ಕನ್ನಡ ಪರವಾನಗಿ ಪಡೆದು ಇಂಗ್ಲಿಷ್‌ ಬೋಧನೆ ಬೇಡ: ಸಾಹಿತಿ ಡಾ. ಎಸ್.ಆರ್. ಗುಂಜಾಳ

KannadaprabhaNewsNetwork | Published : Feb 4, 2025 12:31 AM

ಸಾರಾಂಶ

ಸರ್ಕಾರಕ್ಕೆ ಮೋಸ ಮಾಡಿದ ೧೪೧೬ ಶಾಲೆಗಳ ಆಡಳಿತ ಮಂಡಳಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಿಸಲು ಕೂಡಲೇ ಸರ್ಕಾರವು ಮುಂದಾಗಬೇಕು ಎಂದು ಸಾಹಿತಿ ಡಾ. ಎಸ್.ಆರ್. ಗುಂಜಾಳ ಹೇಳಿದರು.

ಧಾರವಾಡ:

ಕನ್ನಡ ಮಾಧ್ಯಮದ ಶಾಲೆ ನಡೆಸಲು ಪರವಾನಗಿ ಪಡೆದು, ಇಂಗ್ಲಿಷ್ ಬೋಧಿಸುವ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳಬೇಕಾಗಿದೆ ಎಂದು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ಸಾಹಿತಿ ಡಾ. ಎಸ್.ಆರ್. ಗುಂಜಾಳ ಸರ್ಕಾರಕ್ಕೆ ಆಗ್ರಹಿಸಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಸೋಮವಾರದಿಂದ ಪ್ರಾರಂಭವಾದ ಧಾರವಾಡ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರಕ್ಕೆ ಮೋಸ ಮಾಡಿದ ೧೪೧೬ ಶಾಲೆಗಳ ಆಡಳಿತ ಮಂಡಳಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಿಸಲು ಕೂಡಲೇ ಸರ್ಕಾರವು ಮುಂದಾಗಬೇಕು ಎಂದು ಆಗ್ರಹಿಸಿದರು.

ಪ್ರಾಥಮಿಕ ಶಿಕ್ಷಣದಲ್ಲಿ ಮಾಧ್ಯಮದ ಪ್ರಶ್ನೆ ಇನ್ನೂ ಚರ್ಚೆಯ ಹಂತದಲ್ಲಿದೆ. ಅದು ಶಿಕ್ಷಣ ತಜ್ಞರು ಹಾಗೂ ಬುದ್ಧಿ ಜೀವಿಗಳು ನಿರ್ಣಯ ಮಾಡಬೇಕಾದ ಸಂಗತಿ. ಆದರೆ, ಸನ್ನಿವೇಶದ ಲಾಭ ಪಡೆದವರು ಹಾಡುಹಗಲೇ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಹಣ ಮಾಡಿಕೊಳ್ಳಲು ಹೊರಟಿರುವುದು ನಾಗರಿಕ ಸಮಾಜದ ನಡುವಣ ಹಗಲು ದರೋಡೆ ಎಂದೇ ಹೇಳಬೇಕು ಎಂದರು.

ಮಾತೃಭಾಷಾ ಶಿಕ್ಷಣ ಮಾಧ್ಯಮದ ವಿರುದ್ಧವಾಗಿ ಹೈಕೋರ್ಟ್ ನೀಡಿರುವ ತೀರ್ಪು ಕನ್ನಡ ನಾಡಿನ ಮಕ್ಕಳ ಪ್ರಾಥಮಿಕ ಶಿಕ್ಷಣದ ಮೂಲ ಆಶಯವನ್ನೇ ಮೂಲೆಗೊತ್ತಿತ್ತು. ಪ್ರಾಥಮಿಕ ಹಂತದಲ್ಲಿ ಆಂಗ್ಲ ಭಾಷೆಯಿಂದ ಕನ್ನಡ ಭಾಷೆಗೆ ಅಪಾಯವಿರುವುದು ಭ್ರಮೆಯಲ್ಲ, ವಾಸ್ತವ ಸಂಗತಿ. ಇಂಗ್ಲಿಷ್ ಕಲಿಕೆ ಅಪರಾಧವಲ್ಲ, ಅಷ್ಟೇ ಅಲ್ಲ, ಅವಶ್ಯ ಕೂಡ. ನಾಲ್ಕನೇ ತರಗತಿ ವರೆಗೆ ಕನ್ನಡ ಅಥವಾ ಮಾತೃಭಾಷಾಯ ಮೂಲಕವೇ ಕಲಿಯುವುದರಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ತಳಹದಿ ಗಟ್ಟಿಯಾಗಿಯಾಗಲಿದೆ ಎಂದು ಹೇಳಿದರು.

