ ಬಾಕಿ ಇವೆ. ಈ ಪೈಕಿ 8272 ಪ್ರಕರಣ ಅದಾಲತ್‍ನಲ್ಲಿ ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ. ಈಗಾಗಲೇ ವಿವಿಧ ಬೈಠಕ್ ಮೂಲಕ ರಾಜಿ, ಸಂಧಾನ ಮಾಡಿರುವ 3442 ಪ್ರಕರಣ ಮತ್ತು 63464 ವ್ಯಾಜ್ಯಪೂರ್ವ ಪ್ರಕರಣಗಳನ್ನು ಸೆ.14ರ ಲೋಕ್ ಅದಾಲತ್‍ನಲ್ಲಿ ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ. ಈ ಹಿಂದೆ ನಡೆದ ಲೋಕ್ ಅದಾಲತ್‍ನಲ್ಲಿ 2023ರ ಸೆ.9ರಂದು 4224 ಬಾಕಿ ಪ್ರಕರಣ, 99140 ವ್ಯಾಜ್ಯ ಪೂರ್ವ ಪ್ರಕರಣ, 2024 ರ ಮಾರ್ಚ್ 16ರ ಅದಾಲತ್‍ನಲ್ಲಿ 4568 ಬಾಕಿ ಪ್ರಕರಣ, 144773 ವ್ಯಾಜ್ಯ ಪೂರ್ವ ಪ್ರಕರಣ, 2024ರ ಜುಲೈ 13ರ ಲೋಕ್ ಅದಾಲತ್‍ನಲ್ಲಿ 7944 ಬಾಕಿ ಪ್ರಕರಣ, 255139 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥ ಮಾಡಿ ಜನರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
- - --11ಕೆಡಿವಿಜಿ1, 2:
ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ರಾಷ್ಟ್ರೀಯ ಲೋಕ್ ಅದಾಲತ್ ಆಯೋಜನೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.