ಬಿಜೆಪಿಯಲ್ಲಿ ವಾಷಿಂಗ್ ಮಷಿನ್ ಇದೆಯೇ?: ಪ್ರಿಯಾಂಕ್‌ ಖರ್ಗೆ

KannadaprabhaNewsNetwork |  
Published : Jan 27, 2024, 01:19 AM IST
ಪ್ರಿಯಾಂಕ್‌ ಖರ್ಗೆ | Kannada Prabha

ಸಾರಾಂಶ

ಜಗದೀಶ್‌ ಶೆಟ್ಟರ್ ಸೇರ್ಪಡೆ ಹಿಂದೆ ಐಟಿ, ಇಡಿ ಇರಬಹುದು: ಸಚಿವ ಶಂಕೆ. ಕಾಂಗ್ರೆಸ್ ತಮಗೆ ಸೂಕ್ತ ಸ್ಥಾನಮಾನ, ಗೌರವ ನೀಡಿದೆ ಎಂದಿದ್ದ ಮಾಜಿ ಸಚಿವ.

ಕನ್ನಡಪ್ರಭ ವಾರ್ತೆ ಕಲಬುರಗಿ

ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್.ಅಶೋಕ ನೇತೃತ್ವದಲ್ಲಿ ಕೇಂದ್ರ ನಾಯಕರಿಗೆ ಭರವಸೆ ಇಲ್ಲ. ಶೆಟ್ಟರ್, ಸವದಿಯವರನ್ನ ಬಿಜೆಪಿಯವರು ಗಾಳ ಹಾಕ್ತಿದ್ದಾರೆಂದ್ರೆ‌ ಇದೇ ತಿಳಿಯಬೇಕು ತಾನೆ? ರಾಜ್ಯ ನಾಯಕತ್ವದ ಮೇಲೆ ಬಿಜೆಪಿ ಕೇಂದ್ರಕ್ಕೆ ಭರವಸೆಯಿಲ್ಲ. ರಾಜ್ಯ ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಅದಕ್ಕಾಗಿ ಯಾರೆ ಬಂದ್ರು ಬಿಜೆಪಿಗೆ ತಗೋತಿದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ಗಣರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷಕ್ಕೆ 135 ವರ್ಷದ ಇತಿಹಾಸವಿದೆ. ಅವರು ಬರೋದ್ರಿಂದ ಪ್ಲಸ್, ಮೈನಸ್ ಏನು ಇಲ್ಲ. ಹಿರಿಯ ನಾಯಕರು ಅಂತ ಸೇರಿಸಿಕೊಂಡಿದ್ದೆವು. ಆದ್ರೆ ಅವರು ಸೋತ್ರು, ಆದ್ರು ನಾವು ಗೌರವ ಕೊಟ್ಟಿದ್ದೆವು, ಶೆಟ್ಟರ್ ಸೇರ್ಪಡೆ ಹಿಂದೆ ಐಟಿ, ಇಡಿ ಇರಬಹುದು ಎಂದು ಖರ್ಗೆ ಶಂಕಿಸಿದರು.

ಕಾಂಗ್ರೆಸ್ ತಮಗೆ ಸೂಕ್ತ ಸ್ಥಾನಮಾನ ಮತ್ತು ಗೌರವ ನೀಡಿದೆ. ಆದರೂ, ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ತಾವು ವಾಪಸ್ ಬಿಜೆಪಿ ಸೇರ್ಪಡೆಗೊಂಡಿರುವುದಾಗಿ ಶೆಟ್ಟರ್ ಹೇಳಿದ್ದಾರೆ. ಇದು ಕರ್ನಾಟಕದಲ್ಲಿ ಮೋದಿ ಅಲೆ ಇಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂದರು.

