ರಾಮನಗರ: ತೀವ್ರ ಕುತೂಹಲ ಕೆರಳಿಸಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಸ್ಥಾನದಿಂದ ನಿವೃತ್ತರಾದ ಮೇಲೆ ರಾಜಕಾರಣ ಪ್ರವೇಶಿಸಿದ ಡಾ.ಸಿ.ಎನ್. ಮಂಜುನಾಥ್ ಚೊಚ್ಚಲ ಚುನಾವಣೆಯಲ್ಲಿಯೇ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರನ್ನು 2,69,647 ಮತಗಳಿಂದ ಮಣಿಸಿ ಸಂಸತ್ ಪ್ರವೇಶಿಸಿದ್ದಾರೆ.
ಡಾ.ಸಿ.ಎನ್.ಮಂಜುನಾಥ್ ರವರು ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಹಾಗೂ ಡಿ.ಕೆ.ಸುರೇಶ್ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹೋದರರಾಗಿದ್ದ ಕಾರಣ ಬೆಂಗಳೂರು ಗ್ರಾಮಾಂತರ ಹೈವೋಲ್ಟೇಜ್ ಕ್ಷೇತ್ರವಾಗಿತ್ತು. ಅಲ್ಲದೆ, ಬಿಜೆಪಿ-ಜೆಡಿಎಸ್ ದೋಸ್ತಿ ಪಕ್ಷಗಳು ಹಾಗೂ ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯ ಕಣವಾಗಿತ್ತು.
ಈ ಕಾರಣದಿಂದಾಗಿ ತೀವ್ರ ಹಣಾಹಣಿ ನಿರೀಕ್ಷಿಸಿದ್ದ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ-ಜೆಡಿಎಸ್ ಮಿತ್ರಪಕ್ಷಗಳು ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರ ಮಾಡಿದಂತಾಗಿದೆ. ಈ ಬಾರಿ ಮತದಾರರು ತಿರಸ್ಕರಿಸುವ ಮೂಲಕ ಡಿ.ಕೆ.ಸುರೇಶ್ ಅವರ ನಾಲ್ಕನೇ ಬಾರಿ ಸಂಸತ್ ಪ್ರವೇಶಿಸುವ ಕನಸನ್ನು ಭಗ್ನಗೊಳಿಸಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ನೇರ ಹಣಾಹಣಿಯಲ್ಲಿ ವಿಜೇತರಾದ ಡಾ.ಸಿ.ಎನ್.ಮಂಜುನಾಥ್ ಅವರು 10,79,002 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರಿಗೆ 8,09,355 ಮತಗಳು ಲಭಿಸಿವೆ. ನೋಟಾಗೆ 10,649 ಮತಗಳು ಲಭಿಸಿ 3ನೇ ಸ್ಥಾನದಲ್ಲಿದೆ. 6202 ಮತ ಪಡೆದು ನಾಲ್ಕನೇ ಸ್ಥಾನದಲ್ಲಿರುವ ಉತ್ತಮ ಪ್ರಜಾಕೀಯ ಪಾರ್ಟಿಯ ಕೆ.ಅಭಿಷೇಕ್ ಸೇರಿದಂತೆ 13 ಮಂದಿ ಠೇವಣಿ ಕಳೆದುಕೊಂಡಿದ್ದಾರೆ.
ಕನಕಪುರ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅಧಿಕ ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಶಾಸಕರಿರುವ ಮಾಗಡಿ, ಕುಣಿಗಲ್, ಆನೇಕಲ್ ಸೇರಿ 6 ಕ್ಷೇತ್ರಗಳಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ ರವರು ಭಾರಿ ಮುನ್ನಡೆ ಪಡೆದಿದ್ದಾರೆ.
ಪ್ರಸಕ್ತ ಚುನಾವಣೆಯಲ್ಲಿ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ 6655 ಅಂಚೆ ಮತಗಳು ಸೇರಿ ಒಟ್ಟು 19,20,679 (ಶೇ.68.40ರಷ್ಟು) ಮತಗಳು ಚಲಾವಣೆಯಾಗಿದ್ದವು. ಇದರಲ್ಲಿ 1139 ಕುಲಗೆಟ್ಟ ಮತಗಳಾಗಿವೆ. ಡಾ.ಸಿ.ಎನ್.ಮಂಜುನಾಥ್ ಅವರು ಒಟ್ಟು 10,79,002 ಮತಗಳನ್ನು ಪಡೆದು ವಿಜಯಶಾಲಿಯಾದರೆ, ಡಿ.ಕೆ.ಸುರೇಶ್ ಅವರು 8,09,355 ಮತಗಳನ್ನು ಗಳಿಸಿದ್ದಾರೆ.
