ಕನ್ನಡಪ್ರಭವಾರ್ತೆ ಚಿತ್ರದುರ್ಗ
ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆಗೆ ಒಳಗಾಗಿ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬಾರದೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಹೇಳಿದರು.ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಡ್ರಗ್ಸ್ ಸೇವನೆಯಿಂದಾಗುವ ದುಷ್ಪಾರಿಣಾಮಗಳು ಮತ್ತು ಎನ್.ಡಿಪಿಎಸ್ ಕಾಯ್ದೆ ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಐಟಿಐ ವಿದ್ಯಾರ್ಥಿಗಳಿಂದ ಮಾದಕ ವಸ್ತುಗಳ ಸೇವನೆ ತ್ಯಜಿಸುವಂತೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಅವರು, ಭಾರತವು ಕೃಷಿ ಪ್ರಧಾನ ದೇಶವಾಗಿದೆ. ಅಭಿವೃದ್ಧಿಯಲ್ಲಿ ಕೈಗಾರಿಕೆಯ ಪಾತ್ರ ಮಹತ್ವದ ಆಗಿರುತ್ತದೆ ಎಂದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಜಿ.ಓ.ನಾಗರಾಜ್ ಮಾತನಾಡಿ, ಯಾರೂ ಕೂಡ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗಬಾರದು. ಹಾಗೊಂದು ವೇಳೆ ಮಾದಕ ವಸ್ತುಗಳ ಸೇವನೆಗೆ ಒಳಗಾದಲ್ಲಿ ಶೀಘ್ರ ಹೊರಬನ್ನಿ. ಮನೋವೈದ್ಯರಿಂದ ಚಿಕಿತ್ಸೆ ಪಡೆಯಬಹುದು. 14416 ನಂಬರಿಗೆ ಉಚಿತ ಕರೆ ಮಾಡಿ ಆಪ್ತ ಸಮಲೋಚನೆ ಪಡೆಯಬಹುದು ಎಂದು ತಿಳಿಸಿದರು.ಜಿಲ್ಲಾ ವಕೀಲರ ಸಂಘ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಮಾತನಾಡಿ, ದೇಶದಲ್ಲಿ 50ಕ್ಕಿಂತ ಹೆಚ್ಚು ಯುವಕರ ಸಂಖ್ಯೆ ಇದೆ. 18 ರಿಂದ 20 ವಯಸ್ಸಿನವರು ಹೆಚ್ಚಾಗಿ ಮಾದಕ ವಸ್ತುಗಳ ಸೇವನೆಗೆ ಒಳಗಾಗುತ್ತಿದ್ದು, ಇದನ್ನು ತಡೆಯಬೇಕು ಎಂದು ತಿಳಿಸಿದರು.
ಚಿಕ್ಕಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಆರ್.ಮಂಜುನಾಥ್ ಮಾತನಾಡಿ, ಮಾದಕ ವಸ್ತುಗಳಲ್ಲಿ ಮೆದುಳಿನಲ್ಲಿ ಕ್ಷಣಿಕ ಸುಖ ನೀಡುವ ಹಾರ್ಮೋನ್‍ಅನ್ನು ಬಿಡುಗಡೆಗೊಳಿಸುವ ಹಾನಿಕಾರಕ ರಾಸಾಯನಿಕಗಳಿವೆ. ಇವುಗಳು ಮನುಷ್ಯನನ್ನು ಮಾದಕ ವಸ್ತುಗಳ ವ್ಯಸನಕ್ಕೆ ದಾಸನನ್ನಾಗಿ ಮಾಡಿಸುತ್ತವೆ. ಮಾದಕ ವಸ್ತುಗಳ ಸೇವನೆಯಿಂದ ಹಲವಾರು ದೈಹಿಕ ಮತ್ತು ಮಾನಸಿಕ ಕಾಯಿಲೆಗಳು ಬರುವುದರಿಂದ ಆರೋಗ್ಯದ ಹಿತದೃಷ್ಟಿಯಿಂದ ಮಾದಕ ವಸ್ತುಗಳಿಂದ ದೂರವಿರಲು ತಿಳಿಸಿದರು.ಉಪ ಪ್ರಧಾನ ಕಾನೂನು ನೆರವು ಅಭಿರಕ್ಷಕ ಎಂ.ಮೂರ್ತಿ ಅವರು ಎನ್‍ಡಿಪಿಎಸ್ ಕಾಯ್ದೆ ಕುರಿತು ವಿದ್ಯಾರ್ಥಿಗಳಿಗೆ ಸಂಕ್ಷಿಪ್ತವಾಗಿ ವಿವರಿಸಿದರು. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಬಿ.ಸುರೇಶ್ , ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಕಿರಿಯ ತರಬೇತಿ ಅಧಿಕಾರಿಗಳಾದ ಸತೀಶ್, ಆರ್.ತಿಮ್ಮಣ್ಣ, ಮಹಮದ್ ಕಾಜಾಹುಸೇನ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಮಂಜುನಾಥ್, ಮೂಗಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಪ್ರವೀಣ್, ವೈ.ತಿಪ್ಪೇಶ್. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಕ್ಲಿನಿಕಲ್ ಸೈಕಾಲಜಿಸ್ಟ್ ಟಿ.ಶ್ರೀಧರ್ ಸೇರಿದಂತೆ ಮತ್ತಿತರರು ಇದ್ದರು.