ಸಂಘದ ಹಾಡು ಹೇಳಿದ ಡಿಕೆಶಿ ಅಪ್ರತಿಮ ಕಲಾವಿದ: ರೇಣು

KannadaprabhaNewsNetwork |  
Published : Aug 26, 2025, 01:02 AM IST
25ಕೆಡಿವಿಜಿ8, 9-ದಾವಣಗೆರೆಯಲ್ಲಿ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗಾರರೊಂದಿಗೆ ಮಾತನಾಡಿದರು. | Kannada Prabha

ಸಾರಾಂಶ

ಸದನದಲ್ಲಿ ಸಂಘ ಪರಿವಾರದ ನಮಸ್ತೇ, ಸದಾ ವತ್ಸಲೇ ಹಾಡನ್ನು ಹಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ದೊಡ್ಡ ಕಲಾವಿದ. ಎಲ್ಲರೂ ಬಣ್ಣ ಹಚ್ಚಿ ನಾಟಕ ಮಾಡಿದರೆ, ಬಣ್ಣವನ್ನೇ ಹಚ್ಚದೇ ನಾಯಕ ಮಾಡುವ ದೊಡ್ಡ, ಅಪ್ರತಿಮ ಕಲಾವಿದ ಡಿ.ಕೆ.ಶಿವಕುಮಾರ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಲೇವಡಿ ಮಾಡಿದ್ದಾರೆ.

- ಸಂಘ ಪರಿವಾರ ಟೀಕಿಸಿದ ಕಾಂಗ್ರೆಸ್ಸಿಗರನ್ನೇ ಸದನದಲ್ಲೇ ತರಾಟೆಗೆ ತೆಗೆದುಕೊಳ್ಳಲು ಉಪ ಮುಖ್ಯಮಂತ್ರಿಗೆ ಸವಾಲು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸದನದಲ್ಲಿ ಸಂಘ ಪರಿವಾರದ ನಮಸ್ತೇ, ಸದಾ ವತ್ಸಲೇ ಹಾಡನ್ನು ಹಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ದೊಡ್ಡ ಕಲಾವಿದ. ಎಲ್ಲರೂ ಬಣ್ಣ ಹಚ್ಚಿ ನಾಟಕ ಮಾಡಿದರೆ, ಬಣ್ಣವನ್ನೇ ಹಚ್ಚದೇ ನಾಯಕ ಮಾಡುವ ದೊಡ್ಡ, ಅಪ್ರತಿಮ ಕಲಾವಿದ ಡಿ.ಕೆ.ಶಿವಕುಮಾರ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಲೇವಡಿ ಮಾಡಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಂಭಮೇಳದಲ್ಲಿ ಸ್ನಾನ ಮಾಡಿದರೆ ಬಡತನ ಹೋಗುತ್ತದಾ ಅಂದಾಗ, ಅದರ ವಿರುದ್ಧ ಕುಂಭಮೇಳಕ್ಕೆ ಹೋದವರು ಡಿ.ಕೆ.ಶಿವಕುಮಾರ. ಈಗ ಎಲ್ಲ ಕಡೆ ಅಜ್ಜಯ್ಯನ್ನೇ ಮುಂದಿಟ್ಟುಕೊಂಡು, ಪೂಜೆ ಮಾಡುತ್ತಿರುವ ಡಿ.ಕೆ.ಶಿವಕುಮಾರ ಅಪ್ರತಿಮ ಕಲಾವಿದ. ಮೊನ್ನೆ ಸದನದಲ್ಲಿ ಸಂಘ ಪರಿವಾರದ ಸದಾ ವತ್ಸಲೇ ಅಂತಾ ಹಾಡನ್ನು ಚೆನ್ನಾಗಿ ಹಾಡಿದ್ದಾರೆ. ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಓಲೈಸಿದ್ದರಿಂದಲೇ ಹಿಂದೂಗಳು ದೂರವಾಗಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ಸಿನಿಂದ ದೂರವಾಗಿರುವ ಹಿಂದೂಗಳನ್ನು ಓಲೈಸಲು ಸಂಘ ಪರಿವಾರದ ಹಾಡು ಹಾಡೋದೇನೂ ಬೇಡ. ನಿಮ್ಮ ನಾಟಕೀಯ ವರ್ತನೆಯೂ ಬೇಡ. ಹಿಂದುತ್ವ, ಭಾರತ ಮಾತೆಗೆ ಗೌರವ ಸಿಕ್ಕಿದ್ದರೆ ಅದು ಸಂಘ ಪರಿವಾರದಿಂದ. ಆದರೆ, ಇದೇ ಕಾಂಗ್ರೆಸ್ ಸರ್ಕಾರದ ಸಚಿವರು ಸಂಘ ಪರಿವಾರದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಸಂಘ ಪರಿವಾರವನ್ನು ಟೀಕಿಸಿದವರಿಗೆ ಕೆಪಿಸಿಸಿ ಅಧ್ಯಕ್ಷರಾಗಿ ಸದನದಲ್ಲೇ ತರಾಟೆಗೆ ತೆಗೆದುಕೊಳ್ಳಲಿ ನೋಡೋಣ ಎಂದು ಅವರು ಸವಾಲು ಹಾಕಿದರು.

