ಜಿಲ್ಲಾ ಕೇಂದ್ರದಲ್ಲಿ ಹೆಚ್ಚುತ್ತಿದೆ ಶ್ವಾನಗಳ ಹಾವಳಿ

KannadaprabhaNewsNetwork | Published : Nov 26, 2023 1:15 AM

ಸಾರಾಂಶ

ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಬೀದಿ ನಾಯಿಗಳ ಕಾಟ ವಿಪರೀತವಾಗಿದ್ದು, ಯಾವ ರಸ್ತೆ, ಓಣಿಗಳಲ್ಲಿ ಹೋದರೂ ಹತ್ತಾರು ನಾಯಿಗಳ ಹಿಂಡೇ ಬೆನ್ನಟ್ಟಿ ಬರುತ್ತವೆ. ಇಷ್ಟಾದರೂ ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ನಗರದ ಬಸ್‌ ನಿಲ್ದಾಣ ಸುತ್ತಮುತ್ತ, ಪಿಬಿ ರಸ್ತೆ, ಹಾನಗಲ್ಲ ರಸ್ತೆ, ಸುಭಾಸ ಸರ್ಕಲ್‌, ಬಸವೇಶ್ವರನಗರ, ರೈಲ್ವೆ ಸ್ಟೇಶನ್‌ ರಸ್ತೆ ಹೀಗೆ ಯಾವ ರಸ್ತೆ, ಓಣಿಗಳಿಗೆ ಹೋದರೂ ನಾಯಿಗಳ ಹಿಂಡೇ ಕಾಣುತ್ತವೆ. ಕೆಲವು ಕಡೆ ನಾಲ್ಕಾರು ನಾಯಿಗಳಿದ್ದರೆ, ಇನ್ನು ಕೆಲವು ಕಡೆಗಳ್ಲಲಂತೂ 15ರಿಂದ 20ರಷ್ಟು ಶ್ವಾನಗಳು ಗುಂಪಾಗಿರುತ್ತವೆ. ಹಗಲಿನ ವೇಳೆ ಅಲ್ಲಲ್ಲಿ ಮಲಗಿರುವ ನಾಯಿಗಳು, ರಾತ್ರಿ ವೇಳೆ ಹಾಗೂ ನಸುಕಿನಲ್ಲಿ ಅಪಾಯಕಾರಿ ರೀತಿಯಲ್ಲಿ ವರ್ತಿಸುತ್ತವೆ.

ಪಾದಚಾರಿಗಳು, ಬೈಕ್‌ನಲ್ಲಿ ಹೋಗುವವರನ್ನು ಬೆನ್ನಟ್ಟುವ ಶ್ವಾನಗಳು । ನಗರಸಭೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಹಿಡಿಶಾಪ

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಹಾವೇರಿ

ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಬೀದಿ ನಾಯಿಗಳ ಕಾಟ ವಿಪರೀತವಾಗಿದ್ದು, ಯಾವ ರಸ್ತೆ, ಓಣಿಗಳಲ್ಲಿ ಹೋದರೂ ಹತ್ತಾರು ನಾಯಿಗಳ ಹಿಂಡೇ ಬೆನ್ನಟ್ಟಿ ಬರುತ್ತವೆ. ಇಷ್ಟಾದರೂ ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ನಗರದ ಬಸ್‌ ನಿಲ್ದಾಣ ಸುತ್ತಮುತ್ತ, ಪಿಬಿ ರಸ್ತೆ, ಹಾನಗಲ್ಲ ರಸ್ತೆ, ಸುಭಾಸ ಸರ್ಕಲ್‌, ಬಸವೇಶ್ವರನಗರ, ರೈಲ್ವೆ ಸ್ಟೇಶನ್‌ ರಸ್ತೆ ಹೀಗೆ ಯಾವ ರಸ್ತೆ, ಓಣಿಗಳಿಗೆ ಹೋದರೂ ನಾಯಿಗಳ ಹಿಂಡೇ ಕಾಣುತ್ತವೆ. ಕೆಲವು ಕಡೆ ನಾಲ್ಕಾರು ನಾಯಿಗಳಿದ್ದರೆ, ಇನ್ನು ಕೆಲವು ಕಡೆಗಳ್ಲಲಂತೂ 15ರಿಂದ 20ರಷ್ಟು ಶ್ವಾನಗಳು ಗುಂಪಾಗಿರುತ್ತವೆ. ಹಗಲಿನ ವೇಳೆ ಅಲ್ಲಲ್ಲಿ ಮಲಗಿರುವ ನಾಯಿಗಳು, ರಾತ್ರಿ ವೇಳೆ ಹಾಗೂ ನಸುಕಿನಲ್ಲಿ ಅಪಾಯಕಾರಿ ರೀತಿಯಲ್ಲಿ ವರ್ತಿಸುತ್ತವೆ. ಪಾದಚಾರಿಗಳನ್ನು, ಬೈಕ್‌ ಸವಾರರನ್ನು ಬೆನ್ನಟ್ಟಿ ಹೋಗುತ್ತವೆ. ಇದರಿಂದ ಮಹಿಳೆಯರು, ಮಕ್ಕಳು ರಸ್ತೆಯಲ್ಲಿ ಸಂಚರಿಸಲು ಹೆದರುವಂತಾಗಿದೆ. ಬೆಳಗ್ಗೆ ವಾಯುವಿಹಾರಕ್ಕೆ ಹೋಗಲೂ ಆತಂಕಪಡುವಂತಾಗಿದೆ. ಬೆನ್ನಟ್ಟಿ ಬರುವ ನಾಯಿಗಳ ಹಿಂಡು ಒಂದು ಕಡೆಯಾದರೆ, ಬೈಕ್‌ಗಳಿಗೆ ಅಡ್ಡ ಬಂದು ಸವಾರರು ಬಿದ್ದು ಗಾಯಗೊಂಡು ಅನೇಕರು ಆಸ್ಪತ್ರೆಗೆ ಸೇರಿರುವ ಪ್ರಕರಣ ನಡೆಯುತ್ತಿವೆ. ಆಟವಾಡುತ್ತಿರುವ ಮಕ್ಕಳು ಸೇರಿದಂತೆ ಅನೇಕರಿಗೆ ನಾಯಿ ಕಡಿದಿರುವ ಘಟನೆಗಳು ನಿತ್ಯವೂ ನಡೆಯುತ್ತಿವೆ. ಶ್ವಾನ ಸಂತತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಕಳೆದ ಒಂದು ತಿಂಗಳೀಚೆಗೆ ನಾಯಿ ಮರಿಗಳ ಸಂಖ್ಯೆ ಹೆಚ್ಚಿದೆ ಎಂದು ಅನೇಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ನಗರಸಭೆ ನಿರ್ಲಕ್ಷ್ಯ:

