ಬ್ಯಾಂಕ್‌ ವಿವರ, ಓಟಿಪಿ ಯಾರಿಗೂ ನೀಡಬೇಡಿ: ಶೈಲಜಾ ಕೆ.ಆರ್

KannadaprabhaNewsNetwork | Published : Dec 7, 2024 12:34 AM

ಸಾರಾಂಶ

ಉದ್ಯೋಗಕ್ಕಾಗಿ ಸಾಲ ಪಡೆಯುತ್ತಿರಿ ಅದನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಿ ಸಾಲ ನವೀಕರಿಸಬೇಕು. ಬ್ಯಾಂಕ್‌ಗಳು ನೀಡುವ ಹಣ ಸರ್ಕಾರದ್ದಲ್ಲ, ಜನ ಸಾಮಾನ್ಯರದ್ದು

ಕನ್ನಡಪ್ರಭ ವಾರ್ತೆ ಸಾವಳಗಿ

ಬ್ಯಾಂಕ್‌ ವಿವರಗಳು, ಓಟಿಪಿ ಸೇರಿದಂತೆ ಯಾವುದೇ ಕಾರಣಕ್ಕೂ ಯಾರಿಗೂ ನೀಡಬಾರದು. ಯಾವುದೋ ಮೂಲೆಯಲ್ಲಿ ಕುಳಿತು ಮುಗ್ಧರನ್ನು, ಕಲಿತವರು, ಬುದ್ಧಿವಂತರನ್ನು ಸಹ ವಂಚಿಸುತ್ತಿದ್ದಾರೆ ಎಚ್ಚರಿಕೆಯಿಂದ ಇರಬೇಕು ಎಂದು ಸಹಾಯಕ ಜನರಲ್ ವ್ಯವಸ್ಥಾಪಕಿ ಶೈಲಜಾ ಕೆ.ಆರ್ ಹೇಳಿದರು.

ಸಾವಳಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಂಭಾಗಣದಲ್ಲಿ ಕೆನರಾ ಬ್ಯಾಂಕ್‌ ರೈತ ಬಾಂಧವರಿಗೆ, ವ್ಯಾಪಾರಿಗಳಿಗೆ ಮತ್ತು ಉದ್ಯಮಿಗಳಿಗೆ ಸುವರ್ಣ ಅವಕಾಶ ಎಮ್ಎಸ್ಎಮ್ಇ ಕ್ಲಸ್ಟರ್ ಶಿಬಿರ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉದ್ಯೋಗಕ್ಕಾಗಿ ಸಾಲ ಪಡೆಯುತ್ತಿರಿ ಅದನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಿ ಸಾಲ ನವೀಕರಿಸಬೇಕು. ಬ್ಯಾಂಕ್‌ಗಳು ನೀಡುವ ಹಣ ಸರ್ಕಾರದ್ದಲ್ಲ, ಜನ ಸಾಮಾನ್ಯರದ್ದು. ನಿಮ್ಮ ಉದ್ಯೋಗಕ್ಕೆ ಸರ್ಕಾರ ಸಬ್ಸಿಡಿ ಮಾತ್ರ ಕೊಡುತ್ತದೆ. ಒಮ್ಮಿಲೇ ಬಂದು ದೊಡ್ಡ ಪ್ರಮಾಣದ ಸಾಲ ಬೇಡಿಕೆ ಇಡದೆ ಹಂತ ಹಂತವಾಗಿ ಸಣ್ಣ ಪ್ರಮಾಣದಿಂದ ಆರಂಭಿಸಿ ದೊಡ್ಡ ಸಾಲದ ಬೇಡಿಕೆಗಳಿಗೆ ಮುಂದಾಗಬೇಕು ಎಂದರು.

ಸ್ಕ್ರೀನ್ ಮೂಲಕ ಪರದೆ ಮೇಲೆ ಫಲಾನುಭವಿಗಳಿಗೆ ಗುತ್ತಿಗೆದಾರ, ಆಸ್ಪತ್ರೆ, ವ್ಯಾಪಾರಿಗಳು, ಬೇಕರಿ ತಯಾರಿಕಾ ಘಟಕ, ಕರದಂಟು, ಹಿಟ್ಟು, ಉಪ್ಪಿನಕಾಯಿ, ಹಾಲು ಮತ್ತು ಹಾಲಿನ ಉತ್ಪನ್ನ, ಚಿಪ್ಸ ಮತ್ತು ಪಾಪಡ, ಮಸಾಲೆ ಸೇರಿದಂತೆ ಅನೇಕ ವಸ್ತುಗಳ ತಯಾರಿಕಾ ಘಟಕಗಳ ಕುರಿತು ಮಾಹಿತಿ ನೀಡಿದರು.

ಪೋನ ಫೇ, ಗೂಗಲ ಫೇ, ಪೇಟೆಮ್ ಅಂತಾ ಸಿಕ್ಕ ಸಿಕ್ಕ ಆ್ಯಪ್ ಬಳಕೆ ಮಾಡುವುದಕ್ಕಿಂತ ನಮ್ಮ ಕೆನರಾ ಬ್ಯಾಂಕ್‌ ಆ್ಯಪ್ ಬಳಕೆ ಮಾಡಿ. ನಮ್ಮ ವ್ಯವಸ್ಥಾಪಕರು, ಸಿಬ್ಬಂದಿ ವರ್ಗದವರು ಯಾರೂ ಓಟಿಪಿ ಕೇಳಲ್ಲ ಕೇಳಿದ್ರು ಓಟಿಪಿ ಮಾತ್ರ ಕೊಡಬೇಡಿ. ವಾಟ್ಸಪ್‌ನಲ್ಲಿ ಎಪಿಕೆ ಪೈಲ್ ಬಂದರು ಡೌನಲೋಡ್‌ ಮಾಡಕೊಳ್ಳಬೇಡಿ. ನಿಮಗೆ ತೊಂದರೆ ಅಥವಾ ಏನಾದರೂ ಮಾಹಿತಿ ಬೇಕಾದರೆ ಸಮೀಪದ ಶಾಖೆಗಳಿಗೆ ಬೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ ಎಂದರು.

ಇದೇ ಸಂದರ್ಭದಲ್ಲಿ ಟಿ. ನರೇಶ, ಮರೀಯಪ್ಪನ್ ಎ, ರಾಜು ಲಮಾಣಿ, ಮಹಾಂತೇಶ ಮಾಯನ್ನವರ, ಯಲ್ಲಾಲಿಂಗ ಹಲ್ಲೂರ ಸೇರಿದಂತೆ ಗ್ರಾಹಕರು, ಸಿಬ್ಬಂದಿ ವರ್ಗದವರು ಇದ್ದರು.

Share this article