ಮಾದಕ ವಸ್ತುಗಳಿಗೆ ಮಾರುಹೋಗಬೇಡಿ: ಎಚ್.ಆರ್.ಅರವಿಂದ್

KannadaprabhaNewsNetwork | Published : Aug 15, 2024 1:51 AM

ಸಾರಾಂಶ

ಹೊರಗಡ ವಿದ್ಯಾಭ್ಯಾಸಕ್ಕೆಂದು ಹೋಗುವ ಕೆಲವು ಮಕ್ಕಳು ಮಾದಕ ವ್ಯಸನಿಗಳಾಗಿ ಪರಿವರ್ತನೆಯಾಗುತ್ತಿದ್ದಾರೆ, ಅವರಿಗೆ ಅರಿವಿನ ಕೊರತೆ ಇದೆ. ಈ ದೇಶದ ಭವಿಷ್ಯ ಯುವಜನರ ಕೈಯ್ಯಲ್ಲಿದೆ. ಅಂತಹ ಯುವ ಸಮೂಹಕ್ಕೆ ಮಾರಕವಾಗಿ ಮಾದಕ ವ್ಯಸನ ಎಂಬುದು ಕಾಡುತ್ತಿದೆ, ಅದನ್ನು ಬೇರಿನಿಂದಲೇ ಕಿತ್ತು ಎಸೆಯಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಾದಕ ವಸ್ತುಗಳ ಪರವಾಗಿ ಜಾಹಿರಾತು ನೀಡುವವರ, ಅದರ ಸೌಂದರ್ಯಕ್ಕೆ ಮಾರು ಹೋಗದೇ ಆರೋಗ್ಯದ ಕಡೆ ಗಮನ ಹರಿಸುವಂತೆ ಯುವ ಸಮುದಾಯಕ್ಕೆ ಬದುಕು ಸೇವಾ ಸಮಿತಿ ಅಧ್ಯಕ್ಷ ಎಚ್.ಆರ್.ಅರವಿಂದ್ ಸಲಹೆ ನೀಡಿದರು.

ನಗರದ ಗುತ್ತಲು ಬಡಾವಣೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಬದುಕು ಸೇವಾ ಸಮಿತಿ, ಅಮೃತ ಅಲಯನ್ಸ್ ಸಂಸ್ಥೆ, ಎಲ್ಲರೊಳಗೊಂದಾಗು ಮಂಕುತಿಮ್ಮ ಸೇವಾ ಟ್ರಸ್ಟ್ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಮಾದಕ ವಸ್ತುಗಳ ಬಗ್ಗೆ ಅರಿವು ಹಾಗೂ ಮಾದಕ ವಸ್ತುಗಳ ಕುರಿತು ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಮಾತನಾಡಿದರು.

ಹೊರಗಡ ವಿದ್ಯಾಭ್ಯಾಸಕ್ಕೆಂದು ಹೋಗುವ ಕೆಲವು ಮಕ್ಕಳು ಮಾದಕ ವ್ಯಸನಿಗಳಾಗಿ ಪರಿವರ್ತನೆಯಾಗುತ್ತಿದ್ದಾರೆ, ಅವರಿಗೆ ಅರಿವಿನ ಕೊರತೆ ಇದೆ. ಈ ದೇಶದ ಭವಿಷ್ಯ ಯುವಜನರ ಕೈಯ್ಯಲ್ಲಿದೆ. ಅಂತಹ ಯುವ ಸಮೂಹಕ್ಕೆ ಮಾರಕವಾಗಿ ಮಾದಕ ವ್ಯಸನ ಎಂಬುದು ಕಾಡುತ್ತಿದೆ, ಅದನ್ನು ಬೇರಿನಿಂದಲೇ ಕಿತ್ತು ಎಸೆಯಬೇಕು. ಜೊತೆಗೆ ಮಾದಕ ವಸ್ತುಗಳ ಸುಂದರ ಜಾಹಿರಾತಿಗೆ ಯಾರೂ ಮಾರುಹೋಗಬಾರದು ಎಂದರು.

ಕೆಲವರು ಪ್ರಯೋಗಕ್ಕೆ ಮಾದಕ ವಸ್ತುವನ್ನು ಉಪಯೋಗಿಸಿ ನಂತರ ಅದಕ್ಕೆ ದಾಸರಾಗುತ್ತಾರೆ. ಒಮ್ಮೆ ವ್ಯಸನಕ್ಕೆ ಒಳಗಾದರೆ ಅದರಿಂದ ಹೊರಬರುವುದು ಕಷ್ಟ. ಮಾದಕ ವಸ್ತುಗಳು ದೇಹವನ್ನು ಕುಗ್ಗಿಸಿ ದೈಹಿಕ ಮತ್ತು ಮಾನಸಿಕವಾಗಿ ದುರ್ಬಲರನ್ನಾಗಿಸುತ್ತದೆ. ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದರು.

ಜಿಲ್ಲಾ ಮಾನಸಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಹಮದ್ ಸುಹೇಲ್ ಮಾತನಾಡಿ, ಕುಡಿತದ ವ್ಯಸನಕ್ಕೆ ಸಂಪೂರ್ಣ ಚಿಕಿತ್ಸೆಯಿಲ್ಲ, ಮುಂಜಾಗ್ರತೆ ಕ್ರಮವೇ ಇದಕ್ಕೆ ಪರಿಹಾರವಾಗಿದೆ. ಮಾದಕ ವ್ಯಸನದ ಕೆಟ್ಟ ಚಟದಿಂದ ದೂರ ಇರಬೇಕು. ಕುಡಿತದಿಂದ ಮೊದಲು ಮೆದುಳಿಗೆ ಹಾನಿ ಉಂಟಾಗುತ್ತದೆ. ಮೆದುಳು ಚೆನ್ನಾಗಿದ್ದರೆ ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಂಡ್ಯ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಎಂ.ಲೋಕೇಶ್, ಶಿಕ್ಷಕ ಅಪ್ಪಾಜಯ್ಯ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಮುಖಂಡರಾದ ರಾಜೇಶ್ವರಿ ಭಾಗವಹಿಸಿದ್ದರು.

Share this article