ಬೆಂಗಳೂರು : ರಾಜ್ಯದಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚಾಗಿದ್ದು, ಆರೇ ತಿಂಗಳಲ್ಲಿ 2.3 ಲಕ್ಷಕ್ಕೂ ಅಧಿಕ ನಾಯಿ ಕಡಿತ ಪ್ರಕರಣ, 19 ರೇಬೀಸ್ ಸಾವುಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
2025ರ ಜ.1ರಿಂದ ಜೂ.30ರ ನಡುವೆ 2,31,091 ನಾಯಿ ಕಡಿತ ವರದಿಯಾಗಿದ್ದು, ಇದೇ ಅವಧಿಯಲ್ಲಿ ಕಳೆದ ವರ್ಷ 1,69,672 ನಾಯಿ ಕಡಿತ ಮತ್ತು 18 ರೇಬೀಸ್ ಸಾವು ವರದಿಯಾಗಿದ್ದವು. 2024ರಲ್ಲಿ ರಾಜ್ಯದಲ್ಲಿ ಇಡೀ ವರ್ಷದಲ್ಲಿ 3.6 ಲಕ್ಷ ನಾಯಿ ಕಡಿತ ಹಾಗೂ 42 ರೇಬೀಸ್ ಸಾವು ಸಂಭವಿಸಿದ್ದವು. 2023ರ ಮೊದಲ ಆರು ತಿಂಗಳ ಅವಧಿಗೆ ಹೋಲಿಸಿದರೆ ಈ ವರ್ಷ ನಾಯಿ ಕಡಿತ ಪ್ರಕರಣಗಳ ಸಂಖ್ಯೆಯಲ್ಲಿ ಶೇ.36.20ರಷ್ಟು ಹೆಚ್ಚಳ ಕಂಡುಬಂದಿದೆ.
ನಾಯಿ ಕಡಿತವನ್ನು ಅಧಿಸೂಚಿತ ಕಾಯಿಲೆ ಪಟ್ಟಿಗೆ 2022ರಲ್ಲಿ ಕರ್ನಾಟಕ ಸರ್ಕಾರ ಸೇರ್ಪಡೆ ಮಾಡಿತ್ತು. ಅದಾದ ನಂತರ ಎಲ್ಲ ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಸಂಸ್ಥೆಗಳು ನಾಯಿ ಕಡಿತ ಹಾಗೂ ದೃಢಪಟ್ಟ ರೇಬೀಸ್ ಪ್ರಕರಣಗಳನ್ನು ಆರೋಗ್ಯ ಇಲಾಖೆಗೆ ವರದಿ ಮಾಡುತ್ತಿವೆ. 2022ರ ನಂತರ ರಾಜ್ಯದಲ್ಲಿ ಅತಿ ಹೆಚ್ಚು ನಾಯಿ ಕಡಿತ ಪ್ರಕರಣಗಳು ಈ ವರ್ಷ ವರದಿಯಾಗಿವೆ.
ವಿಜಯಪುರದಲ್ಲಿ ಅತಿ ಹೆಚ್ಚು:
ರಾಜ್ಯದಲ್ಲಿ ಅತಿ ಹೆಚ್ಚು ನಾಯಿ ಕಡಿತ ಪ್ರಕರಣಗಳು ವರದಿಯಾಗಿರುವುದು ವಿಜಯಪುರ ಜಿಲ್ಲೆಯಲ್ಲಿ. ಈ ವರ್ಷದ ಆರೇ ತಿಂಗಳ ಅವಧಿಯಲ್ಲಿ ಅಲ್ಲಿ 15,527 ಮಂದಿಗೆ ನಾಯಿಗಳು ಕಡಿದಿವೆ. ಬಿಬಿಎಂಪಿ (13,831), ಹಾಸನ (13388), ದಕ್ಷಿಣ ಕನ್ನಡ (12524) ಹಾಗೂ ಬಾಗಲಕೋಟೆ (12,392) ಜಿಲ್ಲೆಗಳು ನಂತರದ ಸ್ಥಾನದಲ್ಲಿವೆ.