ಶೆಟ್ಟರ್ ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದಂತೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲಕ್ಷ್ಮಣ ಸವದಿಯವರನ್ನು ಕರೆಯಿಸಿಕೊಂಡು ಚರ್ಚಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್, ಅದೊಂದು ತೀರಾ ಸೌಹಾರ್ದ ಭೇಟಿಯಷ್ಟೆ. ಪಕ್ಷದ ರಾಜ್ಯಾಧ್ಯಕ್ಷರು ಯಾರನ್ನು ಯಾವಾಗ ಬೇಕಾದರೂ ಕರೆಯಿಸಿಕೊಂಡು ಮಾತನಾಡುತ್ತಾರೆ. ಮೂರು ದಿನಗಳ ಹಿಂದೆ ತಮ್ಮನ್ನೂ ಕರೆಸಿದ್ದರು ಎಂದರು.

ನನ್ನ ಚೌಕಟ್ಟು ಮೀರಿ ಮಾತನಾಡುವುದಿಲ್ಲ. ಹಾಗೆ ಚೌಕಟ್ಟು ಮೀರಿ ಮಾತನಾಡುವ ವ್ಯಕ್ತಿಯೂ ತಾವಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.

ಲಕ್ಷ್ಮಣ ಸವದಿ ಮಿನಿಸ್ಟರ್ ಆಗುತ್ತಾರೋ ಇಲ್ಲವೋ ಎಂಬುದನ್ನು ಖಾತ್ರಿಪಡಿಸಲು ನಾನು ಈ ರಾಜ್ಯದ ಮುಖ್ಯಮಂತ್ರಿಯೂ ಅಲ್ಲ. ಕೆಪಿಸಿಸಿ ಅಧ್ಯಕ್ಷನೂ ಅಲ್ಲ. ಹೀಗೆಲ್ಲಾ ನನ್ನ ಚೌಕಟ್ಟು ಮೀರಿ ಪ್ರಶ್ನಿಸಿದರೆ ಹೇಗೆ ಎಂದು ಪ್ರಶ್ನಿಸಿದರು.

ಬಿಜೆಪಿ ಹೊರತುಪಡಿಸಿ ಅನ್ಯ ಪಕ್ಷಗಳ ನಾಯಕರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ, ಹೆದರಿಸಿ, ಬೆದರಿಸುವ ತಂತ್ರವನ್ನು ಕೇಂದ್ರ ಬಿಜೆಪಿ ವರಿಷ್ಠರು ಮಾಡುತ್ತಿದ್ದಾರೆ. ಒಂದೊಮ್ಮೆ ಅವರ ತಂತ್ರಕ್ಕೆ ಹೆದರಿ ಬಿಜೆಪಿ ಸೇರ್ಪಡೆಗೊಂಡ ಕೂಡಲೇ ಹಿಂದಿನ ಎಲ್ಲ ಭ್ರಷ್ಟಾಚಾರ ಆರೋಪಗಳಿಂದ ಮುಕ್ತಿ ದೊರೆಯುತ್ತದೆ ಎನ್ನುವುದಾದರೆ ಬಿಜೆಪಿಯಲ್ಲಿ ಭ್ರಷ್ಟಾಚಾರಿಗಳನ್ನು ವಾಷಿಂಗ್ ಮಷಿನ್ ಒಳಗೆ ಹಾಕಿ ಕ್ಲೀನ್ ಮಾಡಲಾಗುತ್ತದೆಯೇ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಚ್ಚರಿ ವ್ಯಕ್ತಪಡಿಸಿದರು.

ಬಿಜೆಪಿಗೆ ಸ್ಟಾರ್ ಪ್ರಚಾರಕರು ಯಾರು? ಐಟಿ, ಇಡಿ, ಸಿಬಿಐ ಇದೇ ಸಂಸ್ಥೆಗಳೇ ಅವರ ಸ್ಟಾರ್ ಪ್ರಚಾರಕರು, ಇದನ್ನ ತೆಗೆದುಬಿಡಿ ಇವರೆಲ್ಲಾ ಸೋತು ಬಿಡುತ್ತಾರೆಂದರು.

PREV

Recommended Stories

ಬೆಂಗಳೂರಲ್ಲಿ ಭರ್ಜರಿ ಮಳೆಗೆ ವಾಹನ ಸವಾರರ ಪರದಾಟ
ಬೆಂಗಳೂರು : ನಗರದ ಕೆಲವು ಸ್ಥಳಗಳಲ್ಲಿ ಸೆ.20 ರಂದು ವಿದ್ಯುತ್ ಕಡಿತ