ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಕಮ್ಮರೆಡ್ಡಿ ಸಮುದಾಯ ಭವನದಲ್ಲಿ ಶನಿವಾರ ರೆಡ್ಡಿ ಜನಸಂಘದಿಂದ ಏರ್ಪಡಿಸಿದ್ದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮಾಜದ ಮಾಜಿ ಸೈನಿಕರು, ನಿವೃತ್ತ ಸರ್ಕಾರಿ ನೌಕರರು ಹಾಗೂ ರಾಷ್ಟ್ರಪ್ರಶಸ್ತಿಗೆ ಭಾಜನರಾದವರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಯಸ್ಸಾದವರನ್ನು ಜವಾಬ್ದಾರಿಯಿಂದ ನೋಡಿಕೊಳ್ಳುವುದು ಮಕ್ಕಳಾದವರ ಕರ್ತವ್ಯವೆಂದರು.
ಇಂದಿನ ದಿನಮಾನದಲ್ಲಿನ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗಿದೆ. ಇದು ಮನಸ್ಸಿಗೆ ನೋವು ತರುವ ವಿಷಯವಾಗಿದೆ. ಪೋಷಕರು ನೀವು ಚಿಕ್ಕವರಿದ್ದಾಗ ಚನ್ನಾಗಿ ನೋಡಿಕೊಂಡಿದ್ದಾರೆ. ಅದೇ ರೀತಿ ಅವರು ವಯಸ್ಸಾದಾಗ ಮಕ್ಕಳಾದವರು ನೋಡಿಕೊಳ್ಳುವುದು ಅವರ ಕರ್ತವ್ಯವಾಗಿದೆ. ವೃದ್ಧಾಶ್ರಮಗಳ ಹೆಚ್ಚಳ ನಮ್ಮ ದೇಶದ ಪರಂಪರೆ, ಸಂಸ್ಕೃತಿಗೆ ವಿರುದ್ಧವಾದದ್ದಾಗಿದೆ. ಬೆಳೆಸಿದ, ಕಲಿಸಿದ ಪಾಲಕರನ್ನು ನಡೆದು ಬಂದ ದಾರಿ ಹಾಗೂ ಸಾಮಾಜಿಕ ಬದ್ಧತೆ ಎಂದಿಗೂ ಮರೆಯ ಬಾರದು ಎಂದರು.ನಾವಿಂದು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇವೆ ಎಂದರೆ ಅದಕ್ಕೆ ದೇಶ ಕಾಯುವ ಸೈನಿಕರ ಕೊಡುಗೆ ಅಪಾರ. ಪ್ರತಿ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾಜಿ ಸೈನಿಕರನ್ನು, ನಿವೃತ್ತ ಸರ್ಕಾರಿ ನೌಕರರನ್ನು ಸನ್ಮಾನಿಸಲಾಗುತ್ತಿದೆ. ರೆಡ್ಡಿ ಜನಸಂಘ ರಾಜ್ಯದಲ್ಲೇ ಆರ್ಥಿಕವಾಗಿ ಸದೃಢವಾಗಿರುವ ಸಂಘಟನೆಯಾಗಿದೆ. ಇದಕ್ಕೆ ಸಮುದಾಯದ ಹಿರಿಯರ ಕೊಡುಗೆ ಆಪಾರವಾಗಿದೆ ಎಂದರು.
ಸಂಘದ ಕಾರ್ಯದರ್ಶಿ ಕೆ.ಪರಶುರಾಮ ಸ್ವಾಗತಿಸಿದರು. ಉಪಾಧ್ಯಕ್ಷ ಎಂ.ಕೆ.ಅನಂತರೆಡ್ಡಿ, ಖಜಾಂಚಿ ಜಿ.ವೈ ಸುರೇಶ್‍ಕುಮಾರ್ ಹಾಗೂ ದಾವಣಗೆರೆ, ಶಿವಮೊಗ್ಗ ಹಾಗೂ ಚಿತ್ರದುರ್ಗ ವ್ಯಾಪ್ತಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಸಂಘದ ತಾಲೂಕು ಘಟಕಗಳ ಅಧ್ಯಕ್ಷರು ಭಾಗವಹಿಸಿದ್ದರು. ನೈಟಿಂಗೇಲ್ ಪ್ರಶಸ್ತಿಗೆ ಭಾಜನರಾದ ಹೊನ್ನಾಳಿ ತಾಲೂಕು ಬಾಗತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸರ್ಕಾರಿ ಆಸ್ಪತ್ರೆ ನರ್ಸ್ ನಾಗರತ್ನ, 45 ಮಾಜಿ ಸೈನಿಕರು, 42 ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. 110 ಎಸ್ಸೆಸ್ಸೆಲ್ಸಿ ಹಾಗೂ 170 ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು.