ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜಕೀಯದ ಅಂತಿಮ ಯಾತ್ರೆ ಆರಂಭ: ಕೇಂದ್ರ ಸಚಿವ ಕುಮಾರಸ್ವಾಮಿ

KannadaprabhaNewsNetwork | Updated : Aug 05 2024, 09:32 AM IST

ಸಾರಾಂಶ

 ಇಳಿ ವಯಸ್ಸಿನಲ್ಲಿ ಯಡಿಯೂರಪ್ಪ ಮೇಲೆ ಸುಳ್ಳು ಕೇಸು ಹಾಕಿ, ಅವರನ್ನು ಕೆಣಕಿ ನೋವು ಕೊಟ್ಟಿದ್ದೀರಿ. ನಮ್ಮ ಆಸ್ತಿ ಕೇಳಿ ನನ್ನನ್ನು ಕೆರಳಿಸಿದ್ದೀರಿ. ನಾನು ನನ್ನ ಕುಟುಂಬದ ಆಸ್ತಿ ಬಗ್ಗೆ ಯಾವ ತನಿಖೆಗೂ ಸಿದ್ಧನಿದ್ದೇನೆ -   ಕುಮಾರಸ್ವಾಮಿ  

ರಾಮನಗರ: ಇಳಿ ವಯಸ್ಸಿನಲ್ಲಿ ಯಡಿಯೂರಪ್ಪ ಮೇಲೆ ಸುಳ್ಳು ಕೇಸು ಹಾಕಿ, ಅವರನ್ನು ಕೆಣಕಿ ನೋವು ಕೊಟ್ಟಿದ್ದೀರಿ. ನಮ್ಮ ಆಸ್ತಿ ಕೇಳಿ ನನ್ನನ್ನು ಕೆರಳಿಸಿದ್ದೀರಿ. ನಾನು ನನ್ನ ಕುಟುಂಬದ ಆಸ್ತಿ ಬಗ್ಗೆ ಯಾವ ತನಿಖೆಗೂ ಸಿದ್ಧನಿದ್ದೇನೆ. ನಮ್ಮನ್ನು ಕೆಣಕಿರುವ ನಿಮ್ಮ ರಾಜಕೀಯದ ಅಂತಿಮ ಯಾತ್ರೆ ಆರಂಭವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.

ರಾಮನಗರದಲ್ಲಿ ಮೈಸೂರು ಚಲೋ ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ನಾಡಿನ ಆರುವರೆ ಕೋಟಿ ಜನರು ನನ್ನ ಆಸ್ತಿ. ದೇವೇಗೌಡರ 60 ವರ್ಷಗಳ ರಾಜಕೀಯ ಜೀವನ ಹಾಗೂ ನನ್ನ ಸಹೋದರರ ಆಸ್ತಿ ಹೇಗೆ ಸಂಪಾದಿಸಿದ ಎಂದೆಲ್ಲ ಪ್ರಶ್ನೆ ಮಾಡಿದ್ದೀರಾ. ನಿಮಗೆ ಅಧಿಕಾರವಿದ್ದು, ಅದರ ಬಗ್ಗೆ ತನಿಖೆ ನಡೆಸಿ ಎಂದು ಸವಾಲೆಸೆದರು.

ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದ ವೇಳೆ, ಬೆಂಗಳೂರು ಸದಾಶಿವನಗರದಲ್ಲಿ 120*90 ಅಳತೆಯ ನಿವೇಶನ ಕೊಳ್ಳಲೇಬೇಕು ಎಂದು ಒತ್ತಾಯಿಸಿದ್ದಕ್ಕೆ, ದೇವೇಗೌಡರು ತಮ್ಮ ಬಳಿ ಇದ್ದ ಫಿಯೆಟ್ ಕಾರು ಮಾರಿ ಆ ನಿವೇಶನ ಕೊಂಡಿದ್ದರು. ನಂತರದ ದಿನಗಳಲ್ಲಿ ಆ ನಿವೇಶನವನ್ನು ನಾಲ್ಕು ಮಕ್ಕಳಿಗೆ ಭಾಗವಾಗಿ ಕೊಟ್ಟಿದ್ದಾರೆ. ದೇವೇಗೌಡರ ಹೆಸರಲ್ಲಿ ಯಾವ ಆಸ್ತಿಯೂ ಇಲ್ಲ ಮನೆಯೂ ಇಲ್ಲ. ಅವರ ಮಗಳ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂದರು.