ಆರಂಭದಿಂದಲೂ ಮುನ್ನಡೆ:
ಒಟ್ಟು 22 ಸುತ್ತುಗಳಲ್ಲಿ ನಡೆದ ಈ ಮತ ಎಣಿಕೆಯ ಆರಂಭದ ಸುತ್ತಿನಿಂದಲೇ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ ಅವರು 3319 ಮತಗಳ ಮುನ್ನಡೆ ಸಾಧಿಸಿದರು. ಪ್ರತಿ ಹಂತದಲ್ಲೂ ತಮ್ಮ ಮತ ಗಳಿಕೆ ಪ್ರಮಾಣದಲ್ಲಿ ಹೆಚ್ಚಿನ ಅಂತರವನ್ನು ಕಾಯ್ದುಕೊಳ್ಳುತ್ತಾ ಸಾಗಿದರು.
ಮೂರನೇ ಸುತ್ತಿನಲ್ಲಿ 36,687 ಮತಗಳೊಂದಿಗೆ ಮುಂದಿದ್ದ ಮಂಜುನಾಥ್ ಅವರು 8ನೇ ಸುತ್ತಿನ ವೇಳೆಗೆ 56 ಸಾವಿರ ಮತಗಳ ಅಂತರಕ್ಕೆ ಬಂದಿತು. 13ನೇ ಸುತ್ತಿನ ತರುವಾಯ ಒಂದೆರೆಡು ಸುತ್ತಿನಲ್ಲಿ ಡಿ.ಕೆ.ಸುರೇಶ್ ಗೆ ಹೆಚ್ಚಿನ ಮತಗಳು ಲಭಿಸಿದರೂ ಆ ವೇಳೆಗಾಗಲೇ ಮಂಜುನಾಥ್ ರವರ ಮತಗಳ ಅಂತರ ಲಕ್ಷದ ಗಡಿ ದಾಟಿತ್ತು. ಅಂತಿಮ 22ನೇ ಸುತ್ತಿನಲ್ಲಿ 2,69,647 ಮತಗಳ ಅಂತರದಿಂದ ಮುನ್ನಡೆ ಹೊಂದಿ ಗೆಲುವಿನ ನಗೆ ಬೀರಿದರು.
ಇನ್ನು ಕಣದಲ್ಲಿದ್ದ ಉತ್ತಮ ಪ್ರಜಾಕೀಯ ಪಕ್ಷದ ಕೆ.ಅಭಿಷೇಕ್ 6202 ಮತಗಳನ್ನು ಪಡೆದಿದ್ದರೆ, ಸೋಷಿಯಲಿಸ್ಟ್ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್)ನ ಕೆ.ಹೇಮಾವತಿ 1774, ಪಿರಮಿಡ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಎನ್ .ಕೃಷ್ಣಪ್ಪ 1402, ಬಹುಜನ ಭಾರತ್ ಪಾರ್ಟಿ ಅಭ್ಯರ್ಥಿ ಸಿ.ಎನ್ .ಮಂಜುನಾಥ್ 1400, ಭಾರತೀಯ ಪ್ರಜಾಗಳ ಕಲ್ಯಾಣ ಪಕ್ಷದ ಎಲ್ . ಕುಮಾರ್ 1066, ಕರ್ನಾಟಕ ರಾಷ್ಟ್ರ ಸಮಿತಿಯ ಮಹಮ್ಮದ್ ಮುಸದಿಕ್ ಪಾಷ 821, ಕುರನಾಡ ಪಾರ್ಟಿಯ ಎಸ್ .ಸುರೇಶ್ 798, ಕಂಟ್ರಿ ಸಿಜಿಟನ್ ಪಾರ್ಟಿಯ ಜೆ.ವಸಿಷ್ಠ 584, ಯಂಗ್ ಸ್ಟಾರ್ ಎಂಪವರ್ ಮೆಂಟ್ ಪಾರ್ಟಿಯ ಮಹಮ್ಮದ್ ದಸ್ತಗೀರ್ 486, ವಿಡುತಲೈ ಚಿರುತೈಗಲ್ ಕಚ್ಚಿ ಪಕ್ಷದ ಎಚ್.ವಿ.ಚಂದ್ರಶೇಖರ್ 480 ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಎಂ.ಎನ್. ಸುರೇಶ್ 3236, ಜೆ.ಟಿ.ಪ್ರಕಾಶ್ 1472, ಜೆ.ಪಿ.ನರಸಿಂಹಮೂರ್ತಿ 813 ಮತಗಳನ್ನು ಪಡೆದಿದ್ದಾರೆ.
ಕ್ಷೇತ್ರ ವ್ಯಾಪ್ತಿಯಲ್ಲಿ ಈ ಬಾರಿ 6655 ಅಂಚೆ ಮತಗಳು ಚಲಾವಣೆಗೊಂಡಿದ್ದು, ಇದರಲ್ಲಿ ಕಾಂಗ್ರೆಸ್ ಗೆ 1896 , ಬಿಜಿಪಿ 3449 ಹಾಗೂ ನೋಟಾಗೆ 16 ಮತಗಳು ಚಲಾವಣೆಯಾಗಿವೆ.