-ವೈದ್ಯರಿಗೆ ಸನ್ಮಾನ
-ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ ಪ್ರಯುಕ್ತ ರೋಟರಿಯಿಂದ ವೈದ್ಯರಿಗೆ ಗೌರವ ಸಮರ್ಪಣೆಕನ್ನಡಪ್ರಭ ವಾರ್ತೆ ಚನ್ನಪಟ್ಟಣಸಮಾಜಕ್ಕೆ ವೈದ್ಯರ ಸೇವೆ ಅನನ್ಯವಾಗಿದ್ದು, ದೇಹವೆಂಬ ಗುಡಿಗೆ ವೈದ್ಯರೇ ದೇವರು ಎಂದು 2024-25ನೇ ಸಾಲಿನ ರೋಟರಿ ಟಾಯ್ಸ್ ಸಿಟಿ ಕ್ಲಬ್ ಅಧ್ಯಕ್ಷ ರಾಜೇಶ್ ಹೇಳಿದರು.
ವೈದ್ಯರ ದಿನಾಚರಣೆ ಅಂಗವಾಗಿ ರೋಟರಿ ವತಿಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಳಲಾಗಿದ್ದ ವೈದ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವೈದ್ಯೋ ನಾರಾಯಣ ಹರಿ’ ಎಂಬ ವಾಕ್ಯ ಇಂದಿಗೂ ಪ್ರಸ್ತುತವಾಗಿದ್ದು ದೇವರ ನಂತರ ಜನರು ವೈದ್ಯರನ್ನು ತಮ್ಮ ಕಾಯಿಲೆ ಗುಣಪಡಿಸುವ ದೇವರಂತೆಯೇ ನೋಡುತ್ತಾರೆ. ವೈದ್ಯರ ಸಮರ್ಪಣಾ ಸೇವೆ ಬೆಲೆ ಕಟ್ಟಲಾಗದು ಎಂದು ಹೇಳಿದರು.ಕ್ಲಬ್ ಸಲಹೆಗಾರ ಬಿ.ಎಂ.ನಾಗೇಶ್ ಮಾತನಾಡಿ, ಇಂದು ಜಗತ್ತಿನಲ್ಲಿ ನಾವೆಲ್ಲರೂ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಂಡು ನೆಮ್ಮದಿಯ ಬದುಕನ್ನು ನಡೆಸುತ್ತಿದ್ದೇವೆ. ದೇಶ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ ಎಂದರೆ ಅದಕ್ಕೆ ವೈದ್ಯರ ಕೊಡುಗೆ ಅಪಾರ. ಹಾಗಾಗಿ ಪ್ರತಿಯೊಬ್ಬರು ವೈದ್ಯರನ್ನು ಹಾಗೂ ಅವರ ಸೇವೆಯನ್ನು ಸ್ಮರಿಸಬೇಕು ಎಂದು ತಿಳಿಸಿದರು.
ರೋಟರಿ ಕ್ಲಬ್ ಕಾರ್ಯದರ್ಶಿ ಯೋಗೇಶ್ ಚಕ್ಕೆರೆ ಮಾತನಾಡಿ, ಔಷಧಗಳು ರೋಗಗಳನ್ನು ಗುಣಪಡಿಸಿದರೆ, ವೈದ್ಯ ರೋಗಿಯನ್ನು ಗುಣಪಡಿಸುತ್ತಾನೆ ಎಂಬ ಮಾತಿದೆ. ವೈದ್ಯರು ಎಂದರೆ ಎರಡನೇ ದೇವರೆನ್ನುತ್ತಾರೆ. ಅದು ಸತ್ಯವೂ ಹೌದು. ಕೋವಿಡ್ ಸಂದರ್ಭದಲ್ಲಿ ವೈದ್ಯರು ತಮ್ಮ ಜೀವವನ್ನು ಪಣಕ್ಕಿಟ್ಟು ಸಾರ್ವಜನಿಕರಿಗೆ ಉತ್ತಮವಾದ ಸೇವೆ ನೀಡಿದ್ದಾರೆ, ಕೋವಿಡ್‌ಗೆ ತುತ್ತಾದವರ ಪ್ರಾಣ ಉಳಿಸಿದ್ದಾರೆ, ವೈದ್ಯರ ಈ ಸೇವೆ ಮತ್ತು ಸಮರ್ಪಣೆಯನ್ನು ಗೌರವಿಸುವ ಉದ್ದೇಶದಿಂದ ನಮ್ಮ ರೋಟರಿ ವತಿಯಿಂದ ವೈದ್ಯರನ್ನು ಗೌರವಿಸಿ ಸನ್ಮಾನಿಸಲಾಗುತ್ತಿದೆ ಎಂದರು.36 ವರ್ಷಗಳ ಕಾಲ ವೈದ್ಯರಾಗಿ ಸುಮಾರು 30 ಸಾವಿರಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿರುವ ಪಟ್ಟಣದ ಬಾಲು ಆಸ್ಪತ್ರೆಯ ವೈದ್ಯೆ ಡಾ.ಶೈಲಜಾ ವೆಂಕಟಸುಬ್ಬಯ್ಯ ಚಟ್ಟಿ ಹಾಗೂ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಜು, ಸಮಾಜಮುಖಿ ವೈದ್ಯರಾದ ಡಾ.ಮಹೇಂದ್ರ ಕುಮಾರ್, ಡಾ.ರಾಜಕುಮಾರ್ ಅವರನ್ನು ವೈದ್ಯರ ದಿನಾಚರಣೆ ಪ್ರಯುಕ್ತ ಗೌರವಿಸಿ ಸನ್ಮಾನಿಸಲಾಯಿತು.
ಸಾರ್ವಜನಿಕ ಆಸ್ಪತ್ರೆಯ ಹಿರಿಯ ಪ್ರಾಮಸಿಸ್ಟ್ ವೇದಮೂರ್ತಿ, ಲಯನ್ ವೆಂಕಟಸುಬ್ಬಯ್ಯ ಚಟ್ಟಿ, ರೋಟರಿ ಟಾಯ್ಸ್ ಸಿಟಿ ಕ್ಲಬ್ ನಿಕಟಪೂರ್ವ ಅಧ್ಯಕ್ಷರಾದ ಬೈ ಶ್ರೀನಿವಾಸ್, ಶೇಖರ್ ಲಾಡ್, ಪದಾಧಿಕಾರಿಗಳಾದ ನಿತಿನ್, ಮೋಹನ್, ರಾಜೇಶ್. ಕೆ, ಅಪ್ಪಾಜಿಗೌಡ, ಶ್ರೀನಿವಾಸ್, ಸುಕೃತ್, ರಮೇಶ್, ಜಯರಾಮು, ಧರಣೇಶ್, ಮಹಿಳಾ ಸದಸ್ಯರಾದ ಮಾನಸ ಶೇಖರ್ ಲಾಡ್, ಪವಿತ್ರಾ ರಾಜೇಶ್ ಇತರರಿದ್ದರು.