ಶಿವಕುಮಾರ್ ಅವರೇ ಹೇಳಿಕೊಂಡಂತೆ ಅವರ ತಂದೆ ಕೆಂಪೇಗೌಡರು ಚಿನ್ನ ಅಳೆಯೋಕೆ ಹೋಗುತ್ತಿದ್ದರಂತೆ, ಅವರು ಚಿನ್ನ ಅಳೆಯೋಕೆ ಹೋಗ್ತಿದ್ದರೋ ಉರುಳಿ ಅಳೆಯೋಕೆ ಹೋಗುತ್ತಿದ್ದರೋ ಗೊತ್ತಿಲ್ಲ ಎಂದು ಲೇವಡಿ ಮಾಡಿದ ಕುಮಾರಸ್ವಾಮಿ, ನಿಮ್ಮ ಹಾಗೆ ಕಂಡ ಕಂಡವರ ಭೂಮಿಗೆ ಬೇಲಿ ಹಾಕಿಲ್ಲ. ಕಾಡು, ಬೆಟ್ಟ, ಕಲ್ಲು ನುಂಗಿ ಹಾಕಿರುವ ನಿಮಗೆ ನಮ್ಮನ್ನು ಪ್ರಶ್ನಿಸುವ ಯಾವ ನೈತಿಕ ಹಕ್ಕು ಇಲ್ಲ ಎಂದರು.

ನಾನು ಬೆಂಗಳೂರಿನಲ್ಲಿ ಕಾಲೇಜು ವ್ಯಾಸಂಗ ಮಾಡುತ್ತಿದ್ದ ವೇಳೆ ಬೆಂಗಳೂರಿನ ಕೆಲವು ಬಡಾವಣೆಗಳ ಕಸ ವಿಲೇವಾರಿ ಟೆಂಡರ್ ಪಡೆದುಕೊಂಡಿದ್ದು ನಿಜ. ಆದರೆ, ರಾಮನಗರದ ಜನತೆ ನನಗೆ ರಾಜಕೀಯ ಮಾಡಲು ಆಶೀರ್ವಾದ ಮಾಡಿದರು. ರಾಜ್ಯದ ಮೂಲೆ ಮೂಲೆಯಲ್ಲಿರುವ ಕಾಂಗ್ರೆಸ್ ಕಸ ಕ್ಲೀನ್ ಮಾಡಲು ಯಡಿಯೂರಪ್ಪನವರ ಜೊತೆ ಒಟ್ಟಾಗಿ ಹೊರಟಿದ್ದೇವೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ - ಬಿಜೆಪಿ ಅಶ್ವಮೇಧ ಆರಂಭಿಸಿವೆ. ಪ್ರತಿಯೊಂದಕ್ಕೂ ಲೆಕ್ಕ ಚುಕ್ತಾ ಮಾಡಿ ನಿಮ್ಮನ್ನು ಮುಗಿಸುವ ಕಾಲ ಹತ್ತಿರ ಬಂದಿದೆ ಎಂದು ತಿಳಿಸಿದರು.

ಮೈಸೂರು ಚಲೋ ಪಾದಯಾತ್ರೆಯನ್ನು ಗೃಹ ಸಚಿವ ಪರಮೇಶ್ವರ್ ಶವಯಾತ್ರೆ ಎಂದು ಲೇವಡಿ ಮಾಡಿದ್ದಾರೆ. ಪಿಎಸ್ಐ ಪರಶುರಾಂ ಅವರ ಸಾವಿನ ಮೂಲಕ ಕಾಂಗ್ರೆಸ್ ನವರ ಶವಯಾತ್ರೆ ಯಾದಗಿರಿಯಿಂದಲೇ ಆರಂಭವಾಗಲಿದೆ. ಕಾಂಗ್ರೆಸ್ ಪಾಪದ ಕೊಡ ತುಂಬಿದೆ. ರಾಜ್ಯದಲ್ಲಿ ಕಾಂಗ್ರೆಸ್ ನಿರ್ಮೂಲನೆ ಮಾಡಲೆಂದೇ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಜೆಡಿಎಸ್-ಬಿಜೆಪಿ ಮೈಸೂರು ಚಲೋ ಪಾದಯಾತ್ರೆ ರಾಜಕೀಯ ಸುನಾಮಿಯಲ್ಲಿ ಕಾಂಗ್ರೆಸ್ ಸಂಪೂರ್ಣನಿರ್ಮೂಲನೆ ಆಗಲಿದೆ ಎಂದರು.

ಮುಸಲ್ಮಾನ್ ಬಂಧುಗಳು ಪಶ್ಚಾತ್ತಾಪ ಪಡ್ತೀರಿ

ರಾಮನಗರ: ರಾಮನಗರದ ಮುಸಲ್ಮಾನ್ ಬಂಧುಗಳು ನನಗೆ ದೋಖಾ ಮಾಡಿದ್ದೀರಿ ಬೇಜಾರಿಲ್ಲ. ಮುಂದೊಂದು ದಿನ ಪಶ್ಚಾತ್ತಾಪ ಪಡ್ತೀರಿ ಅಂತ ನಾನು ಎದೆ ತಟ್ಟಿ ಹೇಳುತ್ತೇನೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದರು.

