ಕನ್ನಡಪ್ರಭ ವಾರ್ತೆ ಆನವಟ್ಟಿ
ಜಲ ಹಾಗೂ ಮತ ಎರಡನ್ನೂ ಯೋಚಿಸಿ ಬಳಸಿದಾಗ ಮಾತ್ರ ಸಮಾಜಕ್ಕೆ ಒಳಿತು ಆಗಲು ಸಾಧ್ಯ. ಜಲದಿಂದ ಜೀವರಾಶಿಗಳು ಉಳಿಯುತ್ತವೆ. ಮತದಾನದಿಂದ ದೇಶದ ಪ್ರಗತಿಗೆ ಸಹಕಾರಿಯಾಗುತ್ತದೆ. ಸಂವಿಧಾನಾತ್ಮಕವಾಗಿ ಪ್ರತಿಯೊಬ್ಬರು ಮತದಾನ ಮಾಡಿ. ಯಾವುದೇ ಆಮಿಷಕ್ಕೆ ಒಳಗಾಗಿ ಮತ ಚಲಾವಣೆ ಮಾಡಬಾರದು ಎಂದು ಸೊರಬ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಭಾಕರ್ ರಾವ್ ತಿಳಿಸಿದರು.ಆನವಟ್ಟಿಯ ಪಟ್ಟಣ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ, ತಾಲೂಕು ಆಡಳಿತ, ತಾಲೂಕು ಪಂಚಾಯತ್ ಸೊರಬ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆ ಹಾಗೂ ಮತದಾನದ ಜಾಗೃತಿ ಕಾರ್ಯಕ್ರಮ ಪ್ರಯುಕ್ತ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ನಮ್ಮ ಪೂರ್ವಿಕರು ಬರಗಾಲ ಮತ್ತು ಬೇಸಿಗೆಯಲ್ಲಿ ನೀರಿನ ದಾಹ ತಣಿಸಲು ಕೆರೆ-ಕಟ್ಟೆಗಳು ಬಾವಿಗಳ ನಿರ್ಮಿಸಿ ಅವುಗಳು ಬತ್ತದಂತೆ ನೀರು ಇಂಗಿಸುವಿಕೆಯಿಂದ ಜಲವರ್ಧನೆ ಮಾಡಿಕೊಂಡು ನೀರಿನ ಅಭಾವದಿಂದ ಹೊರ ಬರುತ್ತಿದ್ದರು. ಇಂದಿನಂತೆ ಕೊಳವೆ ಬಾವಿ, ನಲ್ಲಿಗಳ ವ್ಯವಸ್ಥೆಗಳು ಇರಲಿಲ್ಲ. ಆದರೆ ಇಂದಿನ ದಿನಗಳಲ್ಲಿ ನಮ್ಮ ನಿರ್ಲಕ್ಷ್ಯದಿಂದಾಗಿ, ನೀರು ಕಲುಷಿತಗೊಳಿಸುತ್ತಿದ್ದೇವೆ. ಕಾಡು ನಾಶವಾಗಿದೆ ಇದರಿಂದ ವಾತಾವರಣ ಹದಗೆಡುತ್ತಿರುವುದಲ್ಲದೆ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ನಾವೆಲ್ಲರು ಮುಂದಿನ ಪೀಳಿಗೆಗಾಗಿ ಪರಿಸರ ಹಾಗೂ ನೀರಿನ ಸಂರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಬಾಲ್ಯದಿಂದಲೇ ನೀರಿನ ಸಂರಕ್ಷಣೆ ಅರಿವು ಮೂಡಿಸಿ:ಸಿವಿಲ್ ನ್ಯಾಯಾಧೀಶ ರಾಘವೇಂದ್ರ ಉಪಾಧ್ಯೆ ಮಾತನಾಡಿ, ನೀರಿನ ಮೂಲಗಳಿಗೆ, ಪೂರ್ವಿಕರು ಪೂಜ್ಯ ಭಾವನೆ ತಳೆದಿದ್ದರು. ನೀರನ್ನು ಗಂಗಾ ಮಾತೆಗೆ ಹೋಲಿಸಿ, ಪ್ರತಿ ವರ್ಷ ನದಿ ಹಾಗೂ ನೀರಿನ ಮೂಲಗಳು ತುಂಬಿದಾಗ ಬಾಗಿನ ಅರ್ಪಿಸಿ ಧನ್ಯತೆ ಮೆರೆಯುತ್ತಿದ್ದರು. ಪ್ರತಿ ಹನಿ ನೀರನ್ನು ಮಿತವಾಗಿ ಬಳಸಿ, ಉಳಿಸಿ ಮುಂದಿನ ಪೀಳಿಗೆಯ ಮಕ್ಕಳಿಗೆ ಬಾಲ್ಯದಿಂದಲೇ ನೀರಿನ ಸಂರಕ್ಷಣೆ ಬಗ್ಗೆ ಅರಿವು ಮೂಡಿಸೋಣ ಎಂದರು.
ಭಾರತ ಜಗತ್ತಿನಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ರಾಷ್ಟ್ರ, ವಿಶ್ವದಲ್ಲಿರುವ ದೇಶಗಳಿಗೂ ನಮ್ಮಲ್ಲಿನ ಸಂವಿಧಾನಾತ್ಮಕವಾಗಿ ನಡೆಯುವ ಮತದಾನ ಪ್ರಕ್ರಿಯೆ ಆದರ್ಶವಾಗಿದೆ ಎಂದರು.ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಎಚ್.ಜಯಪ್ಪ , ಸಿಪಿಐ ರಮೇಶ್ ರಾವ್, ವಕೀಲರಾದ ವೈ.ಜಿ ಪುಟ್ಟಸ್ವಾಮಿ, ಸುಧಾಕರ್ ಪಿ. ನಾಯ್ಕ, ಅರುಣ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಂತೋಷ್ ಕುಮಾರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ ಡಿ.ಎನ್, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಶ್ರೀರಾಮ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿ ಸಿಬ್ಬಂದಿಗಳಾದ ಮನೋಜ್, ಜಾಕೀರ್, ಅಶೋಕ್, ಗೀತಾ, ಸಿ.ಪ್ರಭು, ಮಂಜುನಾಥ, ಶಿವಲೀಲಾ ಹಿರೇಮಠ, ಶೃತಿ ಇದ್ದರು.