ಕರ್ನಾಟಕದ ಸಮಗ್ರ ಅಭಿವೃದ್ಧಿಯ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಡಾ. ಡಿ.ಎಂ. ನಂಜುಂಡಪ್ಪ ವರದಿಯನ್ನು ಕಾರ್ಯಗತಗೊಳಿಸಬೇಕು. ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪನವರು ಶಿಕ್ಷಣ ಹಾಗೂ ಆಡಳಿತ ಕ್ಷೇತ್ರಗಳ ಕುರಿತಾಗಿ ಸಲ್ಲಿಸಿದ ವರದಿ ಹಾಗೂ ಸೂಚನೆಗಳನ್ನು ಕೂಡಲೇ ಕಾರ್ಯಗತಗೊಳಿಸಬೇಕಾಗಿದೆ. ಅಶೋಕ ಚಂದರಗಿ ಅವರು ಗಡಿ ಶಾಲೆಗಳ ಸುಧಾರಣೆಗಾಗಿ ನೀಡಿರುವ ವರದಿಯನ್ನು ಕೂಡಲೇ ಜಾರಿಗೆ ತರುವ ಅನಿವಾರ್ಯತೆ ತುಂಬಾ ಇದೆ ಎಂದು ಒತ್ತಾಯಿಸಿದರು.

ಆಂಗ್ಲ ಮಾಧ್ಯಮ ಶಾಲೆಗಳು ನಾಯಿಕೊಡೆಗಳಂತೆ ರಾಜ್ಯಾದ್ಯಂತ ಬೆಳೆಯುತ್ತಿವೆ. ಕರ್ನಾಟಕದಲ್ಲಿ ಕನ್ನಡವೇ ಮಾತೃಭಾಷೆಯ ಸ್ಥಾನದಲ್ಲಿರಬೇಕು. ಇಂಗ್ಲಿಷ್ ಬೇಕಾದರೆ ಒಂದು ಭಾಷೆಯಾಗಿ ಕಲಿಸಲು ಸಾಧ್ಯವಾಗಬೇಕು. ಸಾಹಿತ್ಯ ವಲಯದಲ್ಲಿನ ಗುಂಪುಗಾರಿಕೆ, ರಾಜಕೀಯ ವಲಯದ ಗುಂಪುಗಾರಿಕೆಯಂತೆಯೇ ಇದೆ. ಇಂಥ ಗುಂಪುಗಾರಿಕೆಯಿಂದ ನಾವು ಹೊರಗಿರಬೇಕು. ಸ್ವಾರ್ಥ ಮತ್ತು ಸಂಕೋಚಗಳನ್ನು ಮೀರಿದ ಸಂಬಂಧಗಳನ್ನು ಸ್ಥಾಪಿಸಿಕೊಳ್ಳಬೇಕಾದ ಅಗತ್ಯತೆ ಇದೆ ಎಂದು ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಬದುಕು ತುಂಬಾ ಯಾಂತ್ರಿಕವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯಿಂದ ದೇಶ ಒಂದು ನಿಟ್ಟಿನಲ್ಲಿ ಸಮೃದ್ಧವಾದಂತೆ ಕಂಡರೂ ಮಾನವೀಯ ಮೌಲ್ಯಗಳು ಕುಸಿದು ಹೋಗಿವೆ. ಅಧಿಕಾರ ಮತ್ತು ಹಣದ ದಾಹದಿಂದ ಮನುಷ್ಯ ತನ್ನತನದಿಂದ ಕಂಗಾಲಾಗಿದ್ದಾನೆ. ಕಲೆ, ಭಾಷೆ, ಸಾಹಿತ್ಯ ಮುಂತಾದ ವಿಷಯಗಳು ಗೌಣವಾಗಿವೆ. ಇದರಿಂದ ಮಾನವ ಸಂವೇದನಗಳು ಇಲ್ಲದಂತಾಗಿವೆ. ಈ ನಿಟ್ಟಿನಲ್ಲಿ ನಮ್ಮ ಬರಹಗಾರರು ವಿಚಾರ ಮಾಡಬೇಕಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.

Share this article