ದೊಡ್ಡಬಳ್ಳಾಪುರ: ಕೆಐಎಡಿಬಿ ಸ್ವಾಧೀನ ಪಡಿಸಿಕೊಳ್ಳಲು ಹೊರಟಿರುವ ರೈತರ ಜಮೀನಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡದೆ ಹೋದರೆ ಯಾವುದೇ ಕಾರಣಕ್ಕೂ ನಮ್ಮ ಭೂಮಿ ಬಿಟ್ಟು ಕೊಡುವುದಿಲ್ಲ. 2013 ರ ಭೂಸ್ವಾಧೀನ ಕಾಯ್ದೆಯಂತೆ ಪರಿಹಾರ ಒದಗಿಸಲು ಆಗ್ರಹಿಸಿ ಇದೇ ಮಾ.11 ರಂದು ಜಿಲ್ಲಾಧಿಕಾರಿ ಕಚೇರಿವರೆಗೆ ವಾಹನಗಳ ಮೂಲಕ ರ್ಯಾಲಿ ನಡೆಸಲಾಗುವುದು ಎಂದು ಕೊನಘಟ್ಟ, ಕೋಡಿಹಳ್ಳಿ, ಆದಿನಾರಾಯಣ ಹೊಸಹಳ್ಳಿ, ನಾಗದೇನಹಳ್ಳಿ ಹಾಗೂ ಮೋಪರಹಳ್ಳಿ ರೈತರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಮುಖಂಡ ಹಾಗೂ ನಾಗದೇನಹಳ್ಳಿಯ ಜೆ.ಆನಂದಮೂರ್ತಿ, ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳುತ್ತಿರುವ ರೈತರ ಭೂಮಿಗೆ ವೈಜ್ಞಾನಿಕ ದರ ನಿಗದಿ ಮಾಡುವಂತೆ ಕಳೆದ 56 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತಿದೆ. ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿಯಿಂದ ಹಿಡಿದು ಸಚಿವರಾದಿಯಾಗಿ ಎಲ್ಲರಿಗೂ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.ಇಂದು ಜಿಲ್ಲಾಧಿಕಾರಿ ಕಚೇರಿಗೆ ರ್ಯಾಲಿ:
ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಮಾ.11ರಂದು ಜಿಲ್ಲಾಧಿಕಾರಿ ಕಚೇರಿವರೆಗೆ ಎಲ್ಲ ರೈತರು, ರೈತ ಕುಟುಂಬಗಳು ಸೇರಿ ನಮ್ಮ ವಾಹನಗಳಲ್ಲಿ ರ್ಯಾಲಿ ನಡೆಸಲಿದ್ದೇವೆ. ಅಲ್ಲಿಂದ ಜಾಥಾ ಮೂಲಕ ಬಂದು ಉಪವಿಭಾಗಾಧಿಕಾರಿ, ತಹಶೀಲ್ದಾರ್ ಅವರಿಗೂ ಮನವಿ ಸಲ್ಲಿಸಲಾಗುವುದು. ಜಾಥಾ ವೇಳೆ ಪೊಲೀಸ್ ಇಲಾಖೆ ಸೂಕ್ತ ರಕ್ಷಣೆ ನೀಡಬೇಕು. ಜಾಥಾಗೆ ಎಲ್ಲ ಪ್ರಗತಿಪರ, ದಲಿತಪರ ಸಂಘಟನೆಗಳು, ರಾಜಕೀಯ ಪಕ್ಷಗಳು ಬೆಂಬಲ ನೀಡಿ ಭಾಗವಹಿಸಬೇಕು ಎಂದು ಕೋರಿದರು.ಲೋಕಸಭಾ ಚುನಾವಣೆ ಬಹಿಷ್ಕಾರ ಎಚ್ಚರಿಕೆ:
ಹೋರಾಟ ಸಮಿತಿ ಮುಖಂಡ ಹಾಗೂ ಟಿಎಪಿಎಂಸಿಎಸ್ ನಿರ್ದೇಶಕ ಆನಂದ್ ಮಾತನಾಡಿ, ಕೆಐಎಡಿಬಿ ನೀಡುವ ಅರೆಕಾಸಿನ ಪರಿಹಾರದಿಂದ ರೈತರ ಬದುಕು ಸುಧಾರಿಸುವುದಿಲ್ಲ. ಫಲವತ್ತಾದ ಭೂಮಿ ಬಿಟ್ಟುಕೊಟ್ಟು ಬೇರೆ ಊರುಗಳಿಗೆ ಹೋಗಿ ಜೀವನ ಸಾಗಿಸುವುದು ದುಸ್ತರವಾಗಲಿದೆ. 2013 ರ ಭೂಸ್ವಾದೀನ ಕಾಯ್ದೆಯಂತೆ ಪರಿಹಾರ ನೀಡಿದರೆ ರೈತರು ಪರ್ಯಾಯ ಬದುಕು ಕಟ್ಟಿಕೊಳ್ಳಬಹುದು. ಒಂದು ವೇಳೆ ಸರ್ಕಾರ ಹಾಗೂ ಕೆಐಎಡಿಬಿ ಅಧಿಕಾರಿಗಳು ಭೂಮಿಗೆ ವೈಜ್ಞಾನಿಕ ಬೆಲೆ ನೀಡದಿದ್ದರೆ ನಾವ್ಯಾರು ಭೂಮಿ ಕೊಡುವುದಿಲ್ಲ. ಮುಂಬರುವ ಲೋಕಸಭೆ ಚುನಾವಣೆಯನ್ನೂ ಬಹಿಷ್ಕರಿಸಬೇಕಾದೀತು ಎಂದು ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿ ಮುಖಂಡರಾದ ನಾರಾಯಣಗೌಡ, ರಾಮಾಂಜಿನಪ್ಪ, ಮಂಜುನಾಥ, ಸಿ.ಕೃಷ್ಣಪ್ಪ, ನರಸಿಂಹಮೂರ್ತಿ, ನಂಜೇಗೌಡ, ರಾಮಣ್ಣ, ಜಯಂತ್, ಅಭಿ, ನಾಗರಾಜು, ರಮೇಶ್ ಇತರರು ಭಾಗವಹಿಸಿದ್ದರು.10ಕೆಡಿಬಿಪಿ1-
ದೊಡ್ಡಬಳ್ಳಾಪುರದಲ್ಲಿ ವಿವಿಧ ಗ್ರಾಮಗಳ ರೈತರು ಕೆಐಎಡಿಬಿ ಭೂಸ್ವಾದೀನ ಪ್ರಕ್ರಿಯೆ ಕುರಿತು ಪತ್ರಿಕಾಗೋಷ್ಠಿ ನಡೆಸಿದರು.