ಜಯಪ್ರಕಾಶ್‌ ಹೆಗ್ಡೆ ಕಾಂಗ್ರೆಸ್‌ಗೆ ಹೋಗುವುದೇ ಗೊತ್ತಿಲ್ಲ: ಶ್ರೀನಿವಾಸ ಪೂಜಾರಿ

KannadaprabhaNewsNetwork |  
Published : Mar 05, 2024, 01:33 AM IST
ಕೋಟ ಶ್ರೀನಿವಾಸ ಪೂಜಾರಿ | Kannada Prabha

ಸಾರಾಂಶ

ಜಯಪ್ರಕಾಶ್ ಹೆಗ್ಡೆ ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ರಾಜ್ಯ ನಾಯಕರು ಅವರಿಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಸ್ಥಾನ ನೀಡಿದ್ದರು. ಜ.29ರಂದು ತಮ್ಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ಬಳಿಕ ಅವರು ಪಕ್ಷಾತೀತವಾದ ಆಯೋಗದ ಹುದ್ದೆಯಿಂದ ಮುಕ್ತರಾಗಿದ್ದಾರೆ. ಆದರೆ ಅವರು ಕಾಂಗ್ರೆಸ್‌ಗೆ ಹೋಗುವುದಾಗಲೀ, ಚುನಾವಣೆ ಸ್ಪರ್ಧಿಸುವ ಬಗ್ಗೆಯಾಗಲೀ ತಿಳಿದಿಲ್ಲ ಎಂದು ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್‌ ಹೆಗ್ಡೆ ಅವರು ಕಾಂಗ್ರೆಸ್‌ಗೆ ಹೋಗುವ ವಿಚಾರವೇ ಗೊತ್ತಿಲ್ಲ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯಪ್ರಕಾಶ್ ಹೆಗ್ಡೆ ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ರಾಜ್ಯ ನಾಯಕರು ಅವರಿಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಸ್ಥಾನ ನೀಡಿದ್ದರು. ಜ.29ರಂದು ತಮ್ಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ಬಳಿಕ ಅವರು ಪಕ್ಷಾತೀತವಾದ ಆಯೋಗದ ಹುದ್ದೆಯಿಂದ ಮುಕ್ತರಾಗಿದ್ದಾರೆ. ಆದರೆ ಅವರು ಕಾಂಗ್ರೆಸ್‌ಗೆ ಹೋಗುವುದಾಗಲೀ, ಚುನಾವಣೆ ಸ್ಪರ್ಧಿಸುವ ಬಗ್ಗೆಯಾಗಲೀ ತಿಳಿದಿಲ್ಲ ಎಂದು ಪ್ರತಿಕ್ರಿಯಿಸಿದರು.

ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್‌ ನೀಡುವ ವಿರುದ್ಧ ಬಿಜೆಪಿ ಕಾರ್ಯಕರ್ತರಿಂದಲೇ ಚಳವಳಿ ನಡೆಯುತ್ತಿರುವ ಕುರಿತು ಪ್ರತಿಕ್ರಿಯಿಸಿದ ಕೋಟ, ರಾಜಕಾರಣದಲ್ಲಿ ಇದೆಲ್ಲ ಸ್ವಾಭಾವಿಕ. ಅಂತಿಮವಾಗಿ ಟಿಕೆಟ್‌ ಯಾರಿಗೆ ನೀಡಬೇಕು ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ ಎಂದರು.ರಾಜ್ಯದಲ್ಲಿ ಭೀತಿ ವಾತಾವರಣ:

ರಾಜ್ಯದಲ್ಲಿ ಬಾಂಬ್‌ ಸ್ಫೋಟ ಮತ್ತು ಪಾಕಿಸ್ತಾನ್‌ ಜಿಂದಾಬಾದ್‌ ಪ್ರಕರಣಗಳಿಂದಾಗಿ ಅಭದ್ರತೆ, ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಕಾಂಗ್ರೆಸ್‌ ಸರ್ಕಾರ ತಮಗೆ ಸಹಾನುಭೂತಿ ತೋರಿಸುತ್ತದೆ ಎಂಬ ಭಾವನೆ ಭಯೋತ್ಪಾದಕರು ಮತ್ತು ರಾಷ್ಟ್ರ ವಿರೋಧಿಗಳಿಗೆ ಬಂದಿರುವುದರಿಂದ ಇಂತಹ ಕೃತ್ಯಗಳು ಹೆಚ್ಚಿವೆ ಎಂದು ಕೋಟ ಆರೋಪಿಸಿದರು.

ಬಾಂಬ್‌ ಸ್ಫೋಟದ ಆರೋಪಿಗಳನ್ನು ಇನ್ನೂ ಬಂಧಿಸದೆ ಇರುವುದನ್ನು ನೋಡಿದರೆ ರಾಷ್ಟ್ರ ವಿರೋಧಿಗಳ ಬಗ್ಗೆ ಸರ್ಕಾರ ಮೃದು ಧೋರಣೆ ತಾಳಿದಂತಿದೆ. ಸರ್ಕಾರಕ್ಕೆ ಕೊಂಚವೂ ಸಂಕೋಚ ಆಗಿಲ್ಲವೇ ಎಂದು ಪ್ರಶ್ನಿಸಿದರು.ಇದಾ ಸಮೃದ್ಧ ಕರ್ನಾಟಕ?: ಸಿದ್ದರಾಮಯ್ಯ ಅವರು ಸಮೃದ್ಧ ಕರ್ನಾಟಕ ಮಾಡುತ್ತೇವೆ ಎಂದಿದ್ದರು. ಸಮೃದ್ಧ ಕರ್ನಾಟಕ ಎಂದರೆ ವಿಧಾನಸೌಧದಲ್ಲಿ ರಾಷ್ಟ್ರ ವಿರೋಧಿ ಘೋಷಣೆ ಕೂಗುವುದಾ? ಬಾಂಬ್‌ ಸ್ಫೋಟ ಮಾಡುವುದಾ ಎಂಬ ಬಗ್ಗೆ ಅವರು ಹೇಳಿಕೆ ನೀಡಲಿ ಎಂದರು.

ಬಿಜೆಪಿ ಸರ್ಕಾರವಿದ್ದಾಗಲೂ ಬಾಂಬ್‌ ಸ್ಫೋಟ ಪ್ರಕರಣಗಳು ನಡೆದಿರುವ ಕುರಿತು ಕಾಂಗ್ರೆಸ್‌ ಮುಖಂಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಸರ್ಕಾರವಿದ್ದಾಗ ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟವಾಗಿತ್ತು. ಆ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಮಂಜುಳಾ ರಾವ್‌, ಮನೋಹರ್‌ ಕದ್ರಿ, ವಸಂತ ಪೂಜಾರಿ ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