ಶಿವಮೊಗ್ಗ: ಎಲ್ಲಾ ದಾನಗಳಿಗಿಂತ ರಕ್ತದಾನ ತುಂಬಾ ಶ್ರೇಷ್ಠವಾದ ದಾನ. ರಕ್ತದಾನಕ್ಕಿಂತ ಅನ್ಯದಾನ ಬೇರೊಂದಿಲ್ಲ. ರಕ್ತದಾನದಿಂದ ಸದಾ ಲವವಲವಿಕೆಯಿಂದ ಇರುವುದರ ಜೊತೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿಯ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಹೇಳಿದರು.
ಇಲ್ಲಿನ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಸಭಾಂಗಣದಲ್ಲಿ ಡಾ.ರಾಜಕುಮಾರ್ ಅವರ ಜನ್ಮದಿನ ಅಂಗವಾಗಿ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಕ್ತದಾನದಿಂದ ಶೇ.80ರಷ್ಟು ಹೃದಯಘಾತ ಕಡಿಮೆಯಾಗುತ್ತದೆ. ರಕ್ತದಾನಿಗಳು ಸಮಾಜದ ನಿಜವಾದ ಹೀರೋಗಳು ಎಂದರು.ಇಂದು ರಕ್ತದ ಕೊರತೆ ಸಾಕಷ್ಟು ಇದೆ. ಸಕಾಲದಲ್ಲಿ ರಕ್ತ ಸಿಗದೇ ಸಾಕಷ್ಟು ಜನ ಪ್ರಾಣವನ್ನು ಬಿಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಯುವಕರು, ಯುವತಿಯರು ರಕ್ತದಾನ ಮಾಡಿ ಸದೃಢವಾದ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ಕರೆ ನೀಡಿದರು.ಟಿ.ಆರ್.ಅಶ್ವಥ್ ನಾರಾಯಣ ಶೆಟ್ಟಿ ಮಾತನಾಡಿ, ಮೂಢನಂಬಿಕೆಯಿಂದ ಹೊರ ಬಂದು ರಕ್ತದಾನ ಮಾಡಿ ಇನ್ನೊಬ್ಬರ ಪ್ರಾಣ ಉಳಿಸುವ ಪುಣ್ಯದ ಕೆಲಸದಲ್ಲಿ ನಾವು ನೀವೆಲ್ಲರೂ ಪಾಲ್ಗೊಳ್ಳೋಣ. ಎಲ್ಲಾ ದಾನಗಳಿಗಿಂತ ರಕ್ತದಾನ ಶ್ರೇಷ್ಠದಾನ ಎಂದು ನುಡಿದರು.ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಜಿ.ವಿಜಯ್ ಕುಮಾರ್ ಮಾತನಾಡಿ, ನಿಜವಾದ ಮನುಕುಲದ ಸೇವೆಯನ್ನು ಇಂದು ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಮಾಡುತ್ತಿದೆ ಎಂದ ಅವರು, ಡಾ.ರಾಜ್‌ಕುಮಾರ್ ಅವರು ಕನ್ನಡ ಚಿತ್ರರಂಗದ ಆಸ್ತಿ. ಅವರ ಹೋರಾಟಗಳು ಇಂದಿಗೂ ಜನಮಾನಸದಲ್ಲಿ ಇವೆ. ಅವರ ಹುಟ್ಟುಹಬ್ಬವನ್ನು ರಕ್ತದಾನದ ಮುಖಾಂತರ ಮಾಡುತ್ತಿರುವುದು ಪ್ರಶಂಸನೀಯ ಸಂಗತಿ ಎಂದು ಶ್ಲಾಘಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಮಮತಾ.ಪಿ.ಆರ್ ಮಾತನಾಡಿ, ಇಂದು ರಕ್ತದಾನ ಹಾಗೂ ನೇತ್ರ ತಪಾಸಣಾ ಶಿಬಿರವನ್ನು ಶಂಕರ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ಇಂತಹ ಪವಿತ್ರ ಕಾರ್ಯದಲ್ಲಿ ನಮ್ಮ ಮಕ್ಕಳು ಪಾಲ್ಗೊಳ್ಳುತ್ತಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಕಾಲೇಜಿನಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ರಕ್ತದಾನ ಮಾಡುವಂತೆ ಅವರಿಗೆ ಮನವರಿಸಲಾಗುವುದು ಎಂದರು.ವೇದಿಕೆಯಲ್ಲಿ ಪ್ರೊ.ಕೆ.ಎಂ.ನಾಗರಾಜ್, ಮೆಗ್ಗಾನ್ ಆಸ್ಪತ್ರೆಯ ವೈದ್ಯರಾದ ಪ್ರದೀಪ್, ಡಾ.ಪ್ರದೀಮ್ಯ, ಶೃತಿ.ಕೆ, ಸೌಪರ್ಣಿಕ ಉಮೇಶ್ ಹಾಗೂ ಶಂಕರ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.