ಅತಿ ಕಡಿಮೆ ನಾಯಿ ಕಡಿತ ಪ್ರಕರಣಗಳು ವರದಿಯಾಗಿರುವುದು ಯಾದಗಿರಿ ಜಿಲ್ಲೆಯಲ್ಲಿ. ಅಲ್ಲಿ 1132 ಪ್ರಕರಣಗಳು ವರದಿಯಾಗಿವೆ. ಚಾಮರಾಜನಗರ (1810), ಕೊಡಗು (2523) ನಂತರದ ಸ್ಥಾನದಲ್ಲಿವೆ.
ಹಿಂದೆ ವರದಿಯಾಗುತ್ತಿರಲಿಲ್ಲ:
ಹುಬ್ಬಳ್ಳಿಯ ಬೀದಿಯಲ್ಲಿ ಇತ್ತೀಚೆಗೆ 3 ವರ್ಷದ ಬಾಲಕಿಯೊಬ್ಬಳ ಮೇಲೆ ಎರಡು ಬೀದಿ ನಾಯಿಗಳು ದಾಳಿ ನಡೆಸಿ ಎಳೆದಾಡಿದ ಘಟನೆ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದ್ದು, ಮಕ್ಕಳು, ವೃದ್ಧರು, ನಾಗರಿಕರ ಸುರಕ್ಷತೆ ಕುರಿತು ಮತ್ತೆ ಆತಂಕ ಶುರುವಾಗಿದೆ.
ನಾಯಿ ಕಡಿತ ಪ್ರಕರಣಗಳು ನಿಖರವಾಗಿ ವರದಿಯಾಗುತ್ತಿರುವ ಕಾರಣ ಪ್ರಕರಣಗಳು ಹೆಚ್ಚೆನಿಸುತ್ತಿವೆ. ಈ ಹಿಂದೆಯೂ ಇದೇ ರೀತಿ ಪ್ರಕರಣಗಳು ನಡೆಯುತ್ತಿದ್ದರೂ ವರದಿಯಾಗುತ್ತಿರಲಿಲ್ಲ. ಈಗ ಆ ವ್ಯವಸ್ಥೆ ಉತ್ತಮವಾಗಿರುವ ಕಾರಣ ಸಂಖ್ಯೆ ಹೆಚ್ಚೆನ್ನಿಸುತ್ತಿದೆ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ತಿಳಿಸಿದ್ದಾರೆ.
ಜಾಗೃತಿ, ತರಬೇತಿ ನೀಡ್ತಿದ್ದೇವೆ:
ನಾಯಿ ಕಡಿತ ಸಂತ್ರಸ್ತರಿಗೆ ಚಿಕಿತ್ಸೆ, ರೋಗಿಗಳ ಮೇಲ್ವಿಚಾರಣೆ, ಸಾಕಷ್ಟು ಪ್ರಮಾಣದಲ್ಲಿ ಔಷಧಿಗಳ ಲಭ್ಯತೆ ಮತ್ತು ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಬೀದಿ ನಾಯಿಗಳ ನಿಯಂತ್ರಣ ಕುರಿತು ಜಾಗೃತಿ, ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ನಾಯಿ ದಾಳಿಯಿಂದ ತರಚಿದ ಗಾಯವಾದರೂ ಲೆಕ್ಕ ಇಡುತ್ತಿದ್ದೇವೆ. ಇಂತಹ ಪ್ರಯತ್ನಗಳಿಂದ ಮುಂದಿನ ದಿನಗಳಲ್ಲಿ ನಾಯಿ ಕಡಿತ ಪ್ರಕರಣ ನಿಯಂತ್ರಣಕ್ಕೆ ಬರುತ್ತವೆ ಎಂದು ಹರ್ಷ ಗುಪ್ತಾ ಹೇಳಿದ್ದಾರೆ.