ಬೀದಿ ನಾಯಿ ಹಾಗೂ ಹಂದಿಗಳ ಹಾವಳಿ ಹೆಚ್ಚಿ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದರೂ ನಗರಸಭೆ ಆಡಳಿತ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಕಳೆದ ಅನೇಕ ತಿಂಗಳಿಂದ ಬೀದಿ ನಾಯಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದಾಗಿ ಪ್ರಕಟಣೆ ನೀಡುತ್ತಿರುವ ನಗರಸಭೆ, ಮುಂದೆ ಈ ಬಗ್ಗೆ ಯಾವ ಕ್ರಮವನ್ನೂ ಕೈಗೊಂಡ ಉದಾಹರಣೆಯಿಲ್ಲ. ಶ್ವಾನಗಳ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆಗಾಗಲಿ, ಶ್ವಾನಗಳನ್ನು ಹಿಡಿದು ಬೇರೆಡೆ ಬಿಡುವ ಕಾರ್ಯಾಚರಣೆಯಾಗಲಿ ಇತ್ತೀಚಿನ ವರ್ಷಗಳಲ್ಲಿ ನಡೆಸಿಲ್ಲ. ಇದರಿಂದ ಶ್ವಾನಗಳ ಸಂತತಿ ಹೆಚ್ಚುತ್ತಲೇ ಇದೆ. ಇದು ಜನರನ್ನು ಆತಂಕಕ್ಕೆ ದೂಡಿದೆ. ಇದರ ಜೊತೆಗೆ ಹಂದಿ, ಬಿಡಾಡಿ ದನಗಳ ಸಂಖ್ಯೆಯೂ ಹೆಚ್ಚುತ್ತಿದೆ. ನಗರಸಭೆ ಸದಸ್ಯರೂ ಈ ಬಗ್ಗೆ ದೂರುತ್ತಲೇ ಬರುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಶ್ವಾನ ನಿಯಂತ್ರಣದ ಬಗ್ಗೆ ನಗರಸಭೆ ಅಧಿಕಾರಿಗಳೂ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದಿನಂತೆ ಶ್ವಾನಗಳಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಹಿಡಿದು ಬೇರೆ ಕಡೆ ಸ್ಥಳಾಂತರಿಸಲು ಅವಕಾಶವಿಲ್ಲ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಬೀದಿ ನಾಯಿಗಳ ಹಾವಳಿಯಿಂದ ತತ್ತರಿಸಿರುವ ಸಾರ್ವಜನಿಕರಿಗೆ ಸಮಸ್ಯೆ ತಪ್ಪಿಸಲು ಕ್ರಮವಾಗಬೇಕಿದೆ.

ಬೀದಿನಾಯಿಗಳ ನಿಯಂತ್ರಣ ಮಾಡುವ ಸಲುವಾಗಿ ಅವುಗಳನ್ನು ಹಿಡಿದು ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿ, ನಾಲ್ಕು ದಿನ ಆರೈಕೆ ಮಾಡುವ ಸಲುವಾಗಿ ಎರಡು ಬಾರಿ ಟೆಂಡರ್‌ ಕರೆದರೂ ಯಾರೂ ಭಾಗವಹಿಸಿಲ್ಲ. ಅದಕ್ಕಾಗಿ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ನಗರಸಭೆಯಿಂದಲೇ ಈ ಕಾರ್ಯ ಕೈಗೊಳ್ಳಲು ಉದ್ದೇಶಿಸಲಾಗಿದೆ. ಆಗಷ್ಟು ಬೇಗ ಬೀದಿ ನಾಯಿ ನಿಯಂತ್ರಣ ಮಾಡಲಾಗುವುದು ಎನ್ನುತ್ತಾರೆ ನಗರಸಭೆ ಪೌರಾಯುಕ್ತ ಪರಶುರಾಮ ಚಲುವಾದಿ.

Share this article