ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಪಿಇಎಸ್ ತಾಂತ್ರಿಕ ಕಾಲೇಜಿನ ಪ್ಲೇಸ್‌ಮೆಂಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಲೈಂಗಿಕ ದೌರ್ಜನ್ಯ, ಕಿರುಕುಳದಿಂದ ಮಹಿಳೆಯರ ರಕ್ಷಣೆ ಕುರಿತು ಸರ್ಕಾರದ ಅಧಿಕಾರಿಗಳು, ಸಿಬ್ಬಂದಿ, ಆಂತರಿಕ ದೂರು ನಿವಾರಣಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರಿಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಲೈಂಗಿಕ ದೌರ್ಜನ್ಯಕ್ಕೆ ಒಳಗಾದಾಗ ದೂರು ನೀಡುವುದಕ್ಕೆ ಹಿಂಜರಿಯಬಾರದು. ಕಾನೂನಿನಡಿ ರಕ್ಷಣೆ ಪಡೆಯುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ಅರಿತುಕೊಂಡು ದೌರ್ಜನ್ಯದ ವಿರುದ್ಧ ಸೆಟೆದು ನಿಲ್ಲಬೇಕು ಎಂದು ಸಲಹೆ ನೀಡಿದರು.ಮರ್ಯಾದೆ ಅಂಜಿ ಕೆಲವು ಮಹಿಳೆಯರು ಲೈಂಗಿಕ ದೌರ್ಜನ್ಯ, ಕಿರುಕುಳಗಳನ್ನು ಸಹಿಸಿಕೊಂಡಿರುತ್ತಾರೆ. ಮತ್ತೆ ಹಲವರಿಗೆ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಗಳ ಬಗ್ಗೆ ಅರಿವಿನ ಕೊರತೆ ಇರುತ್ತದೆ. ಮಹಿಳೆಯರು ಕಾಯಿದೆಯ ಮಹತ್ವವನ್ನು ಅರಿತು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕಾಯ್ದೆ ರೂಪಿಸಲಾಗಿದೆ. ಎಲ್ಲವನ್ನೂ ಕಾಯಿದೆಯಿಂದಲೇ ಸರಿಪಡಿಸಲಾಗುವುದಿಲ್ಲ. ಕಾಯ್ದೆಗಿಂತ ಸಂಸ್ಕಾರವೂ ಮುಖ್ಯ. ಪ್ರತಿಯೊಬ್ಬ ಹೆಣ್ಣನ್ನು ಗೌರವದಿಂದ ನೋಡುವ ಮನೋಭಾವ ಬೆಳೆಸಿಕೊಂಡರೆ ಕಾಯ್ದೆಗಳ ಅಗತ್ಯವೇ ಇರುವುದಿಲ್ಲ ಎಂದರು.
ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವು ಕೇವಲ ಸರ್ಕಾರಿ ಕಚೇರಿಗಳಲ್ಲದೆ ಖಾಸಗಿಯಾಗಿ ಕೆಲಸ ಮಾಡುವ ಸ್ಥಳದಲ್ಲಿಯೂ ಕಂಡುಬರುತ್ತವೆ. ಹೆಣ್ಣಾದವಳು ಕೆಲವು ಕೆಲಸಗಳಿಗೆ ಮಾತ್ರ ಸೀಮಿತ. ಹೆಣ್ಣು ಹೊರ ಹೋಗುವಂತಿಲ್ಲ, ಆ ಕೆಲಸ ಮಾಡುವಂತಿಲ್ಲ, ಗಂಡು ಎಲ್ಲಿ ಬೇಕಾದರೂ ಹೋಗಬಹುದು ಬರಬಹುದು ಎಂದು ನಮ್ಮ ಮನೆಗಳಲ್ಲಿರುವ ಈ ಭಾವನೆಯಿಂದಲೇ ಕೆಲವು ದೌರ್ಜನ್ಯಗಳು ಶುರುವಾಗುತ್ತವೆ. ಈ ಹಿಂದೆ ಮಹಿಳೆಯರ ರಕ್ಷಣೆಗಾಗಿ ಯಾವುದೇ ಕಾಯ್ದೆಗಳು ರಚನೆಯಾಗಿರಲಿಲ್ಲ. ಆನಂತರದಲ್ಲಿ ಕಾಯ್ದೆಗಳು ರೂಪಿತಗೊಂಡಿವೆ. ಮಹಿಳೆಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.