ಸಂಖ್ಯೆ ನಿಯಂತ್ರಿಸಬೇಕು:
ನಾಯಿಗಳ ಸಂಖ್ಯೆ ನಿಯಂತ್ರಿಸಬೇಕು ಮತ್ತು ರೇಬೀಸ್ ನಿಯಂತ್ರಿಸಲು ನಿಯಮಿತವಾಗಿ ಲಸಿಕೆ ಹಾಕಿಸುತ್ತಿರಬೇಕು. ಆದರೆ, ನಾಯಿಗಳು ದೊಡ್ಡ ಸಂಖ್ಯೆಯಲ್ಲಿರುವ ಕಾರಣ ಯಾವ ನಾಯಿಗೆ ಲಸಿಕೆ ಹಾಕಲಾಗಿದೆ, ಯಾವುದಕ್ಕೆ ಹಾಕಿಲ್ಲ ಎಂದು ಲೆಕ್ಕ ಇಡುವುದು ಸವಾಲಿನದ್ದು. ಇನ್ನು ಪ್ರತಿಯೊಂದು ನಾಯಿ ಕಡಿತ ಸಾವಿನ ಕಾರಣ ತಿಳಿಯಲು ಆಡಿಟ್ ಮಾಡುವಂತೆ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಚಿಕಿತ್ಸೆ ಪಡೆಯಲು ರೋಗಿ ವಿಳಂಬ ಮಾಡಿದ್ದಾರೆಯೇ? ಕಡಿದಿರುವ ನಾಯಿ ಪತ್ತೆ ಹಚ್ಚಿ ಸೂಕ್ತ ಕ್ರಮ ಜರುಗಿಸಲಾಗಿದೆಯೇ ಎಂಬುದರ ಕುರಿತು ಸ್ಥಳೀಯ ಸಂಸ್ಥೆಗಳು ಲೆಕ್ಕ ಇಡಬೇಕು ಎಂದು ಆದೇಶ ಮಾಡಲಾಗಿದೆ ಎಂದು ಹರ್ಷ ಗುಪ್ತಾ ಹೇಳಿದರು.
ಅತಿ ಹೆಚ್ಚು ನಾಯಿ ಕಡಿತ
ವಿಜಯಪುರ- 15,527
ಬೆಂಗಳೂರು ಬಿಬಿಎಂಪಿ 13,831
ಹಾಸನ 13,388
ಅತಿ ಕಡಿಮೆ ಶ್ವಾನ ಕಡಿತ
ಯಾದಗಿರಿ - 1132
ಚಾ.ನಗರ - 1810
ಕೊಡಗು - 2523
ಬೆಂಗಳೂರಲ್ಲಿ ಅತ್ಯಧಿಕ ಸಾವು
ಬೆಂಗಳೂರು ನಗರ ಜಿಲ್ಲೆಯಲ್ಲಿ ಅತ್ಯಧಿಕ ರೇಬೀಸ್ ಸಾವುಗಳು ವರದಿಯಾಗಿದ್ದು, 19 ಸಾವುಗಳಲ್ಲಿ 9 ಪ್ರಕರಣಗಳು ಈ ಒಂದೇ ಜಿಲ್ಲೆಯಲ್ಲಿ ಸಂಭವಿಸಿವೆ. ನಂತರದಲ್ಲಿ ಬೆಳಗಾವಿ 5, ಬಾಗಲಕೋಟೆ, ಬಳ್ಳಾರಿ, ಚಿಕ್ಕಬಳ್ಳಾಪುರ ಮತ್ತು ಶಿವಮೊಗ್ಗದಲ್ಲಿ ತಲಾ ಒಂದು ಪ್ರಕರಣ ವರದಿಯಾಗಿವೆ.
ನಿಖರ ವರದಿಯಿಂದ
ಪ್ರಕರಣಗಳು ಹೆಚ್ಚಳ
ನಾಯಿ ಕಡಿತ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗಿರುವಂತೆ ಕಂಡುಬರುತ್ತಿವೆ. ಏಕೆಂದರೆ, ಈಗ ಈ ಪ್ರಕರಣಗಳು ಅತ್ಯಂತ ನಿಖರವಾಗಿ ವರದಿಯಾಗುತ್ತಿವೆ. ಈ ಹಿಂದೆ ಇಂತಹ ಘಟನೆಗಳು ನಡೆಯುತ್ತಿದ್ದವಾದರೂ ಉತ್ತಮವಾಗಿ ವರದಿಯಾಗುತ್ತಿರಲಿಲ್ಲ.
- ಹರ್ಷ ಗುಪ್ತಾ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