ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಅಂಬೇಡ್ಕರ್ ಜಯಂತಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅಂಬೇಡ್ಕರ್ ಅವರನ್ನು ಕೇವಲ ರಾಜಕೀಯ ದೃಷ್ಟಿಯಿಂದ ನೋಡದೆ ಅವರ ವ್ಯಕ್ತಿತ್ವ, ಸಾಧನೆಯನ್ನು ಪ್ರತಿಯೊಬ್ಬರು ಗಮನಿಸಿ ತಮ್ಮಲ್ಲಿ ಅಳವಡಿಸಿಕೊಂಡು ಅವರನ್ನು ಸ್ಮರಿಸಿ ಗೌರವಿಸಬೇಕು ಎಂದು ಮಾಜಿ ಸಚಿವ ಮಾಧುಸ್ವಾಮಿ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಎಸ್.ಸಿ. ಮೋರ್ಚಾ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಭಾರತ ರತ್ನ ಡಾ. ಬಿ. ಆರ್ ಅಂಬೇಡ್ಕರ್ ಯಾವುದೇ ಒಂದು ವರ್ಗಕ್ಕೆ ಸೀಮಿತರಾದವರಲ್ಲ. ಅವರನ್ನು ಕೇವಲ ರಾಜಕೀಯ ದೃಷ್ಟಿಯಿಂದ ನೋಡದೆ ಅವರ ವ್ಯಕ್ತಿತ್ವ, ಸಾಧನೆಯನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದ ಶೋಷಿತ ವರ್ಗದಲ್ಲಿ ಜನಿಸಿ ಬೆಳೆದು ಬಂದ ಹಾದಿ ಪ್ರತಿಯೊಬ್ಬರಿಗೂ ದಾರಿದೀಪವಾಗಬೇಕು ಎಂದರು.ಶಿಕ್ಷಣ, ಸಂಘಟನೆ, ಹೋರಾಟ ಎಂಬ ಅವರ ಘೋಷ ವಾಕ್ಯದಿಂದ ಪ್ರತಿಯೊಬ್ಬರು ಪ್ರೇರಿತರಾಗಬೇಕು. ಕೇವಲ ಶ್ರೀಮಂತರು ಮೇಲ್ವರ್ಗದವರಿಗೆ ಮಾತ್ರವಲ್ಲದೆ ಸಮಾಜದ ಶೋಷಿತ ಹಾಗೂ ಬಡ ವರ್ಗದವರಿಗೂ ಮತ ಚಲಾಯಿಸುವ ಹಕ್ಕನ್ನು ಸಂವಿಧಾನದ ಮೂಲಕ ಅವಕಾಶ ಕಲ್ಪಿಸಿದ್ದು ಸಮಾಜದಲ್ಲಿ ಸಮಾನತೆ ಕಾಪಾಡುವಲ್ಲಿ ಅವರ ಪಾತ್ರ ಬಹುಮುಖ್ಯ ಎಂದು ತಿಳಿಸಿದರು.ಅಂಬೇಡ್ಕರ್ ಸಂವಿಧಾನ ರಚಿಸುವ ಸಂದರ್ಭದಲ್ಲಿ ಅನೇಕ ಅವಮಾನದ ಮಾತುಗಳನ್ನು ವಿರೋಧಗಳನ್ನು ಎದುರಿಸಿ ದ್ದಾರೆ. ಒತ್ತಡಗಳ ನಡುವೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವೆಂದು ಗುರುತಿಸಿಕೊಳ್ಳಲು ಅಂಬೇಡ್ಕರ್ ಅವರ ಶ್ರಮ ಬಹಳಷ್ಟಿದೆ. ಶಾಸನ ಹಾಗೂ ಕಾನೂನು ರಚನೆ ಸುಲಭದ ಮಾತಲ್ಲ ಅನೇಕ ಅಡೆತಡೆಗಳ ನಡುವೆಯೂ ಅಂತಿಮವಾಗಿ ಭಾರತಕ್ಕೆ ಅತಿ ದೊಡ್ಡ ಸಂವಿಧಾನ ರಚಿಸಿ ಕೊಟ್ಟಿರುವ ಅವರನ್ನು ಪ್ರತಿಯೊಬ್ಬರೂ ಪೂಜ್ಯ ಭಾವದಿಂದ ಗೌರವಿಸಬೇಕು ಎಂದರು.
ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್ ಮಾತನಾಡಿ, ಅಂಬೇಡ್ಕರ್ ಭಾರತದ ಮಹಾನ್ ವ್ಯಕ್ತಿ. ಗಾಂಧಿ ಕುಟುಂಬದವರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ನೂರಾರು ಎಕರೆ ಭೂಮಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಆದರೆ ದೇಶಕ್ಕೆ ಸಂವಿಧಾನ ತಂದುಕೊಟ್ಟ ಬಾಬಾ ಸಾಹೇಬರ ಅಂತ್ಯಕ್ರಿಯೆಗೆ ಜಾಗ ನೀಡಲಿಲ್ಲ ಎಂದು ದೂರಿದರು.ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಕಲ್ಮರುಡಪ್ಪ ಮಾತನಾಡಿ, ಅಂಬೇಡ್ಕರ್ ಕರಗುವ ಮಣ್ಣಲ್ಲ, ನದಿಯ ದಿಕ್ಕನ್ನೇ ಬದಲಾಯಿಸುವ ಕಲ್ಲು ಬಂಡೆ ಎಂಬ ಅವರ ಮಾತಿನಂತೆ ದೇಶದ ಜನರ ಸಾಮಾಜಿಕ ಮತ್ತು ಕಾನೂನು ರೀತಿಯ ದಿಕ್ಕನ್ನೇ ಬದಲಾಯಿಸಿದ ಮಹಾನ್ ವ್ಯಕ್ತಿ ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸುವುದು ಕೇವಲ ದಲಿತ ಸಮಾಜಕ್ಕೆ ಮೀಸಲಾಗಬಾರದು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ ಮಾತನಾಡಿ, ಕಾಂಗ್ರೆಸ್‌ನವರು 1952 ರ ಚುನಾವಣೆಯಲ್ಲಿ ಅಂಬೇಡ್ಕರ್ ರನ್ನು ಸೋಲಿಸಿ ಅಧಿಕಾರಕ್ಕೆ ಬಾರದಂತೆ ಮಾಡಿದರು. ಅಂಬೇಡ್ಕರ್ ಅವರೊಂದಿಗೆ ಚುನಾವಣೆ ಏಜೆಂಟರಾಗಿ ಕೆಲಸ ನಿರ್ವಹಿಸಿದ ಬಿಜೆಪಿ ಮೂಲದ ಜನಸಂಘದವರನ್ನು ಅಂಬೇಡ್ಕರ್ ವಿರೋಧಿಗಳೆಂದು ಬಿಂಬಿಸುತ್ತಿದ್ದಾರೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಿ.ಆರ್.ಪ್ರೇಮ್‌ಕುಮಾರ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಜಸಂತ ಅನಿಲ್‌ಕುಮಾರ್, ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಮುಖಂಡರಾದ ಕೋಟೆ ರಂಗನಾಥ್, ಕೇಶವ, ಕಬೀರ್‌ಖಾನ್ ಹಾಜರಿದ್ದರು. 14 ಕೆಸಿಕೆಎಂ 2ಚಿಕ್ಕಮಗಳೂರು ಬಿಜೆಪಿ ಕಚೇರಿಯಲ್ಲಿ ಎಸ್.ಸಿ. ಮೋರ್ಚಾ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಧುಸ್ವಾಮಿ ಪುಷ್ಪಾರ್ಚನೆ ಸಲ್ಲಿಸಿದರು. ದೇವರಾಜ್ ಶೆಟ್ಟಿ, ಪ್ರೇಮ್್‌ಕುಮಾರ್, ಕಲ್ಮರುಡಪ್ಪ, ಕೋಟೆ ರಂಗನಾಥ್ ಇದ್ದರು.