ಭೂ ವ್ಯಾಜ್ಯ ನ್ಯಾಯಾಲಯದಲ್ಲಿ ಬಾಕಿ ಇದ್ದಾಗ್ಯೂ ದಲ್ಲಾಳಿಗಳ ಮೂಲಕ ಕೆಲ ಪ್ರಭಾವಿಗಳು ಸ್ವಾಧೀನದಲ್ಲಿರುವ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ದೊಡ್ಡಬಳ್ಳಾಪುರ : ಭೂ ವ್ಯಾಜ್ಯ ನ್ಯಾಯಾಲಯದಲ್ಲಿ ಬಾಕಿ ಇದ್ದಾಗ್ಯೂ ದಲ್ಲಾಳಿಗಳ ಮೂಲಕ ಕೆಲ ಪ್ರಭಾವಿಗಳು ಸ್ವಾಧೀನದಲ್ಲಿರುವ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ತಾಲೂಕಿನ ತೂಬಗೆರೆ ಹೋಬಳಿ ಹೆಗ್ಗಡಿಹಳ್ಳಿ ಗ್ರಾಪಂ ವ್ಯಾಪ್ತಿಯ ಕಣಿವೆಪುರ ಬಳಿ ಜಮೀನಿಗೆ ಸಂಬಂಧಿಸಿದಂತೆ ದೂರು ಕೇಳಿ ಬಂದಿದ್ದು, 1994ರಲ್ಲಿ ಅಂದಿನ ಶಾಸಕ ಜಾಲಪ್ಪ ಅವರ ಅಧ್ಯಕ್ಷತೆಯ ಭೂ ಮಂಜೂರಾತಿ ಸಮಿತಿ ಆದೇಶದಂತೆ ಕೆಲ ನಿಬಂಧನೆಗಳಿಗೆ ಒಳಪಟ್ಟು ಕೃಷ್ಣಪ್ಪ ಎಂಬುವವರಿಗೆ ಜಮೀನು ಹಕ್ಕುಪತ್ರ ನೀಡಲಾಗಿದೆ. ಅದರಂತೆ ಅಂದಿನಿಂದಲೂ ಸದರಿ ಫಲಾನುಭವಿಗಳೇ ಕಂದಾಯ ಕಟ್ಟುತ್ತಿದ್ದು, ವ್ಯವಸಾಯ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಸದರಿ ಜಮೀನಿಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಮೂಲದ ಕೆಲ ಪ್ರಭಾವಿಗಳು ಉಪ ವಿಭಾಗಾಧಿಕಾರಿ ಕಚೇರಿ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಿಂದ ನಕಲಿ ದಾಖಲೆ ಸೃಷ್ಟಿಸಿಕೊಂಡು ಅಕ್ರಮವಾಗಿ ಆರ್‌ಟಿಸಿ ಬಡಾವಣೆಗೆ ಆದೇಶ ಮಾಡಿಸುವ ಮೂಲಕ ಅಕ್ರಮ ಹಾಗೂ ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ಜಮೀನು ಸ್ವಾಧೀನದಲ್ಲಿರುವ ಗಾಯತ್ರಮ್ಮ ಆರೋಪಿಸಿದ್ದಾರೆ.
ತಮ್ಮ ಪತಿಯ ಆರೋಗ್ಯವೂ ಹದಗೆಟ್ಟಿದ್ದು, ಪೊಲೀಸ್ ಠಾಣೆ, ನ್ಯಾಯಾಲಯಕ್ಕೆ ಓಡಾಡುವ ಪರಿಸ್ಥಿತಿ ಎದುರಾಗಿದೆ. ಕೆಲ ಸ್ಥಳೀಯ ಪ್ರಭಾವಿಗಳೂ ಉಳ್ಳವರ ಪರ ನಿಂತಿದ್ದು ಸಂಕಷ್ಟ ಹೆಚ್ಚಿದೆ. ನ್ಯಾಯಕ್ಕಾಗಿ ಹಂಬಲಿಸುತ್ತಿದ್ದೇವೆ. ತಾವು ಯಾವುದೇ ಕಾರಣಕ್ಕೂ ಜಾಗ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಇದು ನಮ್ಮ ಪೂರ್ವಿಕರಿಂದ ಬಂದ ಜಾಗ. ನಮಗೆ ನ್ಯಾಯ ದೊರೆಯಬೇಕು ಎಂದು ಒತ್ತಾಯಿಸಿದರು.
ಜಮೀನಿಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದ್ದು, ವಿಚಾರಣೆ ಹಂತದಲ್ಲಿದೆ. ಅದನ್ನೂ ಲೆಕ್ಕಿಸದೆ ಕೆಲ ದಲ್ಲಾಳಿಗಳು ಪ್ರಭಾವಿಗಳ ಒತ್ತಡದಿಂದ ಒಕ್ಕಲೆಬ್ಬಿಸುವ ಕುತಂತ್ರ ನಡೆಸುತ್ತಿದ್ದಾರೆ. ಭೂಗಳ್ಳರಿಂದ ನಮ್ಮ ಕುಟುಂಬಕ್ಕೆ ರಕ್ಷಣೆ ಅಗತ್ಯವಾಗಿದೆ ಎಂದು ಆಗ್ರಹಿಸಿದರು.