ನಾನು ನಿಮಗೆ ತೊಂದರೆ ನೀಡಲಿಲ್ಲ. ಜಾತಿ ರಾಜಕೀಯ ಮಾಡಲಿಲ್ಲ. 1995ರಲ್ಲಿ ನಾವು ರಾಮನಗರಕ್ಕೆ ಬಂದ ಮೇಲೆ ಒಂದಾದರು ಕೋಮು ಗಲಭೆ ಆಗಲು ಅವಕಾಶ ನೀಡಿದ್ದೀವಾ ಎಂಬುದನ್ನು ಮುಸ್ಲಿಂ ಬಾಂಧವರು ಹೇಳಬೇಕು. ಕಾಂಗ್ರೆಸ್ ಪಕ್ಷದ ಯಾವುದಾದರು ನಾಯಕರಿಗೆ ತೊಂದರೆ ಕೊಟ್ಟಿದ್ದೀನಾ. ಈಗ ಮಾತನಾಡಿದರೆ ಪೊಲೀಸ್ ಸ್ಟೇಷನ್ ಅಂತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕನಕಪುರದಲ್ಲಿ ಬಂಡೆ ಹೊಡೆದುಕೊಂಡು ಇದ್ದವರಿಗೆ ಸಾವಿರ ವೋಟು, ನನಗೆ ಎರಡು ಮೂರು ವೋಟು. ನನ್ನನ್ನು ಬಿಟ್ಟು ನೀವು ಹೇಗೆ ರಾಜಕೀಯ ಮಾಡುತ್ತೀರಾ ನೋಡುತ್ತೇನೆ. ನೀವೇ ನನ್ನನ್ನು ಬೆಳೆಸಿದವರು. ನನ್ನನ್ನು ಅಲ್ಲಾಡಿಸಲು ಸಾಧ್ಯವಿಲ್ಲ.ನಮ್ಮನ್ನೇ ಆಯ್ಕೆ ಮಾಡಿ ಎಂದು ನಾನು ಹೇಳುತ್ತಿಲ್ಲ. ಉತ್ತಮರನ್ನು ಆಯ್ಕೆ ಮಾಡಿ ಅಂತ ಮನವಿ ಮಾಡಿದ್ದೇನೆ. ನೀವು ಎಷ್ಟು ದಿನ ಹೀಗೆ ಮಾಡುತ್ತೀರಾ ನೋಡುತ್ತೇನೆ. ನೀವು ನಂಬಿ ಮತ ಹಾಕಿದ ವ್ಯಕ್ತಿ ಏನೆಲ್ಲಾ ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ವೀರೇಂದ್ರ ಪಾಟೀಲ್ ರನ್ನು ಅಧಿಕಾರದಿಂದ ಇಳಿಸಲು ಡಿ.ಕೆ.ಶಿವಕುಮಾರ್ ರಾಮನಗರ - ಚನ್ನಪಟ್ಟಣದಲ್ಲಿ ಬೆಂಕಿ ಹಚ್ಚಿದನು. ಆಗ ನಾನು ದೇವೇಗೌಡರನ್ನು ಇಲ್ಲಿಗೆ ಕರೆದುಕೊಂಡು ಬಂದೆ. ಈಗ ಬಂದವರು ಕ್ಷೇತ್ರವನ್ನು ಹಾಳು ಮಾಡುತ್ತಿದ್ದಾರೆ. ನಿನ್ನ ಪಾಪದ ಕೊಡ ತುಂಬಿದೆ. ನೀನು ನನ್ನ‌ ಬಗ್ಗೆ ಮಾತನಾಡುತ್ತೀಯಾ ಎಂದು ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಯಾದಗಿರಿಯಲ್ಲಿ ಪರಶುರಾಮ ಎಂಬ ಪಿಸಿಐ ಅಧಿಕಾರಿ, ಪೋಸ್ಟಿಂಗ್ ದುಡ್ಡು ತಗೊಂಡು ಹಣದ ಆಮೀಷದ ಪಿಶಾಚಿ ಕೃತ್ಯಕ್ಕೆ ಬಲಿಯಾಗಿದ್ದಾನೆ. ಈ ಸರ್ಕಾರಕ್ಕೆ ಏನಾದರೂ ಮನುಷತ್ವ ಇದೆಯಾ. ಇಲ್ಲೊಬ್ಬ ಹಲಗಯ್ಯ ಅಂತಾ ಪೊಲೀಸ್ ಅಧಿಕಾರಿ ಇದ್ದ. ಅವನು ದಲಿತ ಅಧಿಕಾರಿ ಅವನು 80 ಲಕ್ಷ ಕೊಟ್ಟ, ಅವನು ಪೋಸ್ಟಿಂಗ್ ಆಗಿಲ್ಲ ಅಂತಾ ಸತ್ತು ಹೋದ. ಪರಮೇಶ್ವರ್ ಈ ಸಾವಿಗೆ ಯಾರಪ್ಪ ಉತ್ತರ ಕೊಡ್ತಾರೆ.

-ಕುಮಾರಸ್ವಾಮಿ, ಕೇಂದ್ರ ಸಚಿವರು 

Share this article