ಪಠ್ಯದಲ್ಲಿನ ಬಸವಣ್ಣನ ವಿವರ ಬದಲಿಸಬೇಡಿ: ತೋಂಟದ ಸಿದ್ದರಾಮ ಶ್ರೀ ಆಗ್ರಹ

KannadaprabhaNewsNetwork | Published : Jul 6, 2024 12:57 AM

ಸಾರಾಂಶ

ಪಠ್ಯವನ್ನು ಯಾವುದೇ ಕಾರಣಕ್ಕೂ ಬದಲಿಸದಂತೆ ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಶ್ರೀಗಳು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

9ನೇ ತರಗತಿಯ ಸಮಾಜವಿಜ್ಞಾನ ಪಠ್ಯಪುಸ್ತಕದಲ್ಲಿ "ವಿಶ್ವಗುರು ಬಸವಣ್ಣನವರು; ಸಾಂಸ್ಕೃತಿಕ ನಾಯಕ " ಎಂಬ ಶೀರ್ಷಿಕೆಯಡಿ ಇರುವ ಪಠ್ಯವನ್ನು ಯಾವುದೇ ಕಾರಣಕ್ಕೂ ಬದಲಿಸದಂತೆ ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಶ್ರೀಗಳು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಬಸವಣ್ಣನವರ ಕುರಿತು ಬರೆಯಲಾದ ಪರಿಚಯದ ವಿಷಯ ಸೂಕ್ತವಾಗಿದೆ. ಪಠ್ಯದಲ್ಲಿ ವೀರಶೈವ ಪದ ಕೈಬಿಟ್ಟಿರುವುದು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯವರು ತಕರಾರು ತೆಗೆದಿದ್ದಾರೆ. ಇದಕ್ಕೆ ಅರ್ಥವಿಲ್ಲ ಎಂದಿದ್ದಾರೆ.

ಬಸವಣ್ಣನವರು ಮಹಾಮಾನವತಾವಾದಿಗಳು; ಶ್ರೇಷ್ಠ ಸಮಾಜ ಸುಧಾರಕರು. ಸರ್ವಸಮಾನತೆ-ಕಾಯಕ- ದಾಸೋಹದಂತಹ ಮೌಲ್ಯಗಳನ್ನು ಕೊಡುಗೆಯಾಗಿ ನೀಡಿದವರು. ಇಂಥ ಮಹಾನ್ ಪುರುಷರನ್ನು ವರ್ಣ ಮತ್ತು ವರ್ಗಭೇದವನ್ನು ಪ್ರತಿಪಾದಿಸುವ ಶೈವ-ವೀರಶೈವಕ್ಕೆ ಕಟ್ಟಿಹಾಕುವುದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.

ಬಸವಾದಿ ಶರಣರ ವಚನಗಳಲ್ಲಿ ಲಿಂಗಾಯತದ ಬದಲು ವೀರಶೈವ ಪದ ನಂತರದಲ್ಲಿ ಸೇರ್ಪಡೆಯಾಗಿರುವುದು ಐತಿಹಾಸಿಕ ಸತ್ಯ. ವೀರಶೈವ ಪ್ರತಿಕಾರರು ವಚನಗಳಲ್ಲಿ ಈ ವೀರಶೈವ ಪದ ಹಾಗೂ ವೀರಶೈವ ಪರ ಸಂಸ್ಕೃತ ಶ್ಲೋಕಗಳನ್ನು ಸೇರ್ಪಡೆಗೊಳಿಸಿರುವುದು ವಚನಗಳ ಅಧ್ಯಯನದಿಂದ ಸ್ಪಷ್ಟವಾಗಿದೆ. ಬಸವಣ್ಣನವರು ಐತಿಹಾಸಿಕ ವ್ಯಕ್ತಿ. ಅವರನ್ನು ಧರ್ಮಗುರು ಎಂದು ಒಪ್ಪದ, ಬಸವಣ್ಣನವರನ್ನು ತಮ್ಮ ಶಿಷ್ಯ- ಭಕ್ತ ಎಂದು ಹೇಳಿಕೊಳ್ಳುವ ವ್ಯಕ್ತಿಗಳ ಅಭಿಪ್ರಾಯಕ್ಕೆ ಸರಕಾರ ಮನ್ನಣೆ ನೀಡಬಾರದು ಎಂದು ಆಗ್ರಹಿಸಿದ್ದಾರೆ.

ಬಸವಣ್ಣನವರು ಅರಿವನ್ನೇ ಗುರುವಾಗಿಸಿಕೊಂಡವರು. ಹಾಗೆಯೇ ‘ಅರಿವೇ ಗುರು’ ಎಂದು ಪ್ರತಿಪಾದಿಸಿದವರು. ಐತಿಹಾಸಿಕವಲ್ಲದ ಪೌರಾಣಿಕ ವ್ಯಕ್ತಿಗಳನ್ನು ಬಸವಣ್ಣನವರಿಗೆ ಗುರುವಾಗಿಸುವ ತಂತ್ರಗಾರಿಕೆ ಇದೆ. ಕರ್ನಾಟಕ ಸರಕಾರ ಇಂಥ ತಂತ್ರಗಾರಿಕೆಗೆ ಮಣಿಯಬೇಕಾಗಿಲ್ಲ ಎಂದಿದ್ದಾರೆ.

ತಾವು ಬಸವಾದಿ ಶರಣರ ವಚನಗಳನ್ನು ಓದಿ ಅರ್ಥೈಸಿಕೊಂಡವರು. ವಿಶ್ವಗುರು ಬಸವಣ್ಣನವರನ್ನು ‘ಸಾಂಸ್ಕೃತಿಕ ನಾಯಕ’ ಎಂದು ಘೋಷಣೆ ಮಾಡುವ ಮೂಲಕ ನಾಡವರ ಮೆಚ್ಚುಗೆಗೆ ಪಾತ್ರರಾದವರು. ಅತ್ಯಂತ ಯೋಗ್ಯರೀತಿಯಲ್ಲಿ ಪರಿಷ್ಕೃತವಾಗಿರುವ 9ನೇ ತರಗತಿಯ ಸಮಾಜವಿಜ್ಞಾನ ಪಠ್ಯಪುಸ್ತಕದಲ್ಲಿ ‘ವಿಶ್ವಗುರು ಬಸವಣ್ಣನವರು ಸಾಂಸ್ಕೃತಿಕ ನಾಯಕ’ ಶೀರ್ಷಿಕೆಯ ಪಾಠದಲ್ಲಿ ಯಾವುದೇ ದೋಷವಿಲ್ಲ. ಆದಕಾರಣ ಯಾವ ಕಾಲಕ್ಕೂ ಅದನ್ನು ಬದಲಿಸಬಾರದು. ಕೆಲವು ಸಂಪ್ರದಾಯವಾದಿಗಳ ಗೊಡ್ಡು ಬೆದರಿಕೆಗೆ ಮಣಿಯದೇ ಪಠ್ಯವಿಷಯವನ್ನು ಯಥಾರೀತಿಯಲ್ಲಿ ಉಳಿಸಬೇಕೆಂದು ಡಾ.ಸಿದ್ದರಾಮ ಶ್ರೀಗಳು ಪತ್ರದಲ್ಲಿ ಆಗ್ರಹಿಸಿದ್ದಾರೆ.

Share this article