ಈ ಸಂದರ್ಭ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ, ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಚಂದ್ರಶೇಖರ ಪೂಜಾರ, ಧನಂಜಯ ಕಡ್ಲೇಬಾಳು, ಆರ್.ಎಲ್.ಶಿವಪ್ರಕಾಶ, ರಾಜು ವೀರಣ್ಣ, ಸಂತೋಷ ಪೈಲ್ವಾನ, ಪಂಜು ಪೈಲ್ವಾನ, ಪ್ರವೀಣ ಜಾಧವ್ ಇತರರು ಇದ್ದರು.

- - -

(ಬಾಕ್ಸ್‌) * ದಸರಾ ಉದ್ಘಾಟಿಸುವ ಮುನ್ನ ಬಾನು ಮುಷ್ತಾಕ್‌ ನಾಡ ದೇವತೆಗೆ ಪೂಜಿಸಲಿ

ದಾವಣಗೆರೆ: ಈ ಬಾರಿಯ ಬುಕರ್ ಪ್ರಶಸ್ತಿಗೆ ಪಾತ್ರರಾದ ಬಾನು ಮುಷ್ತಾಕ್‌ ಅವರಿಂದ ಮೈಸೂರು ದಸರಾ ಉದ್ಘಾಟಿಸಲು ಸರ್ಕಾರ ತೀರ್ಮಾನಿಸಿದೆ. ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಲೇಖಕಿ ಬಾನು ಮುಷ್ತಾಕ್ ನಾಡ ದೇವತೆಗೆ ಪೂಜೆ ಸಲ್ಲಿಸಲಿ. ದಸರಾ ಆಚರಣೆಗಳಿಗೆ ಅದರದ್ದೇ ಆದ ಧಾರ್ಮಿಕ, ವಿಧಿವಿಧಾನಗಳೂ ಇವೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಹಿತ್ಯ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಬಾನು ಮುಷ್ತಾಕ್ ಬುಕರ್‌ ಸಾಧನೆ ಮಾಡಿದ್ದಾರೆ. ಮೈಸೂರು ದಸರಾಗೆ ಅದರದ್ದೇ ಆದಂತಹ ಧಾರ್ಮಿಕ ಹಿನ್ನೆಲೆ, ವಿಧಿವಿಧಾನಗಳಿವೆ. ಅದೆಲ್ಲಾ ಬಾನು ಮುಷ್ತಾಕರಿಗೂ ಗೊತ್ತಿದೆ. ಪುಸ್ತಕ ಓದಿದ್ದಾರೆ, ಪುಸ್ತಕ ಬರೆದಿದ್ದಾರೆ. ಅಂತಹವರ ಬರವಣಿಗೆ ಬಗ್ಗೆ ನಮ್ಮ ತಕರಾರು ಇಲ್ಲ. ಆದರೆ, ಮೈಸೂರು ದಸರಾ ಉದ್ಘಾಟಿಸುವುದಕ್ಕೆ ಮೊದಲು ನಾಡ ದೇವತೆಯ ಪೂಜೆ ಮಾಡಬೇಕು ಎಂದರು.

- - -

-25ಕೆಡಿವಿಜಿ8, 9:

ದಾವಣಗೆರೆಯಲ್ಲಿ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗಾರರೊಂದಿಗೆ ಮಾತನಾಡಿದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